Sunday, September 8, 2024

ತಾರುಣ್ಯದ ಬಾಗಿಲಲ್ಲಿ ಎಡವಿ ಜೈಲು ಪಾಲಾಗುವ ಯುವಕರು!!!

Most read

ಪೋಕ್ಸೋ ಕಾಯಿದೆಯಂತ ಒಂದು ಅತ್ಯಂತ ಪರಿಣಾಮಕಾರಿ ಕಾಯಿದೆಯ ದುರುಪಯೋಗಕ್ಕೆ ಆಸ್ಪದ ಕೊಟ್ಟರೆ ಅದು ತಂದೊಡ್ಡುವ ಆತಂಕ ಬಹಳ ಭಯಾನಕ. ತಾರುಣ್ಯದ ಬಾಗಿಲಲ್ಲಿ ರೊಮ್ಯಾಂಟಿಕ್ ಸಂಬಂಧದ ಬಲೆಗೆ ಬಿದ್ದು ಯಾವುದೋ ಕೆಟ್ಟ ಗಳಿಗೆಯಲ್ಲಿ ಮಾಡುವ ಯಡವಟ್ಟುಗಳಿಗೆ  ಯುವಕರನ್ನು ದೀರ್ಘ ಕಾಲ ಜೈಲಿನಲ್ಲಿ ಕೊಳೆಯುವಂತೆ ಮಾಡುವ ಈ ಕಾನೂನು ಖಂಡಿತ ಪುನರ್ ವಿಮರ್ಶೆಗೊಳಪಡಲೇ ಬೇಕು- ಶಫೀರ್ ಎ ಎ, ವಕೀಲರು

ನಾನು ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಫಸ್ಟ್ ಕ್ಲಾಸ್ ಹುದ್ದೆಯಲಿದ್ದಾಗ 2-3 ತಿಂಗಳುಗಳಿಗೊಮ್ಮೆ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೆ. ಕಾಲ ಕಾಲಕ್ಕೆ ಅನಿರೀಕ್ಷಿತವಾಗಿ ಕಾರಾಗೃಹ ಮತ್ತು ಪೊಲೀಸ್ ಠಾಣೆಗೆ ಭೇಟಿ ಕೊಟ್ಟು ಬಂಧೀಖಾನೆ ಮತ್ತು ಆರೋಪಿಗಳ ಬಂಧನಕ್ಕೆ ಸಂಬಂಧಿಸಿದ ನಿಯಮಗಳು ಸರಿಯಾಗಿ ಪಾಲನೆ ಆಗುತ್ತಿವೆಯೇ ಎಂದು ಪರಿಶೀಲಿಸಿ ಮಾನ್ಯ ಉಚ್ಚ ನ್ಯಾಯಾಲಯಕ್ಕೆ ವರದಿ ಸಲ್ಲಿಸುವ ಜವಾಬ್ದಾರಿ ಸ್ಥಳೀಯ ಜೆ. ಎಂ.ಎಫ್. ಸಿ ನ್ಯಾಯಾಧೀಶರಿಗೆ ಇರುತ್ತದೆ. ಈ ಜವಾಬ್ದಾರಿಯ ಭಾಗವಾಗಿ ಜೈಲು ಪರಿಶೀಲನೆಗಾಗಿ ಹೋದಾಗಲೆಲ್ಲ ನನ್ನನ್ನು ಬಹಳವಾಗಿ ಕಾಡುತ್ತಿದ್ದ ಸಂಗತಿ ಏನೆಂದರೆ ಜೈಲಿನಲ್ಲಿ ಕೊಳೆಯುತ್ತಿರುವ ಖೈದಿಗಳಲ್ಲಿ ಅರ್ಧಕ್ಕಿಂತ ಹೆಚ್ಚಿನ ಪಾಲು 20 ರಿಂದ 30 ವರ್ಷ ಪ್ರಾಯದ ಯುವಕರು. ಆ ಪೈಕಿ ಮುಕ್ಕಾಲು ಪಾಲು ಪೋಕ್ಸೋ ಕಾನೂನಿನ ಅಡಿಯಲ್ಲಿ ಆರೋಪ ಎದುರಿಸುತ್ತಿರುವ ಖೈದಿಗಳು.

