ಅಹಮದಾಬಾದ್: ರೈತರೊಬ್ಬರ ಮನೆಯಿಂದ 1.7 ಕೋಟಿ ರೂಪಾಯಿ ಕಳವು ಮಾಡಿದ್ದ ಆರೋಪಿಗಳನ್ನು ಪೊಲೀಸ್ ನಾಯಿವೊಂದು ಪತ್ತೆ ಮಾಡಿದೆ. ಈ ನಾಯಿಯ ಚಾತುರ್ಯಕ್ಕೆ ಮೆಚ್ಚುಗೆಗಳ ಮಹಾಪೂರವೇ ಹರಿದು ಬಂದಿದೆ.
ಗುಜರಾತ್ ರಾಜ್ಯದ ಅಹಮದಾಬಾದ್ ಜಿಲ್ಲೆಯ ಡೋಲ್ಕಾ ತಾಲ್ಲೂಕಿನ ಸರ್ಗಾವಾಲಾ ಎಂಬ ಗ್ರಾಮದಲ್ಲಿ ರೈತರೊಬ್ಬರು ತಮ್ಮ ಜಮೀನು ಮಾರಾಟ ಮಾಡಿ ಬಂದಿದ್ದ 1.7 ಕೋಟಿ ರೂಪಾಯಿ ಹಣವನ್ನು ಮನೆಯಲ್ಲಿಟ್ಟಿದ್ದರು. ಇವರ ಮನೆಯಲ್ಲಿ ಹಣ ಇರುವುದನ್ನು ತಿಳಿದುಕೊಂಡಿದ್ದ ಕಳ್ಳರು
ಮನೆಗೆ ಕನ್ನ ಹಾಕಿ ಹಣವನ್ನು ಕದ್ದೊಯ್ದಿದ್ದರು.
ರೈತ ಕೂಡಲೇ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು 34 ಶಂಕಿತರನ್ನು ಕಳ್ಳತನ ನಡೆದಿದ್ದ ಮನೆ ಬಳಿಗೆ ಕರೆ ತಂದು ಪರೇಡ್ ನಡೆಸಿದ್ದರು. ಕಳ್ಳರನ್ನು ಪತ್ತೆ ಹಚ್ಚಲು ಪೆನ್ನಿ ಎಂಬ ಪೊಲೀಸ್ ಡಾಬರ್‌ಮನ್ ನಾಯಿಯನ್ನು ಬಳಸಿಕೊಳ್ಳಲಾಗಿತ್ತು.
ಪೆರೇಡ್ ಸಂದರ್ಭದಲ್ಲಿ ಬುದಾ ಸೋಳಂಕಿ ಎಂಬಾತನ ಮೇಲೆ ಪೆನ್ನಿ ಅನುಮಾನ ವ್ಯಕ್ತಪಡಿಸಿತ್ತು. ಈ ಶ್ವಾನವು ಆತನ ಮನೆಗೆ ಪೊಲೀಸರನ್ನು ಕರೆದುಕೊಂಡು ಹೋಗಿತ್ತು. ಈತನ ಮನೆಯಲ್ಲಿ ತಪಾಸಣೆ ನಡೆಸಿದಾಗ ಕಳವಾಗಿದ್ದ ಹಣ ಪತ್ತೆಯಾಗಿತ್ತು. ಪೊಲೀಸರು ಈ ಹಣವನ್ನು
ವಶಪಡಿಸಿಕೊಂಡು ಬುದಾ ಸೋಳಂಕಿ ಮತ್ತುವಿಕ್ರಮ್
ಸೋಳಂಕಿ ಎಂಬುವರನ್ನು ಬಂಧಿಸಿದ್ದಾರೆ.