ಬೆಂಗಳೂರು: ಕೋರಮಂಗಲದ ಪಿಜಿಯಲ್ಲಿದ್ದ ಯುವತಿಯೋರ್ವಳನ್ನು ಭೀಕರವಾಗಿ ಕೊಂದುಹಾಕಿರುವ ಘಟನೆ ನಿನ್ನೆ ವರದಿಯಾಗಿದೆ.
ಕೃತಿ ಕುಮಾರಿ ಕೊಲೆಗೀಡಾದ ನತದೃಷ್ಟೆ. 25 ವರ್ಷದ ಕೃತಿ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದಳು. ಕೋರಮಂಗಲದ ವಿಜಿಆರ್ ಲೇ ಔಟ್ ನ ಹೆಣ್ಣುಮಕ್ಕಳ ಪಿಜಿಯಲ್ಲಿ ಆಕೆ ವಾಸವಾಗಿದ್ದಳು.
ಕೃತಿಗೆ ಪರಿಚಯವಿರುವವರೇ ಈ ಕೊಲೆ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯ ನಂತರ ಪೊಲೀಸರು ಹೇಳಿದ್ದಾರೆ. ಕೊಲೆಗಡುಕ ರಾತ್ರಿ 11.10 ರ ವೇಳೆ ಮೂರನೇ ಮಹಡಿಯಲ್ಲಿದ್ದ ಕೃತಿ ಕೊಠಡಿಗೆ ಹೋಗಿ ಕೊಲೆ ಮಾಡಿದ್ದಾನೆ.
ಹಲವು ಬಾರಿ ಆಕೆಯನ್ನು ಚಾಕುವಿನಿಂದ ಚುಚ್ಚಲಾಗಿದ್ದು, ನಂತರ ಆಕೆಯ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಲಾಗಿದೆ.
ಘಟನೆ ಬೆನ್ನಲ್ಲೇ ಪಿಜಿಗಳ ಭದ್ರತಾ ಲೋಪದ ಬಗ್ಗೆ ಪ್ರಶ್ನೆಗಳು ಎದ್ದಿದ್ದು, ರಾತ್ರಿ ವೇಳೆ ಪಿಜಿ ಕೊಠಡಿಗೆ ತೆರಳಲು ಕೊಲೆಗಡುಕನಿಗೆ ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆ ಉದ್ಭವಿಸಿದೆ.
ಆಗ್ನೇಯ ಬೆಂಗಳೂರು ಡಿಸಿಪಿ ಸಾರಾ ಫಾತಿಮಾ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಸುತ್ತಮುತ್ತಲ ಪ್ರದೇಶದ ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ, ಕೊಲೆಗೀಡಾದ ಯುವತಿ ಬಿಹಾರ ಮೂಲದವರು ಎಂದು ತಿಳಿದುಬಂದಿದೆ. ಆರೋಪಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದು ಆದಷ್ಟು ಬೇಗ ಆರೋಪಿಯನ್ನು ಬಂಧಿಸುತ್ತೇವೆ. PG ನಡೆಸುವವರ ನಿರ್ಲಕ್ಷ್ಯ ಕಂಡು ಬಂದರೆ ಅವರ ಮೇಲೂ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.