ಬೆಂಗಳೂರು: ಜೀ ವಾಹಿನಿಯ ಮಹಾನಟಿ ಎಂಬ ರಿಯಾಲಿಟಿ ಶೋನಲ್ಲಿ ಮೆಕ್ಯಾನಿಕ್ ವೃತ್ತಿಯನ್ನು ಕೊಚ್ಚೆ ಗುಂಡಿ ಎಂದೂ, ಮೆಕ್ಯಾನಿಕ್ ಕೆಲಸ ಮಾಡುವವರ ಮನೆಯವರು ಗ್ರೀಸ್ ತಂದು ಬದುಕಬೇಕಾಗುತ್ತೆ ಎಂದು ಹೀಯಾಳಿಸಲಾಗಿದ್ದು, ಇದರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ರಿಯಾಲಿಟಿ ಶೋನ ಸ್ಪರ್ಧಿಯೊಬ್ಬಳಿಗೆ ಟಾಸ್ಕ್ ಒಂದನ್ನು ಕೊಟ್ಟು ನಿನ್ನ ತಂಗಿ ಮೆಕ್ಯಾನಿಕ್ ಒಬ್ಬಾತನ ಜೊತೆ ಓಡಾಡುವುದನ್ನು ನೀನು ನೋಡುತ್ತೀಯ. ನೀನು ಅವಳಿಗೆ ಏನು ಹೇಳುತ್ತೀಯ ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಆಕೆ ಹೇಳಿದ ಮಾತುಗಳು ಹೀಗಿವೆ: ʻʻನೋಡು ಐಶು, ನೀನು ಅವನ ಜೊತೆ ಓಡಾಡ್ತಾ ಇರೋದು ನನಗೆ ಗೊತ್ತು. ಬಿದ್ದರೆ ತುಪ್ಪದ ಗುಂಡಿಯಲ್ಲಿ ಬೀಳಬೇಕು, ಕೊಚ್ಚೆ ಗುಂಡಿಯಲ್ಲಲ್ಲ. ಪ್ರೀತಿನೇ ಮುಖ್ಯ, ದುಡ್ಡು ಮುಖ್ಯವಲ್ಲ ಅಂತ ನೀನು ಅಂದುಕೊಂಡಿರಬಹುದು. ಆದರೆ ದುಡ್ಡೇ ಮುಖ್ಯ. ಪ್ರೀತಿನೇ ಮುಖ್ಯ ಅಂತ ಗ್ರೀಸ್ ತಿಂದುಕೊಂಡು ಬದುಕೋದಕ್ಕೆ ಆಗಲ್ಲʼʼ
ಹೀಗೆ ಸ್ಪರ್ಧಿಯೊಬ್ಬಳು ಸಾರಾಸಗಟಾಗಿ ಮೆಕಾನಿಕ್ ವೃತ್ತಿ ಮಾಡುವ ಶ್ರಮಿಕ ವರ್ಗದ ಜನರನ್ನು ಹೀಯಾಳಿಸುವಾಗ ಶೋನ ಜಡ್ಜ್ ಗಳಾದ ನಟ ರಮೇಶ್ ಅರವಿಂದ್, ನಟಿ ಪ್ರೇಮ, ಆಂಕರ್ ಅನುಶ್ರೀ, ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬಂದಿದ್ದ ನಿರ್ದೇಶಕ ತರುಣ್ ಸುಧೀರ್ ಮೊದಲಾದವರು ಆ ಹೇಳಿಕೆಗಳನ್ನು ಖಂಡಿಸಿ, ಬುದ್ಧಿ ಹೇಳುವ ಬದಲು ಕೇಕೆ ಹಾಕಿ, ಚಪ್ಪಾಳೆ ಹೊಡೆದು ಅಭಿನಂದಿಸಿರುವ ದೃಶ್ಯಗಳು ವೈರಲ್ ಆಗಿವೆ.