ಮಕ್ಕಳನ್ನು ಲೈಂಗಿಕ ದೌರ್ಜನ್ಯಕ್ಕೆ ಗುರಿಪಡಿಸುವ ದುರುಳರನ್ನು ಕಠಿಣ ಕಾನೂನು ಕ್ರಮ ಹಾಗು ಶಿಕ್ಷೆಗೆ ಗುರಿಪಡಿಸುವ ಉದ್ದೇಶದಿಂದ 2012 ರಲ್ಲಿ  the Protection of Children from Sexual Offences Act (POCSO)- ಪೋಕ್ಸೋ ಕಾಯ್ದೆಯನ್ನು ಜಾರಿ ಗೊಳಿಸಲಾಯಿತು. ಅಲ್ಲಿಯವರೆಗೂ ಮಕ್ಕಳ ವಿರುದ್ಧ ನಡೆಯುತ್ತಿದ್ದ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯಗಳನ್ನು ಇಂಡಿಯನ್ ಪೀನಲ್ ಕೋಡ್ (ಐಪಿಸಿ ) ಅಡಿಯಲ್ಲೇ ಶಿಕ್ಷಾರ್ಹ ಅಪರಾಧಗಳಾಗಿ ಪರಿಗಣಿಸಲಾಗುತ್ತಿತ್ತು.

ಪೋಕ್ಸೋ ಕಾಯಿದೆಯ ಒಂದು ವಿಶೇಷ ಏನೆಂದರೆ ಮಕ್ಕಳ ವಿರುದ್ಧ ನಡೆಯುವ ಲೈಂಗಿಕ ಕಿರುಕುಳ, ಅತ್ಯಾಚಾರದ ವಿಚಾರ ಬಂದಾಗ ದೌರ್ಜನ್ಯಕ್ಕೆ ಒಳಗಾದವರು ಗಂಡು ಅಥವಾ ಹೆಣ್ಣು ಎಂಬ ಬೇಧವಿಲ್ಲದೆ ಹದಿನೆಂಟು ವರ್ಷದ ಒಳಗಿನ ಎಲ್ಲ ಮಕ್ಕಳಿಗೂ ಈ ಕಾಯಿದೆ ಅನ್ವಯಿಸುತ್ತದೆ. ಮಕ್ಕಳ ವಿರುದ್ಧ ನಡೆಯುವ ಲೈಂಗಿಕ ಅತ್ಯಾಚಾರ ಜೀವನ ಪರ್ಯಂತ ಅಥವಾ ಕನಿಷ್ಠ ಇಪ್ಪತ್ತು ವರ್ಷಗಳ ಕಾರಾಗೃಹ ಶಿಕ್ಷೆಗೆ ಅರ್ಹವಾದ ಅಪರಾಧವಾಗಿದ್ದು ಇಲ್ಲಿ ಅಪರಾಧಿಗೆ ಜಾಮೀನು ಸಿಗುವುದು ತುಂಬಾ ಕಷ್ಟದ ವಿಚಾರ.

ಮೇಲ್ಕಂಡ ಅಪರಾಧಗಳ ಗಂಭೀರತೆ ಹಾಗು ಅದು ಮಕ್ಕಳ ಮೇಲೆ ಬೀರುವ ಆಳವಾದ ಪರಿಣಾಮಗಳನ್ನು ಯೋಚಿಸಿದರೆ ಅಪರಾಧಿಗಳನ್ನು ಮಟ್ಟ ಹಾಕುವಲ್ಲಿ  ಪೋಕ್ಸೋ ಕಾಯಿದೆ ಒಂದು ಅತ್ಯಂತ ಪರಿಣಾಮಕಾರಿ ಕಾನೂನು ಎಂದರೆ ಎರಡು ಮಾತಿಲ್ಲ. ಆದರೆ ಈ ಕಾಯಿದೆಯ ದುರುಪಯೋಗಕ್ಕೆ ಆಸ್ಪದ ಕೊಟ್ಟರೆ ಅದು ತಂದೊಡ್ಡುವ ಆತಂಕ ಬಹಳ ಭಯಾನಕ.

ನಾನು ನ್ಯಾಯಾಧೀಶ ಹುದ್ದೆಗೆ ಬರುವ ಮೊದಲು ಪೋಕ್ಸೋ ಕಾಯಿದೆ ಯಾವ ಕಾರಣಕ್ಕೂ ದುರುಪಯೋಗವಾಗಲು ಸಾಧ್ಯವೇ ಇಲ್ಲ ಎನ್ನುವುದು ನನ್ನ ಭಾವನೆ ಯಾಗಿತ್ತು. ಯಾಕೆಂದರೆ ಲೈಂಗಿಕ ಅಪರಾಧದಂತಹ ಅತಿ ಸೂಕ್ಷ್ಮ ವಿಚಾರದಲ್ಲಿ ಮಕ್ಕಳು ಯಾವತ್ತೂ ಯಾರ ಮೇಲೂ ಸುಳ್ಳು ಆರೋಪ ಮಾಡಲಾರರು ಅನ್ನುವುದು ನನ್ನ ಅನಿಸಿಕೆಯಾಗಿತ್ತು. ಆದರೆ ಅದು ಕೇವಲ ಅನಿಸಿಕೆ ಅಷ್ಟೇ, ವಾಸ್ತವವಲ್ಲ ಅನ್ನುವುದು ನನಗೆ ಕ್ರಮೇಣ ಮನದಟ್ಟಾಗುತ್ತಾ ಬಂತು.

