ಯಡಿಯೂರಪ್ಪ ನಾಪತ್ತೆ: ಅಜ್ಞಾತ ಸ್ಥಳಕ್ಕೆ ತೆರಳಿದರಾ ಮಾಜಿ ಮುಖ್ಯಮಂತ್ರಿ?

Most read

ಬೆಂಗಳೂರು: ಪೋಕ್ಸೋ ಪ್ರಕರಣವನ್ನು ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಪತ್ತೆಯಾಗಿದ್ದಾರೆ. ತಮ್ಮ ವಿರುದ್ಧ ಬಂಧನ ವಾರಂಟ್ ಹೊರಡಿಸಲು ನ್ಯಾಯಾಲಯ ಸಿಐಡಿ ಪೊಲೀಸರಿಗೆ ಅನುಮತಿ ನೀಡಿದ ಬೆನ್ನಲ್ಲೇ ಯಡಿಯೂರಪ್ಪ ಅಜ್ಞಾತ ಸ್ಥಳಕ್ಕೆ ತೆರಳಿದ್ದು ಬಂಧನದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.

ಬಂಧನ ಭೀತಿಗೆ ಒಳಗಾಗಿರುವ ಯಡಿಯೂರಪ್ಪ ಈಗಾಗಲೇ ಹೈಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ನಾಳೆ ವಿಚಾರಣೆ ನಡೆಯುವ ಸಂಭವವಿದೆ. ಹೀಗಾಗಿ ಹೈಕೋರ್ಟ್ ನಲ್ಲಿ ತೀರ್ಪು ಬರುವವರೆಗೆ ಪೊಲೀಸರ ಕೈಗೆ ಸಿಗದೇ ಇರಲು ಯಡಿಯೂರಪ್ಪ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಯಡಿಯೂರಪ್ಪ ಅವರು ಬೆಂಗಳೂರು ನಿವಾಸದಲ್ಲೂ ಇಲ್ಲ, ದೆಹಲಿಗೂ ತೆರಳಿಲ್ಲ ಎಂದು ಗೊತ್ತಾಗಿದ್ದು, ಅವರು ಎಲ್ಲಿದ್ದಾರೆ ಎಂಬ ಮಾಹಿತಿ ಇಲ್ಲದಂತಾಗಿದೆ. ಸಿಐಡಿ ಪೊಲೀಸರು ಯಾವುದೇ ಕ್ಷಣದಲ್ಲಿ ಬಂಧನಕ್ಕೆ ಮುಂದಾಗಬಹುದು ಎಂಬ ಕಾರಣಕ್ಕೆ ಯಡಿಯೂರಪ್ಪ ನಾಪತ್ತೆಯಾಗಿದ್ದಾರೆ.

ಅಪ್ರಾಪ್ತ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ನ್ಯಾಯಾಲಯ ಬಂಧನ ವಾರಂಟ್ ಜಾರಿ ಮಾಡಲು ಇಂದು ಅನುಮತಿ ನೀಡಿತು.

ಸಿಐಡಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ 51ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ಹಾಗೂ ಪೋಕ್ಸೊ ಪ್ರಕರಣಗಳ ವಿಚಾರಣೆ ನಡೆಸುವ ತ್ವರಿತಗತಿಯ ವಿಶೇಷ ನ್ಯಾಯಾಲಯ-1 ಈ ಆದೇಶವನ್ನು ನೀಡಿದೆ.

ಸರ್ಚ್ ವಾರಂಟ್ ಮತ್ತು ಬಂಧನ್‌ ವಾರಂಟ್‌ ಹೊರಡಿಸಲು ಅನುಮತಿ ಕೋರಿ ಸಿಐಡಿ ಪರ ವಾದ ಮಂಡಿಸಿದ ವಿಶೇಷ ಅಭಿಯೋಜಕರ ವಾದವನ್ನು ಪುರಸ್ಕರಿಸಿದ ನ್ಯಾಯಾಧೀಶ ಎನ್ ಎಂ ರಮೇಶ್ , ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಯಡಿಯೂರಪ್ಪ ಬಂಧನಕ್ಕೆ ವಾರಂಟ್‌ ಹೊರಡಿಸಲು ಅನುಮತಿ ನೀಡಿದರು.

ವಿಚಾರಣೆ ಸಂದರ್ಭದಲ್ಲಿ ಸಿಐಡಿ ಪರ ಸರ್ಕಾರಿ ಅಭಿಯೋಜಕ ಅಶೋಕ್ ನಾಯಕ್ ವಾದ ಮಂಡಿಸಿ, ಯಡಿಯೂರಪ್ಪಅವರನ್ನು ಬಂಧಿಸುವ ಅಗತ್ಯ ವಿರುವುದರಿಂದ ವಾರಂಟ್ ಹೊರಡಿಸಲು ಮನವಿ ಮಾಡಿದರು.