ಈ ವಿಡಿಯೋ ಶೇರ್ ಮಾಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಸಾಮಾಜಿಕ ಕಾರ್ಯಕರ್ತ, ಪತ್ರಕರ್ತ ದಿನೇಶ್ ಕುಮಾರ್, ಆಕೆ ಏನೋ ಚಿಕ್ಕ ಹುಡುಗಿ, ಏನೋ ಹೇಳಿದಳು ಎಂದಿಟ್ಟುಕೊಳ್ಳೋಣ. ಈ ದೊಡ್ಡವರ ಮೆದುಳುಗಳಿಗೆ ಏನಾಗಿತ್ತು? ಮೆಕ್ಯಾನಿಕ್ ವೃತ್ತಿ ಕೊಚ್ಚೆ ಗುಂಡಿಯೇ? ಮೆಕ್ಯಾನಿಕ್ ಗಳನ್ನು ಯಾರೂ ಪ್ರೀತಿಸಬಾರದೇ? ಮೆಕ್ಯಾನಿಕ್ ಗಳನ್ನು ಮದುವೆಯಾದವರೆಲ್ಲ ಗ್ರೀಸ್ ತಿಂದು ಬದುಕುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದರು. ಕಾಪಿ ರೈಟ್ ಉಲ್ಲಂಘನೆಯ ನೆಪ ಒಡ್ಡಿ ಈ ಪೋಸ್ಟನ್ನು ಜೀ ವಾಹಿನಿ ತೆಗೆಸಿ ಹಾಕಿತ್ತು. ಈ ಕುರಿತು ಮತ್ತೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ಅವರು, ಮೆಕ್ಯಾನಿಕ್ ಗಳನ್ನು ಕೊಚ್ಚೆ ಎಂದು ಅಪಮಾನಿಸುವ ಜೀ ವಾಹಿನಿಯ ವಿಡಿಯೋ ಒಂದನ್ನು ಶೇರ್ ಮಾಡಿದ್ದೆ. ಅದನ್ನು ಆ ವಾಹಿನಿಯವರು ಕಾಪಿರೈಟ್ ಉಲ್ಲಂಘನೆಯ ನೆಪ ಕೊಟ್ಟು ತೆಗೆಸಿಹಾಕಿದ್ದಾರೆ. ಸಂತೋಷ, ಇಡೀ ರಾಜ್ಯದಲ್ಲಿ ಮೆಕ್ಯಾನಿಕ್ ಗಳು ಈಗ ನಿಮ್ಮ ಮೇಲೆ ಕೇಸು ಹಾಕುತ್ತಿದ್ದಾರೆ. ಅದನ್ನು ಹೇಗೆ ತಡೆಯುತ್ತೀರಾ ನೋಡೇಬಿಡೋಣ. ಮಿ. ರಮೇಶ್ ಅರವಿಂದ್, ರಾಘವೇಂದ್ರ ಹುಣಸೂರು, ಮೆಕ್ಯಾನಿಕ್ ಗಳ ಮನೆಯವರು ಗ್ರೀಸ್ ತಿಂದು ಬದುಕೋದಿಲ್ಲ, ಅನ್ನ ತಿಂದೇ ಬದುಕುತ್ತಾರೆ. ನೀವು ಹೊಟ್ಟೆಗೆ ಏನು ತಿನ್ನುತ್ತೀರಿ ಅದನ್ನು ಹೇಳಿ ಎಂದು ಪ್ರಶ್ನಿಸಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಈಗ ಆಕ್ರೋಶದ ಅಲೆಯೇ ಎದ್ದಿದ್ದು, ಜೀ ವಾಹಿನಿ ಕೂಡಲೇ ಬೇಷರತ್ತಾಗಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ. ಸಾಮಾಜಿಕ ಹೋರಾಟಗಾರ ಅಬ್ದುಲ್ ಮುನೀರ್ ಕಾಟಿಪಳ್ಳ ಈ ಕುರಿತು ಪ್ರತಿಕ್ರಿಯಿಸಿದ್ದು, ಈತನ ಪಿಚ್ಚರುಗಳನ್ನು ಐಟಿ, ಬಿಟಿಯವರು, ವೈದ್ಯರು, ceo ಗಳು ಬಂದು ನೋಡಿಲ್ಲ. ಮೆಕ್ಯಾನಿಕ್ಕುಗಳು, ಹಮಾಲರು, ಚಾಲಕರು, ಕೂಲಿಗಳು, ರೈತಾಪಿಗಳು ಸೇರಿದಂತೆ ಶ್ರಮ ಜೀವಿಗಳು ಬಂದು ನೋಡಿದ್ದರಿಂದ ಈತ (ರಮೇಶ್ ಅರವಿಂದ್) ಸ್ಟಾರ್ ಆಗಿದ್ದಾನೆ ಎಂದು ಹೇಳಿದ್ದಾರೆ.
