ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮಾಚರಣೆ ನಡೆಯುವಾಗ ಉಂಟಾದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟು ಹಲವರು ಗಾಯಗೊಂಡ ದುರಂತಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಣ್ಣೀರಿಟ್ಟಿದ್ದಾರೆ.
ಈ ಅವಘಡ ಕುರಿತು ಪ್ರತಿಕ್ರಿಯಿಸಿದ ಅವರು ಬದುಕಿ ಬಾಳಬೇಕಿದ್ದ ನಮ್ಮ ಮನೆಯ ಮಕ್ಕಳು ಕಾಲ್ತುಳಿತಕ್ಕೆ ಬಲಿಯಾಗಿರುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ನಮ್ಮ ರಾಜ್ಯದಲ್ಲಿ ಇಂತಹ ದುರ್ಘಟನೆ ನಡೆಯುತ್ತದೆ ಎಂದು ನಾವು ಯಾರೂ ಊಹಿಸಿರಲಿಲ್ಲ. ಈ ದುರಂತದಿಂದ ಜೀವಹಾನಿಯಾಗಿದೆ. ಬೆಂಗಳೂರು ಹಾಗೂ ಕರ್ನಾಟಕ ರಾಜ್ಯದ ಘನತೆಗೆ ಚ್ಯುತಿ ಉಂಟಾಗಿದೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಮಾಡಿ ಲೋಪದೋಷ ಸರಿಪಡಿಸಲಾಗುವುದು. ಇದರಿಂದ ನಾವು ಪಾಠವನ್ನು ಕಲಿಯಬೇಕಿದೆ ಎಂದು ಹೇಳಿದ್ದಾರೆ.
ಈ ದುರಂತ ನಮ್ಮ ಕುಟುಂಬದಲ್ಲೇ ನಡದಿದೆ ಎಂದು ಭಾವಿಸಿದ್ದೇವೆ. ದುರ್ಘಟನೆಯಲ್ಲಿ ಮೃತಪಟ್ಟವರು ನಮ್ಮ ಮನೆಯವರೇ ಎಂಬ ನೋವು ರಾಜ್ಯದಲ್ಲಿ ತುಂಬಿದೆ. ಈ ನೋವನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಸತ್ತವರು ನಮ್ಮ ಕುಟುಂಬದ ಸದಸ್ಯರು. ಈ ಪರಿಸ್ಥಿತಿಯಲ್ಲಿ ನಾವು ಸಂತಾಪ ಸೂಚಿಸಬೇಕು. ರಾಜಕೀಯ ಮಾಡಬಾರದು ಎಂದು ವಿನಂತಿಸಿದ್ದಾರೆ.
ಬಿಜೆಪಿಯವರು ಹೆಣಗಳ ಮುಂದೆ ರಾಜಕೀಯ ಮಾಡುವುದಾದರೆ ಅವರು ಎಷ್ಟು ಹೆಣಗಳ ಮುಂದೆ ರಾಜಕೀಯ ಮಾಡಿದ್ದಾರೆ ಎಂಬುದರ ಪಟ್ಟಿ ನೀಡಲು ಸಿದ್ಧನಿದ್ದೇನೆ. ದುರಂತಕ್ಕೂ ಮುನ್ನ ವಿಜಯಯಾತ್ರೆಗೆ ಒತ್ತಾಯಿಸಿದ ಬಿಜೆಪಿ, ಅದು ನಡೆದಿದ್ದರೆ ಏನಾಗುತಿತ್ತು ಎಂದು ಪ್ರಶ್ನಿಸಿತ್ತು. ಈಗ ವಿಜಯಯಾತ್ರೆ ನಡೆಸದೆ ಕಾಲ್ತುಳಿತ ಉಂಟಾಗಿದೆ. ಒಂದು ವೇಳೆ ವಿಜಯ ಯಾತ್ರೆ ನಡೆದಿದ್ದರೆ ಪರಿಸ್ಥಿತಿ ಏನಾಗುತಿತ್ತೋ ? ಎಂದು ಆತಂಖ ವ್ಯಕ್ತಪಡಿಸಿದ್ದಾರೆ.
ಮಗನ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸದೆ ಶವವನ್ನು ಕೊಡುವಂತೆ ಮಹಿಳೆಯೊಬ್ಬರು ಮನವಿ ಮಾಡಿಕೊಂಡಿದ್ದಾರೆ. ಆದರೆ, ಮರಣೋತ್ತರ ಪರೀಕ್ಷೆ ನಡೆಸದೆ ಇರಲು ಸಾಧ್ಯವಿಲ್ಲ ಎಂದು ತಿಳಿಸಿದರು.