ಸಿಆರ್ ಪಿಸಿ ಸೆಕ್ಷನ್ 164ರ ಅಡಿಯಲ್ಲಿ ಸಂತ್ರಸ್ತೆಯ ಹೇಳಿಕೆ ಪಡೆಯಲಾಗಿದೆ. ಸಂತ್ರಸ್ತೆ, ದೂರುದಾರರಿಗೆ ಹಣದ ಆಮಿಷ ನೀಡಲಾಗಿದೆ. 2 ಲಕ್ಷ ರುಪಾಯಿಗಳನ್ನು ನೀಡಲಾಗಿದೆ ಎಂಬ ಮಾಹಿತಿಯೂ ಇದೆ. ವಿಡಿಯೋ ಡಿಲೀಟ್ ಮಾಡುವಂತೆ ಒತ್ತಾಯಿಸಲಾಗಿದೆ. ಹೀಗಾಗಿ ಆರೋಪಿ ಮುಂದೆ ವಿಚಾರಣೆಗೆ ಸಹಕರಿಸುವ ನಂಬಿಕೆ ಇಲ್ಲ ಹೀಗಾಗಿ ಯಡಿಯೂರಪ್ಪ ಬಂಧಿಸುವ ಅಗತ್ಯ ಇದೆ ಎಂದು ಅವರು ವಾದಿಸಿದ್ದರು.

ಯಡಿಯೂರಪ್ಪ ಅವರ ಲೊಕೇಷನ್ ಪತ್ತೆ ಆಗುತ್ತಿಲ್ಲ. ಆರೋಪಿ ವಿರುದ್ಧ ಸಾಕ್ಷ್ಯಗಳು ಇವೆ. ಇನ್ನಷ್ಟು ತನಿಖೆ ಆಗಬೇಕಿದೆ. ಹೀಗಾಗಿ ಆರೋಪಿ ವಿರುದ್ಧ ವಾರಂಟ್ ಜಾರಿ ಮಾಡಬೇಕು ಎಂದು ವಿಶೇಷ ಅಭಿಯೋಜಕರು ಮನವಿ ಮಾಡಿದ್ದಾರೆ. ಸರ್ಚ್ ವಾರಂಟ್, ಬಂಧನ ವಾರಂಟ್ ನೀಡಿದಲ್ಲಿ ಆರೋಪಿಯನ್ನು ಬಂಧಿಸಬಹುದಾಗಿದೆ ಎಂದು ಅವರು ಹೇಳಿದ್ದರು.

ಸರ್ಕಾರಿ ಅಭಿಯೋಜಕರ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಲು ಅನುಮತಿ ನೀಡುವುದರೊಂದಿಗೆ ಯಡಿಯೂರಪ್ಪ ಬಂಧನಕ್ಕೆ ಕ್ಷಣಗಣನೆ ಆರಂಭವಾಗಿದೆ.

ಮಾರ್ಚ್ 14ರಂದು ಸದಾಶಿವನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನಿನ್ನೆ ನೋಟೀಸ್ ಜಾರಿ ಮಾಡಲಾಗಿತ್ತು. ನಿನ್ನೆಯೇ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಯಡಿಯೂರಪ್ಪ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಇಂದು ಅವರನ್ನು ಬಂಧಿಸುವ ಸಾಧ್ಯತೆ ಇದೆ.

ತನ್ನಅಪ್ರಾಪ್ತ ವಯಸ್ಸಿನ ಮಗಳೊಂದಿಗೆ ನೆರವು ಕೇಳಿಕೊಂಡು ಯಡಿಯೂರಪ್ಪ ನಿವಾಸಕ್ಕೆ ಬಂದಿದ್ದ ಮಹಿಳೆಯೋರ್ವರು ತನ್ನ ಮಗಳ ಜೊತೆ ಯಡಿಯೂರಪ್ಪ ಅನುಚಿತವಾಗಿ ನಡೆದುಕೊಂಡು, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರು ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ಯಡಿಯೂರಪ್ಪಅವರ ವಿರುದ್ಧ ಪೋಕ್ಸೋ ಅಡಿಯಲ್ಲಿ ದೂರು ದಾಖಲಾಗಿತ್ತು. ಮಾರ್ಚ್ 14ರಂದು ದೂರು ದಾಖಲಾದ ನಂತರ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿತ್ತು. ಕೆಲವು ದಿನಗಳ ಹಿಂದಷ್ಟೇ ದೂರು ಸಲ್ಲಿಸಿದ್ದ ಮಹಿಳೆ ಅನಾರೋಗ್ಯದಿಂದ ಮೃತಪಟ್ಟಿದ್ದರು.

ಈ ನಡುವೆ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಬೇಕು ಎಂದು ಯಡಿಯೂರಪ್ಪ ಸಿಐಡಿಗೆ ಮನವಿ ಮಾಡಿದ್ದಾರೆ. ತಮ್ಮ ವಿರುದ್ಧ ದಾಖಲಾದ ಎಫ್ ಐ ಆರ್ ರದ್ದುಗೊಳಿಸಬೇಕು ಎಂದು ಕೋರಿ ಅವರು ಈಗಾಗಲೇ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

More articles

Latest article