ಚಿಂತಕ ವಡ್ಡಗೆರೆ ನಾಗರಾಜಯ್ಯ ಪ್ರತಿಕ್ರಿಯೆ ನೀಡಿದ್ದು, ಹೊಟ್ಟೆ ತುಂಬಿದವರ ಅಹಂಕಾರಿಗಳಿವರು. ಹುಡುಗಿಯೊಬ್ಬಳು, “ಮೆಕ್ಯಾನಿಕ್ ಗಳನ್ನು ಪ್ರೀತಿಸುವುದು ಕೊಚ್ಚೆ ಗುಂಡಿಗೆ ಬಿದ್ದಂತೆ, ಗ್ರೀಸ್ ತಿಂದು ಬದುಕಬೇಕಾಗುತ್ತೆ” ಎಂದು ಹೇಳಿದಾಗ, ಆ ಹುಡುಗಿಗೆ ಬುದ್ಧಿ ಹೇಳುವುದು ಬಿಟ್ಟು ಚಪ್ಪಾಳೆ ತಟ್ಟಿ ಕೇಕೆಹಾಕಿ ನಗುತ್ತಾರೆ. ಇವರಿನ್ನೆಂತಹ ಕ್ರೂರಿಗಳಿರಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೈ ಕೆಸರಾದರೆ ಬಾಯಿ ಮೊಸರು ಅಂತ ಗಾದೆ ಮಾತು ಇದೆ..ಕೈ ಗೆ ಗ್ರೀಸ್ ತಾಗಿದರೆ ತೆಗೆಯಬಹುದು… ಮೆದುಳಿಗೆ ತಾಗಿದರೆ ಹೇಗೆ ತೆಗೆಯುವುದು? ಎಂದು ಸ್ಟೀವನ್ ರೇಶ್ಮಾ ಪಿಂಟೋ ಹೇಳಿದ್ದಾರೆ. ನಮ್ಮ ಮನೆಯಲ್ಲಿ ಕಿತ್ತು ತಿನ್ನೋ ಬಡತನ. ಆದರೆ ನಾನು ಉನ್ನತ ಶಿಕ್ಷಣದ ಕನಸು ಕಾಣುತ್ತಿದ್ದೆ. ಆ ಕನಸು ನನಸು ಮಾಡಿದ್ದು ಇದೇ ನನ್ನ ಮೆಕ್ಯಾನಿಕ್ ಅಣ್ಣಂದಿರು. ನಾನೀಗ ಅಸೋಸಿಯೆಟ್ ಪ್ರೊಫೆಸರ್ ಇನ್ ಕನ್ನಡ. ಪಿಎಚ್ಡಿ ಇನ್ ಕನ್ನಡ. ನಾಲ್ಕು ಜಿಲ್ಲೆಗಳಲ್ಲಿ ಅಲ್ಪ ಸಂಖ್ಯಾತ ಸಮುದಾಯದಲ್ಲಿ ಕನ್ನಡದಲ್ಲಿ ಪಿಎಚ್ಡಿ ಪಡೆದ ಏಕೈಕ ಅಭ್ಯರ್ಥಿ .ಇದು ನನ್ನ ಮೆಕ್ಯಾನಿಕಲ್ ಅಣ್ಣಂದಿರ ಕೊಡುಗೆ. ಈ ಕೊಡುಗೆ ನನ್ನ ಅಣ್ಣನಿಂದ ಹೇಗೆ ಮರೆಯಲಿ ಎಂದು ಡಾ. ನಯಾಜ್ ಅಹ್ಮದ್ ಬರೆದಿದ್ದಾರೆ.
ಅಂಬೇಡ್ಕರ್‌ವಾದಿ ಚಿಂತಕ ಹಾ.ರಾ.ಮಹಿಷ ಬೌದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಮಹಾನ್ ಮನುವಾದಿ ಇವನು.. ಕಾನೂನಿನ ಪಾಠ ಆಗಲೇಬೇಕು ಎಂದು ಆಗ್ರಹಿಸಿದ್ದಾರೆ.
ಪ್ರತಿಯೊಂದು ಕೆಲಸಕ್ಕೂ ಅದರದೇ ಆದ ಪ್ರಾಮುಖ್ಯತೆ ಇದೆ.ಅವರವರ ಕೆಲಸಗಳು ಅವರವರ ಹೆತ್ತ ತಾಯಿಯಂತೆ ಎಂದು ಉಪನ್ಯಾಸಕ, ಲೇಖಕ ರೂಪೇಶ್ ಪುತ್ತೂರು ಹೇಳಿದ್ದಾರೆ.
