ಮೈಸೂರು: ಬೂಕರ್ ಪ್ರಶಸ್ತಿ ಪುರಸ್ಕೃತೆ ಸಾಹಿತಿ ಬಾನು ಮುಷ್ತಾಕ್ ಅವರು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ಉತ್ಸವಮೂರ್ತಿಗೆ ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬ ಮೈಸೂರು ದಸರಾ– 2025 ಕ್ಕೆ ಚಾಲನೆ ನೀಡಿದರು. ಈ ಮೂಲಕ 11 ದಿನಗಳ ಮೈಸೂರು ದಸರಾ ಕಾರ್ಯಕ್ರಮಗಳಿಗೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಬಾನು ಮುಷ್ತಾಕ್ ಅವರು ಹಳದಿ ಸೀರೆ ಮತ್ತು ಹಸಿರು ಕುಪ್ಪಸ ತೊಟ್ಟು ಅಪ್ಪಟ ಭಾರತೀಯ ಹೆಣ್ಣುಮಗಳಂತೆ ಕಂಗೊಳಿಸುತ್ತಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಸಚಿವ ಎಚ್.ಕೆ.ಪಾಟೀಲ್, ಶಿವರಾಜ ತಂಗಡಗಿ, ಮೂಸೂರ ಚಾಮರಾಜನಗರ ಜಿಲ್ಲೆ ಸಂಸದರು, ಶಾಸಕರು ಭಾಗವಹಿಸಿದ್ದರು.
ಇದಕ್ಕೂ ಮುನ್ನ ಬಾನು ಮುಷ್ತಾಕ್ ಅವರನ್ನು ಜಿಲ್ಲಾಡಳಿತ ಬಿಗಿ ಭದ್ರತೆಯೊಂದಿಗೆ ಬೆಟ್ಟಕ್ಕೆ ಕರೆ ತಂದರು.
ಅರಮನೆ ನಗರಿ ಮೈಸೂರು ಅಲಂಕೃತಗೊಂಡಿದ್ದು, ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿದೆ. ಇಂದಿನಿಂದ 10 ದಿನ ನವರಾತ್ರಿ ಉತ್ಸವ ನಡೆಯಲಿದೆ.
ಭಾನು ಮುಷ್ತಾಕ್ ಚಾಮುಂಡೇಶ್ವರಿ ದೇವಾಲಯದ ಅರ್ಚಕರು ನೀಡಿದ ಹೂವಿನ ಹಾರ ಸ್ವೀಕರಿಸಿ ಮಂಗಳಾರತಿ ಸ್ವೀಕರಿಸಿದರು. ಈ ಮೂಲಕ ತಮ್ಮ ಟೀಕಾಕಾರರಿಗೆ ಪರೋಕ್ಷವಾಗಿ ಉತ್ತರ ನೀಡಿದರು.