ಚಿಕ್ಕಪ್ಪನ ಮನೆಯಲ್ಲೇ 65 ಲಕ್ಷ ರೂ. ಬೆಲೆ ನಗದು, ಚಿನ್ನಾಭರಣ ಕಳವು ಮಾಡಿದ್ದ ಯುವತಿ ಬಂಧನ

Most read

ಬೆಂಗಳೂರು: ಸ್ನೇಹಿತನೊಂದಿಗೆ ಸೇರಿಕೊಂಡು ಚಿಕ್ಕಪ್ಪನ ಮನೆಯಲ್ಲೇ ನಗದು ಮತ್ತು ಚಿನ್ನಾಭರಣ ಕಳವು ಮಾಡಿ ಮಾರಾಟ ಮಾಡಿದ್ದ ಯುವತಿ ಸೇರಿದಂತೆ ನಾಲ್ವರನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಇವರಿಂದ ರೂ. 10 ಲಕ್ಷ ನಗದು ಸೇರಿದಂತೆ 65 ಲಕ್ಷ ರೂ. ಬೆಲೆ ಬಾಳುವ 548 ಗ್ರಾಂ ಚಿನ್ನಾಭರಣ ಹಾಗೂ ಚಿನ್ನದ ಗಟ್ಟಿ ವಶಪಡಿಸಿಕೊಂಡಿದ್ದಾರೆ.

ಭೈರತಿ ಗ್ರಾಮದ ರಿಯಲ್‌ ಎಸ್ಟೇಟ್‌ ಉದ್ಯಮಿ ಶ್ರೀನಿವಾಸ ರೆಡ್ಡಿ ಅವರು ತಮ್ಮ ಮನೆಯ ಕೊಠಡಿಯ ಲಾಕರ್‌ ನಲ್ಲಿಟ್ಟಿದ್ದ ಚಿನ್ನಾಭರಣ ಕಳವಾಗಿದೆ ಎಂದು ದೂರು ನೀಡಿ ಇಬ್ಬರು ಕೆಲಸಗಾರರ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ ಪೊಲೀಸರು, ದೂರುದಾರರ ಅಣ್ಣನ ಮಗಳನ್ನು ಠಾಣೆಗೆ ಕರೆಸಿ ವಿಚಾರಣೆಗೆ ಒಳಪಡಿಸಿದಾಗ ಸ್ನೇಹಿತನೊಂದಿಗೆ ಸೇರಿ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ. ಕಳವು ಮಾಡಿದ ಕೆಲವು ಚಿನ್ನಾಭರಣಗಳನ್ನು ಕರಗಿಸಿ ಚಿನ್ನದ ಗಟ್ಟಿಯನ್ನಾಗಿ ಮಾರ್ಪಡಿಸಿ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾಳೆ.

ಈಕೆಯಿಂದ ಚಿನ್ನಾಭರಣಗಳನ್ನು ಪಡೆದುಕೊಂಡಿದ್ದ ಮತ್ತಿಬ್ಬರು ಸ್ನೇಹಿತರನ್ನೂ ಬಂಧೀಸಿ ವಿಚಾರಣೆ ನಡೆಸಲಾಗಿದೆ. ಚಿಕ್ಕಪೇಟೆಯ ಎರಡು ಜ್ಯುವೆಲರಿ ಅಂಗಡಿಗಳು ಮತ್ತು ಕೊತ್ತನೂರಿನಲ್ಲಿ ವಾಸವಿರುವ ಆರೋಪಿಗಳಿಬ್ಬರ ಮನೆಯಿಂದ ಒಟ್ಟು 548 ಗ್ರಾಂ ಚಿನ್ನಾಭರಣ, ಚಿನ್ನದ ಗಟ್ಟಿ ಮತ್ತು 10 ಲಕ್ಷ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ 65 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.ಉಳಿದ ಚಿನ್ನಾಭರಣಗಳ ಪತ್ತೆಕಾರ್ಯ ಮುಂದುವರೆದಿದ್ದು ತನಿಖೆ ಪ್ರಗತಿಯಲ್ಲಿದೆ.

More articles

Latest article