ಬೆಳಗಾವಿ: ಪ್ರೇಯಸಿ ಕೊಂದು, ಆತ್ಮಹತ್ಯೆ ಮಾಡಿಕೊಂಡ ಯುವಕ

Most read

ಬೆಳಗಾವಿ: ಮದುವೆಗೆ ಒಪ್ಪದ ಪ್ರಿಯತಮೆಗೆ ಚೂರಿ ಇರಿದು ಕೊಲೆ ಮಾಡಿದ ಯುವಕ, ಅದೇ ಚೂರಿಯಿಂದ ತಾನೂ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರಂತ ಘಟನೆ ಇಲ್ಲಿನ ಶಹಾಪುರದ ನವಿ ಗಲ್ಲಿ ಎಂಬಲ್ಲಿ ನಡೆದಿದೆ. ಶಹಾಪುರದ ನಾಥ ಪೈ ವೃತ್ತದ ನಿವಾಸಿ ಐಶ್ವರ್ಯಾ ಮಹೇಶ ಲೋಹಾರ (18) ಕೊಲೆಯಾದ ದುರ್ದೈವಿ. ತಾಲ್ಲೂಕಿನ ಯಳ್ಳೂರ ಗ್ರಾಮದ ಪ್ರಶಾಂತ ಯಲ್ಲಪ್ಪ ಕುಂಡೇಕರ (29) ಆತ್ಮಹತ್ಯೆ ಮಾಡಿಕೊಂಡ ಯುವಕ.

ಐಶ್ವರ್ಯಾ ಮತ್ತು ಪ್ರಶಾಂತ ಇಬ್ಬರೂ ಒಂದೂವರೆ ವರ್ಷಗಳಿಂದ ಪ್ರೀತಿಸುತ್ತಿದ್ದರು. ಶಿಕ್ಷಣ ಮುಗಿಸಿದ ಬಳಿಕ ಪ್ರಶಾಂತ ಬೆಳಗಾವಿಯಲ್ಲಿ ಪೇಂಟರ್‌ ಆಗಿ ಕೆಲಸ ಮಾಡುತ್ತಿದ್ದ. ಇವರ ಪ್ರೀತಿಗೆ ಯುವತಿಯ ತಾಯಿಯ ವಿರೋಧವಿತ್ತು. ಯುವತಿ ಇನ್ನೂ ಚಿಕ್ಕವಳಿದ್ದು, ಉತ್ತಮ ಭವಿಷ್ಯವಿದೆ. ನೀನು ಹೆಚ್ಚು ಗಳಿಸಿ ನಿನ್ನ ಕಾಲ ಮೇಲೆ ನಿಂತುಕೋ ಎಂದು ಸಲಹೆ ನೀಡಿದ್ದರು. ಇದೇ ವಿಚಾರವಾಗಿ ಯುವಕ ಯುವತಿ ಮಧ್ಯೆ ಆಗಾಗ್ಗೆ ಜಗಳವಾಗುತ್ತಿತ್ತು ಎಂದು ನಗರ ಪೊಲೀಸ್‌ ಕಮಿಷನರ್‌ ಯಡಾ ಮಾರ್ಟಿನ್ ಮಾರ್ಬನ್ಯಾಂಗ್‌ ತಿಳಿಸಿದ್ದಾರೆ.

ಐಶ್ವರ್ಯ ಅವರು ತಮ್ಮ ಚಿಕ್ಕಮ್ಮನ ಮನೆಗೆ ಯುವಕನನ್ನು ಕರೆಸಿಕೊಂಡು ಮಾತನಾಡಲು ಪ್ರಯತ್ನಿಸಿದ್ದರು. ಆಗ ಇಬ್ಬರ ನಡುವೆ ಮಾತಿನ ಜಟಾಪಟಿ ನಡೆದಿದೆ. ಸಂಜೆ 5.30ರ ಸುಮಾರಿಗೆ ಪ್ರಶಾಂತ ಚೂರಿಯಿಂದ ಐಶ್ವರ್ಯ ಕುತ್ತಿಗೆಗೆ ಚುಚ್ಚಿದ್ದಾನೆ.  ತಕ್ಷಣವೇ ತನ್ನ ಕುತ್ತಿಗೆಗೆ ಚುಚ್ಚಿಕೊಂಡಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದ ಇಬ್ಬರೂ ಕೆಲವೇ ನಿಮಿಷಗಳಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಅವರು  ತಿಳಿಸಿದರು.

ಯುವಕ ಯುವತಿ ಭೇಟಿಯಾದ ಕೋಣೆಯಲ್ಲಿ ಒಂದು ವಿಷದ ಬಾಟಲಿಯೂ ಸಿಕ್ಕಿದೆ. ಆರಂಭದಲ್ಲಿ ಯುವಕ ಯುವತಿಗೆ ವಿಷ ಕುಡಿಸಲು ಒತ್ತಾಯ ಮಾಡಿರಬಹುದು. ಅದು ಸಾಧ್ಯವಾಗದೇ ಚೂರಿ ಇರಿದಿದ್ದಾನೆ. ಮೊದಲು ಕೊಲೆ ಪ್ರಕರಣ ದಾಖಲಿಸಿ, ಬಳಿಕ ಆರೋಪಿಯ ಆತ್ಮಹತ್ಯೆ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದೂ ಅವರು ಮಾಹಿತಿ ನೀಡಿದರು. ಡಿಸಿಪಿ ರೋಹನ್ ಜಗದೀಶ್‌, ಸಿಪಿಐ ಎಸ್.ಎಸ್.ಸಿಮಾನಿ, ಎಸಿಪಿ ಸಂತೋಷ ಸತ್ಯನಾಯಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

More articles

Latest article