ಚಂಡೀಗಢ : ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಶುಕ್ರವಾರ ಖಾನೌರಿ ಗಡಿಯಲ್ಲಿ ಮೃತಪಟ್ಟ ರೈತ ಶುಭಕರನ್ ಸಿಂಗ್ ಅವರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ಮತ್ತು ಅವರ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗವನ್ನು ಕೊಡುವುದಾಗಿ ಘೋಷಿಸಿದ್ದಾರೆ.
ಪಂಜಾಬ್-ಹರಿಯಾಣ ಗಡಿಯಲ್ಲಿನ ಖಾನೌರಿ ಗಡಿಯಲ್ಲಿ ಬುಧವಾರ ನಡೆದ ಪೊಲೀಸರು ಮತ್ತು ರೈತರ ಘರ್ಷಣೆಯಲ್ಲಿ ಬಟಿಂಡಾ ಮೂಲದ ಸಿಂಗ್ (21) ಸಾವನ್ನಪ್ಪಿದ್ದು, 12 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಪ್ರತಿಭಟನಾ ನಿರತ ರೈತರು ಬ್ಯಾರಿಕೇಡ್‌ಗಳತ್ತ ಸಾಗಲು ಯತ್ನಿಸಿದಾಗ ಈ ಘಟನೆ ನಡೆದಿದೆ ಎಂದು ತಿಳಿದಿದೆ.
ಖಾನೌರಿ ಗಡಿಯಲ್ಲಿ ನಡೆದ ರೈತ ಚಳವಳಿಯಲ್ಲಿ ಹುತಾತ್ಮರಾದ ಶುಭಕರನ್ ಸಿಂಗ್ ಅವರ ಕುಟುಂಬಕ್ಕೆ ಪಂಜಾಬ್ ಸರ್ಕಾರದಿಂದ 1 ಕೋಟಿ ರೂಪಾಯಿ ಆರ್ಥಿಕ ನೆರವು ಮತ್ತು ಅವರ ಸಹೋದರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಭಗವಂತ್ ಮನ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಖನೌರಿ ಗಡಿಯಲ್ಲಿ ನಡೆದ ಘರ್ಷಣೆಯಿಂದ ಪ್ರತಿಭಟನ ನಿರತ ರೈತ ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ರೈತ ಮುಖಂಡರು ಬುಧವಾರದಿಂದ ಎರಡು ದಿನಗಳ ಕಾಲ “ದೆಹಲಿ ಚಲೋ” ಮೆರವಣಿಗೆಯನ್ನು ಸ್ಥಗಿತಗೊಳಿಸಿದ್ದರು.
ಪ್ರತಿಭಟನೆಗೆ ಸಂಬಂಧಿಸಿದಂತೆ ಇಂದು(ಶುಕ್ರವಾರ) ಸಂಜೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ರೈತ ಮುಖಂಡ ಸರವಣ ಸಿಂಗ್ ಪಂಢೇರ್ ತಿಳಿಸಿದ್ದಾರೆ.