ಆಧುನಿಕ ವೈದ್ಯಕೀಯ ಪದ್ಧತಿಗಳ ವಿರುದ್ಧ ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ನೀಡಲಾದ ನ್ಯಾಯಾಂಗ ನಿಂದನೆ ನೋಟಿಸ್‌ಗೆ ಪ್ರತಿಕ್ರಿಯಿಸಲು ಕಂಪನಿ ವಿಫಲವಾದ ಕಾರಣ ಸುಪ್ರೀಂ ಕೋರ್ಟ್ ಬಾಬಾ ರಾಮ್‌ದೇವ್ ಮತ್ತು ಅವರ ಕಂಪನಿಯ ಪತಂಜಲಿ ವ್ಯವಸ್ಥಾಪಕ ನಿರ್ದೇಶಕರಿಗೆ ಸಮನ್ಸ್ ನೀಡಿದೆ.
ಆಧುನಿಕ ವೈದ್ಯಕೀಯ ಪದ್ಧತಿಗಳ ಬಗ್ಗೆ ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟಿಸುವುದನ್ನು ಮುಂದುವರೆಸಿದ್ದಕ್ಕಾಗಿ ಪತಂಜಲಿ ಆಯುರ್ವೇದ್‌ಗೆ ಈ ಹಿಂದೆ ನ್ಯಾಯಾಂಗ ನಿಂದನೆ ನೋಟಿಸ್ ನೀಡಿತ್ತು. ಕಳೆದ ನವೆಂಬರ್‌ನಲ್ಲಿ ಪತಂಜಲಿಯ ವಕೀಲರು ನ್ಯಾಯಾಲಯದ ಮುಂದೆ ಅಂತಹ ಜಾಹೀರಾತುಗಳನ್ನು ತಡೆಯುವುದಾಗಿ ಭರವಸೆ ನೀಡಿದ ಹೊರತಾಗಿಯೂ ಪತಂಜಲಿ ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಮುಂದುವರೆಸಿದೆ ಎಂದು ನ್ಯಾಯಾಲಯ ಗಮನಿಸಿತ್ತು. ಇದರ ವಿರುದ್ಧ ನ್ಯಾಯಾಂಗ ನಿಂದನೆ ನೋಟಿಸ್ ನೀಡಿತ್ತು. ಇದಕ್ಕೆ ಉತ್ತರಿಸದ ಬಾಬಾ ರಾಮ್‌ದೇವ್ ಮತ್ತು ಅವರ ಕಂಪನಿಯ ಪತಂಜಲಿ ವ್ಯವಸ್ಥಾಪಕ ನಿರ್ದೇಶಕರಿಗೆ ಸಮನ್ಸ್ ನೀಡಿ, ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣಇಬ್ಬರೂ ಖುದ್ದು ಕೋರ್ಟ್ ಗೆ ಹಾಜರಾಗುವಂತೆ ಆದೇಶಿಸಿದೆ.
ಆಧುನಿಕ ವೈದ್ಯಕೀಯ ಪದ್ಧತಿಗಳ ವಿರುದ್ಧ ಸಾಲು ಸಾಲು ಸುಳ್ಳು ಜಾಹಿರಾತು ಪ್ರಕಟಿಸಿದ್ದ ಪತಂಜಲಿ ವಿರುದ್ದ ಕಳೆದ ವರ್ಷ ನವೆಂಬರ್ ನಲ್ಲಿ ಭಾರತೀಯ ವೈದ್ಯಕೀಯ ಸಂಘ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಈ ಕುರಿತು ಸುಪ್ರೀಂ ಪತಂಜಲಿ ಆಯುರ್ವೇದ ಇಂತಹ ಸುಳ್ಳು ಮತ್ತು ದಾರಿತಪ್ಪಿಸುವ ಜಾಹೀರಾತುಗಳನ್ನು ತಕ್ಷಣವೇ ನಿಲ್ಲಿಸಬೇಕು. ನ್ಯಾಯಾಲಯವು ಅಂತಹ ಯಾವುದೇ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ಇನ್ನು ಮುಂದೆ ಈ ರೀತಿ ಆದರೆ ನ್ಯಾಯಾಲಯವು ಸುಳ್ಳು ಜಾಹೀರಾತು ನೀಡುವ ಪ್ರತಿ ಉತ್ಪನ್ನದ ಮೇಲೂ 1 ಕೋಟಿ ರೂ. ದಂಡ ವಿಧಿಸುತ್ತದೆ ಎಂದು ಆದೇಶ ನೀಡಿತ್ತು.
ಸುಪ್ರೀಂ ನಿರ್ದೇಶನದ ನಂತರವು ಪತಂಜಲಿ ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಮುಂದುವರೆಸಿರುವುದನ್ನು ಕೋರ್ಟ್ ಗಮನಿಸಿದ್ದು ಈಗ ಖಡಕ್ ಅದೇಶ ನೀಡಿದೆ.