ಕುಂಭಮೇಳನಗರ: ಉತ್ತರಪ್ರದೇಶದ ಕುಂಭಮೇಳದಲ್ಲಿ ಮೌನಿ ಅಮಾವಾಸ್ಯೆಯ ದಿನವಾದ ಇಂದು ಪ್ರಯಾಗರಾಜ್ನ ಸಂಗಮ ಪ್ರದೇಶದಲ್ಲಿ ತಡರಾತ್ರಿ ಕಾಲ್ತುಳಿತ ಸಂಭವಿಸಿದ್ದು 10-15 ಭಕ್ತರು ಮೃತಪಟ್ಟಿದ್ದಾರೆ ಎಂಬ ವರದಿಗಳು ಅಲ್ಲಲ್ಲಿ ಕೇಳಿ ಬರುತ್ತಿವೆ. ಆದರೆ ಕೇಂದ್ರ ಅಥವಾ ಉತ್ತರ ಪ್ರದೇಶ ಸರ್ಕಾರಗಳು ಸಾವು ನೋವಿನ ಮಾಹಿತಿಯನ್ನು ಖಚಿತಪಡಿಸಿಲ್ಲ. ವಿಶೇಷವಾಗಿ ವಿದೇಶಿ ಮಾಧ್ಯಮಗಳು 10-15 ಭಕ್ತರು ಮೃತಪಟ್ಟಿದ್ದಾರೆ ಎಂದು ವರದಿ ಮಾಡಿವೆ. ಆದರೆ ಭಾರತೀಯ ಮಾಧ್ಯಮಗಳು ಸಾವುನೋವನ್ನು ಕುರಿತು ಯಾವುದೇ ವರದಿಗಳನ್ನು ಪ್ರಚಾರ ಮಾಡಿಲ್ಲ. ಕೇವಲ ಕಾಲ್ತುಳಿತ ಮಾತ್ರ ಸಂಭವಿಸಿದೆ ಎಂದು ಹೇಳುತ್ತಿವೆ.
ಆದರೆ ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ, ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಅರವಿಂದ ಕೇಜ್ರಿವಾಲ್ ಸೇರಿದಂತೆ ಅನೇಕ ಮುಖಂಡರು ಮೃತ ಕುಟುಂಬಗಳಿಗೆ ನಮನ ಸಲ್ಲಿಸಿದ್ದಾರೆ. ರಾತ್ರಿ 12 ಗಂಟೆ ದಾಟುತ್ತಿದ್ದಂತೆ ಲಕ್ಷಾಂತರ ಭಕ್ತರು ಏಕ ಕಾಲದಲ್ಲಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲು ಧಾವಿಸಿದ್ದಾರೆ. ಲಕ್ಷಾಂತರ ಭಕ್ತರು ನದಿಯ ತಟದಲ್ಲಿಯೇ ನಿದ್ರಿಸುತ್ತಿದ್ದರು. ಈ ಸಂದರ್ಭದಲ್ಲಿ ಬ್ಯಾರಿಕೇಡ್ ಗಳನ್ನು ತಳ್ಳಿ ನದಿಯತ್ತ ಧಾವಿಸಿದಾಗ ಕಾಲ್ತುಳಿತ ಸಂಭವಿಸಿದೆ ಎನ್ನಲಾಗಿದೆ. ನದಿ ತಟದಲ್ಲಿ ಕೆಲವರು ಅಸುನೀಗಿದನ್ನು ಕಣ್ಣಾರೆ ಕಂಡಿದ್ದೇವೆ ಎಂದು ಕೆಲವು ಭಕ್ತರು ಹೇಳಿದ್ದಾರಾದರೂ ಸರ್ಕಾರ, ಪೊಲೀಸ್ ಅಧಿಕಾರಿಗಳು ಸಾವನ್ನು ಕುರಿತು ಖಚಿತ ಮಾಹಿತಿ ನೀಡಿಲ್ಲ. 15 ಮಂದಿ ಅಸು ನೀಗಿದ್ದಾರೆ ಎಂದು ಪ್ರಯಾಗ್ ರಾಜ್ ವೈದ್ರು ತಿಳಿಸಿದ್ದಾರೆ ಎಂದು ವಿದೇಶಿ ಮಾಧ್ಯಮವೊಂದು ವರದಿ ಮಾಡಿದೆ.
ಇದುವರೆಗೂ ಕೇಂದ್ರ ಅಥವಾ ಉತ್ತರ ಪ್ರದೇಶ ಸರ್ಕಾರಗಳು ಖಚಿತ ಮಾಹಿತಿ ನೀಡದೆ ಸತ್ಯವನ್ನು ಮುಚ್ಚಿಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.