ಹದಿ ಹರೆಯದ ಪ್ರಾಯದಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳು ಪ್ರೇಮ, ಕಾಮ ಮತ್ತು ಮೋಹದ ಪಾಶಕ್ಕೆ ಸಿಲುಕುವುದು ಸಾಮಾನ್ಯ. ಅದರಲ್ಲೂ ಇನ್ಸ್ಟಾಗ್ರಾಂ, ಸ್ನ್ಯಾಪ್ ಚಾಟ್, ಫೇಸ್ ಬುಕ್ ಮತ್ತು ವಾಟ್ಸಾಪ್ ಮುಂತಾದ ಸೋಷಿಯಲ್ ಮೀಡಿಯಾಗಳನ್ನು ಲಂಗು ಲಗಾಮಿಲ್ಲದೆ ಬಳಸುವ ನಮ್ಮ ಹುಡುಗ ಹುಡುಗಿಯರು ಸುಲಭವಾಗಿ ರೋಮ್ಯಾಂಟಿಕ್ ಸಂಬಂಧಗಳಿಗೆ ಸಿಲುಕಿ ಒಪ್ಪಿಗೆಯಿಂದ ಲೈಂಗಿಕ ಕ್ರಿಯೆ ನಡೆಸಿ ಎಡವಟ್ಟು ಮಾಡಿ ಕೊಳ್ಳುತ್ತಿರುವುದು ಗುಟ್ಟಿನ ವಿಚಾರವಲ್ಲ.

ಆದರೆ ಗಮನಿಸ ಬೇಕಾದ ಅಂಶ ಏನೆಂದರೆ ಹದಿನೆಂಟು ವರ್ಷದ ಒಳಗಿನ ಮಕ್ಕಳು ಒಪ್ಪಿಗೆಯಿಂದ ಲೈಂಗಿಕ ಕ್ರಿಯೆ ನಡೆಸಿದ್ದರೂ ಕಾನೂನು ಅದನ್ನು ಒಪ್ಪಿಗೆ ಅಥವಾ ಸಮ್ಮತಿ ಎಂದು ಒಪ್ಪಿ ಕೊಳ್ಳುವುದಿಲ್ಲ. ಹಾಗಾಗಿ ಒಬ್ಬ ಯುವಕ ಹದಿನೆಂಟು ವರ್ಷದ ಕೆಳಗಿನ ಬಾಲಕಿಯನ್ನು ಪ್ರೀತಿಸಿ ಒಪ್ಪಿಗೆಯಿಂದ ಲೈಂಗಿಕ ಕ್ರಿಯೆ ನಡೆಸಿದ್ದರೂ ಕಾನೂನಿನ ಕಣ್ಣಿನಲ್ಲಿ ಆತ ಘೋರ ಅಪರಾಧಿ ಮತ್ತು ಜೀವಾವಧಿ ಶಿಕ್ಷೆಗೆ ಅರ್ಹ. 

ಹದಿನೆಂಟು ವರ್ಷದ ಕೆಳಗಿನ ಹುಡುಗಿಯನ್ನು ಮದುವೆಯಾಗಿ ಆಕೆ ಗರ್ಭಿಣಿಯಾಗಿ ಆಸ್ಪತ್ರೆಗೆ ಹೋದರೆ ತಕ್ಷಣ ಹುಡುಗನ ಮೇಲೆ ಬೀಳುತ್ತೆ ಪೋಕ್ಸೋ ಕೇಸ್. ಇದು ಉತ್ಪ್ರೇಕ್ಷಿತ ಸಂಗತಿ ಅಲ್ಲ. ಹುಡುಗಿ ದೂರು ಕೊಡಲು ಸಿದ್ಧಳಿಲ್ಲದಿದ್ದರೂ ಸಹ ಆಕೆಯಿಂದ ಒತ್ತಾಯ ಪೂರ್ವಕವಾಗಿ ಸಹಿ ಪಡೆದು ಕಪೋಲ ಕಲ್ಪಿತ ಹೇಳಿಕೆ ಸೃಷ್ಟಿ ಮಾಡಿ  ಗಂಡನನ್ನು ಆರೋಪಿ ಮಾಡಿ ಜೈಲಿಗಟ್ಟುವ  ಇಂತಹ ಪ್ರಕರಣಗಳನ್ನು ಬಹಳ ನೋಡಿದ್ದೇನೆ.

