ಬೆಂಗಳೂರು: ತಾಯಿ-ಮಗಳು ತಮಗೆ ಅನ್ಯಾಯವಾಗಿದೆಯೆಂದು ನನ್ನ ಬಳಿ ಬಂದಿದ್ದು ನಿಜ. ಅವರಿಗೆ ನ್ಯಾಯ ಕೊಡಿಸಿ ಎಂದು ಪೊಲೀಸ್ ಕಮಿಷನರ್ ಗೆ ವಿನಂತಿಸಿದ್ದೆ. ಈಗ ನನ್ನ ವಿರುದ್ಧವೇ ದೂರು ದಾಖಲಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ನಿನ್ನೆ ತಡರಾತ್ರಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ 81 ವರ್ಷದ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ 17 ವರ್ಷದ ಅಪ್ರಾಪ್ತೆ ಲೈಂಗಿಕ ಕಿರುಕುಳದ ದೂರು ನೀಡಿದ್ದರ ಹಿನ್ನೆಲೆಯಲ್ಲಿ ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ತಾಯಿ ಮಗಳು ತಮಗೆ ಅನ್ಯಾಯವಾಗಿದೆ, ನ್ಯಾಯ ಕೊಡಿಸಿ ಎಂದು ಹಲವು ಬಾರಿ ತಮ್ಮ ಬಳಿಗೆ ಬಂದಿದ್ದು ನಿಜ. ನಾನು ಈ ಸಂಬಂಧ ಪೊಲೀಸ್ ಕಮಿಷನರ್ ಗೆ ಕರೆ ಮಾಡಿ ಅವರಿಗೆ ಅನ್ಯಾಯವಾಗಿದೆ ಎಂದು ಹೇಳುತ್ತಿದ್ದಾರೆ, ಈ ಕುರಿತು ವಿಚಾರಣೆ ನಡೆಸಿ ನ್ಯಾಯ ಕೊಡಿಸಿ ಎಂದು ಹೇಳಿದ್ದೆ. ನಂತರ ಅವರು ನನ್ನ ವಿರುದ್ಧವೇ ಮಾತನಾಡಲು ಆರಂಭಿಸಿದರು. ನಿನ್ನೆ ಅವರು ಪ್ರಕರಣ ದಾಖಲಿಸಿದ್ದಾರೆ ಎಂಬ ವಿಷಯ ತಿಳಿಯಿತು. ಮುಂದೇನಾಗುತ್ತೋ ನೋಡೋಣ ಎಂದರು.
ಈ ಪ್ರಕರಣದ ಹಿನ್ನೆಲೆಯಲ್ಲಿ ರಾಜಕೀಯ ಕೈವಾಡ ಏನಾದರೂ ಇರಬಹುದೇ ಎಂದು ಮಾಧ್ಯಮ ಪ್ರತಿನಿಧಿಯೊಬ್ಬರು ಕೇಳಿದ ಪ್ರಶ್ನೆಗೆ ಹಾಗೇನೂ ಕಾಣುತ್ತಿಲ್ಲ ಎಂದು ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದರು.
ನಿನ್ನೆ 17 ವರ್ಷದ ಬಾಲಕಿ ಮತ್ತು ಆಕೆಯ ತಾಯಿ ಸದಾಶಿವನಗರ ಪೊಲೀಸ್ ಠಾಣೆಗೆ ಬಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ದೂರು ನೀಡಿದ್ದರು. ಸಮಸ್ಯೆ ಹೇಳಿಕೊಳ್ಳಲು ಯಡಿಯೂರಪ್ಪ ಅವರ ಬಳಿಗೆ ಹೋದಾಗ ಬಾಲಕಿಯನ್ನು ಕೊಠಡಿಗೆ ಕರೆಯಿಸಿಕೊಂಡು ಬಾಗಿಲು ಹಾಕಿಕೊಂಡು ಲೈಂಗಿಕ ಕಿರುಕುಳ ನೀಡಿದರು ಎಂದು ಬಾಲಕಿಯ ತಾಯಿ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಸದಾಶಿವನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.