ಬೆಂಗಳೂರು: ಬರಪರಿಹಾರ ನೀಡಿಕೆ ವಿಷಯದಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದ ಹಿನ್ನೆಲೆಯಲ್ಲಿ ಈ ವಿಷಯ ಪದೇ ಪದೇ ಸುಳ್ಳು ಪ್ರತಿಪಾದನೆ ಮಾಡುತ್ತ ಬಂದಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಗೃಹಸಚಿವ ಅಮಿತ್ ಶಾ ಅವರ ಹೇಳಿಕೆಗಳಿಂದ ಭಾರತೀಯ ಜನತಾ ಪಕ್ಷ ಹಿನ್ನೆಡೆ ಅನುಭವಿಸಿತ್ತು.
ಇದೀಗ ಡ್ಯಾಮೇಜ್ ಕಂಟ್ರೋಲ್ ಗೆ ಇಳಿದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನರೇಂದ್ರ ಮೋದಿ ಸರ್ಕಾರದ ಹತ್ತು ವರ್ಷಗಳ ಸಾಧನೆಯ ಕುರಿತು ಇಂದು ಪತ್ರಿಕಾಗೋಷ್ಠಿ ನಡೆಸಿದರು.
ಕಾಂಗ್ರೆಸ್ ಗೆ ಎಲೆಕ್ಷನ್ ನಡೆಯುತ್ತಿರುವುದೇ ಗೊತ್ತಿಲ್ಲ. ರಾಜ್ಯದಲ್ಲಿ ಬಿಜೆಪಿಗೆ ಉತ್ತಮ ವಾತಾವರಣ ಇದೆ. ಮೋದಿ ರೋಡ್ ಶೋ ನಂತರ ಇನ್ನಷ್ಟು ಶಕ್ತಿ ಬರಲಿದೆ. 7 ಕೋಟಿ ಹೊಸ ಉದ್ದೋಗ 10 ವರ್ಷದಲ್ಲಿ ಸೃಷ್ಟಿಯಾಗಿದೆ. ಬೆಂಗಳೂರಿನ HAL ಗೆ ಮರು ಜೀವ ನೀಡಿದ್ದು ಮೋದಿ. HALಗೆ 29,000 ಕೋಟಿ ಆದಾಯ ಸಿಕ್ಕಿದೆ. HAL ಮುಚ್ಚುತ್ತಾರೆ ಎಂದಿದ್ದ ರಾಹುಲ್ ಕ್ಷಮೆ ಕೇಳ್ತಾರಾ…? ರಾಜ್ಯದಲ್ಲಿ 10 ತಿಂಗಳಲ್ಲಿ ಒಂದು ಉದ್ಯೋಗ ಕೊಟ್ಟಿಲ್ಲ. 10 ತಿಂಗಳಲ್ಲಿ ಉದ್ಯೋಗ ಸೃಷ್ಟಿಸದೇ ಇರುವುದೇ ಸಿದ್ಧರಾಮಯ್ಯ ಅವರ ಸಾಧನೆ ಎಂದು ಯಡಿಯೂರಪ್ಪ ಹೇಳಿದರು.
2014ರ ನಂತರ ರಾಜ್ಯದಲ್ಲಿ 3234 ರಾಷ್ಟ್ರೀಯ ಹೆದ್ದಾರಿ ಆಗಿದೆ. ಕಲಬುರಗಿ – ಬೀದರ್ ರೈಲು ಮಾರ್ಗ ಪೂರ್ಣ ಮಾಡಿದ್ದು ನಾವು. ರಾಜ್ಯದ ರೈಲು ವಿದ್ಯುದೀಕರಣ ಶೇ. 90ಕ್ಕೆ ಏರಿದೆ. ರಾಜ್ಯದಲ್ಲಿ ಬಿಜೆಪಿಗೆ ಉತ್ತಮ ವಾತಾವರಣ ಇದೆ.