ಇನ್ನು ಬೇರೊಂದು ಬಗೆಯ ಪೋಕ್ಸೋ ದುರುಪಯೋಗದ ಉದಾಹರಣೆ ಕೊಡುತ್ತೇನೆ.

ಹತ್ತೊಂಬತ್ತು ವರ್ಷದ ಆಕರ್ಷಕ ಮೈಕಟ್ಟಿನ ಒಬ್ಬ ಹುಡುಗ. ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಆ ಹುಡುಗನ ಮನೆಯಲ್ಲಿನ ಕಡು ಬಡತನ ಆತನ ಶಿಕ್ಷಣವನ್ನು ಹತ್ತನೇ ತರಗತಿಗೇ ಮೊಟಕುಗೊಳಿಸಿತ್ತು. ಆತ ಬೆಂಗಳೂರಿನ ಗಲ್ಲಿಯೊಂದರ ಫುಟ್ಪಾತ್ ನಲ್ಲಿ ತಳ್ಳುಗಾಡಿಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಾ ಜೀವನಕ್ಕೆ ಒಂದು ದಾರಿಯನ್ನು ಕಂಡು ಕೊಂಡಿದ್ದ. ಆ ಏರಿಯಾದಲ್ಲಿ ವಾಸವಿರುವ ಅದೇ ಜನಾಂಗಕ್ಕೆ ಸೇರಿದ ಒಂದು ಶ್ರೀಮಂತ ಕುಟುಂಬದ ಪಿಯುಸಿ  ಓದುವ ಹದಿನೇಳು ವರ್ಷ ಪ್ರಾಯದ ಚೆಲುವೆಗೆ ಆತನ ಮೇಲೆ ಮೋಹ ಚಿಗುರೊಡೆಯಿತು. ಆಕೆಯೇ ಮೇಲೆ ಬಿದ್ದು ಅವನನ್ನು ಲವ್ ಮಾಡಿ ಬಲೆಗೆ ಬೀಸಿ ಕೊಂಡಳು. ಅವರಿಬ್ಬರೂ ಕೊನೆಗೆ ಒಂದು ದಿನ ಕೊಯಮತ್ತೂರಿಗೆ ಹೋಗಿ ಅಲ್ಲಿ ಒಂದು ಲಾಡ್ಜ್ ನಲ್ಲಿ ಇದ್ದು ಸೆಕ್ಸ್ ಮಾಡಿ ಬಂದರು. ಈ ವಿಚಾರ ಬಯಲಾದಾಗ ಹುಡುಗಿಯನ್ನು ಆ ಹುಡುಗನಿಂದ ದೂರ ಮಾಡಲು ಆಕೆಯ ಪ್ರಭಾವಿ ಕುಟುಂಬ ಮಾಸ್ಟರ್ ಪ್ಲಾನ್ ಸಿದ್ಧ ಪಡಿಸಿತು. ಹುಡುಗಿಯ ಮನವೊಲಿಸಿ ಹುಡುಗನ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿ ಆತನನ್ನು ಜೈಲಿಗೆ ಅಟ್ಟಲಾಯಿತು.

ಈಗ ಒಂದೂವರೆ ವರ್ಷದಿಂದ ಆ ಬಡಪಾಯಿ ಹುಡುಗ ಜೈಲಿನಲ್ಲಿ ಕೊಳೆಯುತ್ತಿದ್ದಾನೆ.  ಪ್ರಕರಣದ ವಿಚಾರಣೆಯ ವೇಳೆ ಹುಡುಗಿ ಆತನ ವಿರುದ್ಧ ಸಾಕ್ಷ್ಯ ನುಡಿದಿದ್ದಾಳೆ. ಅಪರಾಧ ಸಾಬೀತಾಗುವುದು ನಿಚ್ಚಳವಾಗಿದ್ದು ಶಿಕ್ಷೆ ಆದರೆ ಆ ಹುಡುಗ ಮುಂದಿನ 20 ವರ್ಷಗಳನ್ನು ಜೈಲಿನಲ್ಲಿ ಸವೆಸ ಬೇಕಾಗುತ್ತದೆ.

ಶಫೀರ್ ಎ .ಎ

ವಕೀಲರು, ಬೆಂಗಳೂರು

ಮೊ : 9342104296

ಇದನ್ನೂ ಓದಿ- ಭಾರತೀಯ ನಾಗರೀಕ ಸುರಕ್ಷಾ ಸಂಹಿತಾ(BNSS) : ಭ್ರಷ್ಟ  ಅಧಿಕಾರಿಗಳಿಗೆ ಶ್ರೀರಕ್ಷೆ ?

More articles

Latest article