ಇವರಿಗೆಲ್ಲ ಕಾಯಕವೇ ಕೈಲಾಸ ಎಂದ ಬಸವಣ್ಣ ನೆನಪಾಗಲ್ವಾ? ರಮೇಶ್ ಕಾರ್ ಬೈಕ್ ಗ್ರೀಸ್ ಆಯಿಲ್, ಗ್ಯಾರೇಜ್ ಮೆಕಾನಿಕ್ ಪಂಕ್ಚರ್ ಹಾಕೋರಿಲ್ದೆ ಓಡಾಡೊಕಾಗ್ತಾ? ಜೀ ಕನ್ನಡ ಸ್ಟುಡಿಯೋಗೆ ಬರೋಕಾಗ್ತಾ? ಇವರು ಶ್ರಮ ಸಂಸ್ಕೃತಿಯನ್ನ ಲೇವಡಿ ಮಾಡಿದ್ದು. ಕೇವಲ ಮೆಕ್ಯಾನಿಕ್ ವರ್ಗದವರನ್ನಲ್ಲ. ಕಾರ್ ಕೆಟ್ರೆ ರಮೇಶ್ ತಾವು ಇಸ್ಕಾನ್ ಟೆಂಪಲ್ಗೆ ತಗೊಂಡು ಹೋಗಲ್ಲ ಇಸ್ಮಾಯಿಲ್ ಮೆಕ್ಯಾನಿಕ್ ಹತ್ರನೆ ಹೋಗ್ಬೇಕು. ಚೂರು ಕಾರ್ಯಕ್ರಮ ನೋಡಿ ಮಾಡಿ ಮೆಕ್ಯಾನಿಕ್ ಸಹೋದರರ ಹತ್ರ ಕ್ಷಮೆ ಕೇಳಿ ಎಂದು ಯುವ ಲೇಖಕ ಪ್ರಶಾಂತ್ ದಾನಪ್ಪ ಆಗ್ರಹಿಸಿದ್ದಾರೆ.
ಇದುವರೆಗೆ ಭೂಮಿ ಮೇಲೆ ಮೆಕ್ಯಾನಿಕ್‌ಗಳನ್ನು ಮದುವೆ ಆಗಿರೋ ಹೆಣ್ಣುಮಕ್ಕಳು ಗ್ರೀಸು ತಿಂದೇ ಬದುಕ್ತಿದಾರಾ? ನೀವು ಓಡಾಡೋ ಐಷಾರಾಮಿ ಕಾರುಗಳು, ಬೈಕುಗಳು ಕೆಟ್ಟರೆ ಅದನ್ನು ನೀವೇ ನಿಮ್ಮ ಕೈಯಾರೆ ರಿಪೇರಿ ಮಾಡಿಕೊಳ್ಳುವಷ್ಟು ಶಕ್ತಿ ನಿಮ್ಮಲ್ಲಿದೆಯೇ ಎಂದು ಸೈಯದ್ ನಿಜಾಮುದ್ದೀನ್ ಎಂಬುವವರು ಪ್ರಶ್ನಿಸಿದ್ದಾರೆ.
ಈ ರಮೇಶ್ ಅರವಿಂದ್, ಪ್ರೇಮ,ನಿಶ್ಚಿಖಾ ನಾಯ್ಡು ,ಅನುಶ್ರೀ ರವರ ಬೈಕ್, ಕಾರು, ಕ್ಯಾರಾವಾನ್ ಕೆಟ್ಟಾಗ ದಯಮಾಡಿ ರಿಪೇರಿ ಮಾಡಬೇಡಿ. ಯಾಕೆಂದರೆ ನೀವು ಹೊಟ್ಟೆಗೆ ಅನ್ನ ತಿನ್ನುವುದಿಲ್ಲವಂತೆ, ಗ್ರೀಸ್ ತಿನ್ನುತ್ತೀರಂತೆ. ಇಂತಹವರ ಸಹವಾಸ ನಿಮಗೆ ಹೊಂದಾಣಿಕೆ ಆಗುವುದಿಲ್ಲ….. ಎಂದು ಕುಮಾರಸ್ವಾಮಿ ಎಂ.ಪಿಯವರು ಮೆಕ್ಯಾನಿಕ್ ಗಳಿಗೆ ವಿನಂತಿಸಿದ್ದಾರೆ.