8 ವಂದೇ ಭಾರತ್ ರೈಲುಗಳು ರಾಜ್ಯದಲ್ಲಿ ಸಂಚರಿಸುತ್ತಿವೆ. 10 ತಿಂಗಳಲ್ಲಿ ಸಿದ್ದು ಸರ್ಕಾರ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಿಲ್ಲ. ಮೋದಿಯವರು ಸುಳ್ಳು ಆಶ್ವಾಸನೇ ನೀಡುವುದಿಲ್ಲ. ನಾವು ಕಿಸಾನ್ ಸಮ್ಮಾನ್ ಗೆ ಕೊಡ್ತಿದ್ದ 4 ಸಾವಿರ ರೂಪಾಯಿಯನ್ನು ನಿಲ್ಲಿಸಿದ್ದಾರೆ.
ಕಾಂಗ್ರೆಸ್ ಗೆ ಮತ ಕೊಟ್ಟರೆ ಅರಾಜಕತೆಗೆ ಮತ ಕೊಟ್ಟಂತೆ. ಕಾಂಗ್ರೆಸ್ ಗೆ ಕೊಡುವ ಮತ ಆರ್ಥಿಕ ಹಿಂಜರಿತಕ್ಕೆ ಕೊಟ್ಟಂತೆ. ದೇಶದ ಆರ್ಥಿಕ ಪ್ರಗತಿಗಾಗಿ ಬಿಜೆಪಿಗೆ ಮತ ನೀಡಿ. ಅಯೋಧ್ಯೆ ರಾಮ ಮಂದಿರ ನಿರ್ಮಾಣ, ಕಾಶಿ ಅಭಿವೃದ್ಧಿ ಆಗಿದೆ. 37 ಕೋಟಿ ಜನರಿಗೆ ಆಯುಷ್ಮಾನ್ ಭಾರತ್ ಕಾರ್ಡ್ ಸಿಕ್ಕಿದೆ ಎಂದು ಅವರು ಹೇಳಿದರು.
1ಲಕ್ಷ ಕೋಟಿಗೆ ರಕ್ಷಣಾ ವಲಯದ ಉತ್ಪಾದನೆ ತಲುಪಿದೆ. ಕರ್ನಾಟಕಕ್ಕೆ 10 ವರ್ಷದಲ್ಲಿ 2.93ಲಕ್ಷ ಕೋಟಿ ತೆರಿಗೆ ಹಣ ಬಂದಿದೆ. ಯುಪಿಎ ಸರ್ಕಾರ ಕೇವಲ 81 ಸಾವಿರ ಕೋಟಿ ನೀಡಿತ್ತು. 10 ವರ್ಷದಲ್ಲಿ ಕೇಂದ್ರದಿಂದ 2.36ಲಕ್ಷ ಕೋಟಿ ಅನುದಾನ ಬಂದಿದೆ. ಯುಪಿಎ ಸರ್ಕಾರ 10 ವರ್ಷದಲ್ಲಿ 60 ಸಾವಿರ ಕೋಟಿ ಅನುದಾನ ನೀಡಿತ್ತು.
74 ಲಕ್ಷ ಮನೆಗಳಿಗೆ ಜಲಜೀವನ್ ಅಡಿ ನಲ್ಲಿ ನೀರು ಕೊಟ್ಟಿದ್ದೇವೆ. 27.60 ಲಕ್ಷ ಸುಕನ್ಯಾ ಸಮೃದ್ದಿ ಅಕೌಂಟ್ ತೆರೆದಿದ್ದೇವೆ. 1.67 ಕೋಟಿ ಜನಧನ್ ಅಕೌಂಟ್ ತೆರೆದಿದ್ದೇವೆ. ರಾಜ್ಯದ ಜನತೆಗೆ ಉಚಿತವಾಗಿ 75 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ವಿತರಣೆ ಮಾಡಲಾಗಿದೆ ಎಂದು ಯಡಿಯೂರಪ್ಪ ವಿವರಿಸಿದರು.