ಆಸ್ಕರ್‌ ಸಮಾರಂಭಕ್ಕೆ ಬೆತ್ತಲಾಗಿ ಬಂದ ರೆಸ್ಲಿಂಗ್‌ ಸೂಪರ್‌ ಸ್ಟಾರ್‌ ಜಾನ್‌ ಸೀನಾ

Most read

ಹೊಸದಿಲ್ಲಿ: 96ನೇ ಅಕಾಡೆಮಿ ಅವಾರ್ಡ್ಸ್‌ (ಆಸ್ಕರ್) ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ರೆಸ್ಲಿಂಗ್‌ ಸೂಪರ್‌ ಸ್ಟಾರ್‌ ಮತ್ತು ನಟ ಜಾನ್ ಸೀನಾ ಬೆತ್ತಲಾಗಿ ಬಂದು ಭಾಗವಹಿಸಿ ಎಲ್ಲರ ಹುಬ್ಬೇರುವಂತೆ ಮಾಡಿದರು.

ಅತ್ಯುತ್ತಮ ಕಾಸ್ಟೂಮ್‌ ಡಿಸೈನ್‌ ಪ್ರಶಸ್ತಿ ಪಡೆದವರಿಗೆ ಪ್ರಶಸ್ತಿ ನೀಡಲು ಜಾನ್‌ ಸೀನಾ ಅವರನ್ನು ಆಹ್ವಾನಿಸಲಾಯಿತು. ಈ ಸಂದರ್ಭದಲ್ಲಿ ಕಾಸ್ಟೂಮ್‌ ಮಹತ್ವವನ್ನು ಹೇಳುವ ಸಲುವಾಗಿ ಜಾನ್‌ ಸೀನಾ ಬೆತ್ತಲಾಗಿ ವೇದಿಕೆಯಲ್ಲಿ ಪ್ರತ್ಯಕ್ಷರಾದರು. ಜಾನ್ ಸೀನಾ ಅವರನ್ನು ಹುಟ್ಟುಡುಗೆಯಲ್ಲಿ ಕಂಡ ಪ್ರೇಕ್ಷಕರು ಹೋ ಎಂದು ಕೂಗಿದರು. ನಂತರ ವೇದಿಕೆಯಲ್ಲೇ ಅವರಿಗೆ ಬಟ್ಟೆಯನ್ನು ತೊಡಿಸಲಾಯಿತು. ನಂತರ ಪ್ರಶಸ್ತಿ ಪ್ರಧಾನವೂ ನೆರವೇರಿತು.

ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದ ಜಿಮ್ಮಿಕಿಮ್ಮೆಲ್‌, ಒಬ್ಬ ಬೆತ್ತಲೆ ಮನುಷ್ಯ ಈಗ ಈ ವೇದಿಕೆಗೆ ಓಡಿ ಬರುವುದನ್ನು ನೀವು ಊಹಿಸಬಲ್ಲಿರಾ? ಇದು ಅತ್ಯಂತ ಕ್ರೇಜಿಯಾಗಿರುತ್ತಲ್ಲವೇ ಎಂದು ವೀಕ್ಷಕರನ್ನು ಕೇಳುತ್ತಿದ್ದಂತೆ ಜಾನ್‌ ಸೀನಾ ಅವರು ವೇದಿಕೆಯ ಒಂದು ಮೂಲೆಯಲ್ಲಿ ಕತ್ತು ಚಾಚಿರುವುದು ಕಾಣಿಸಿತು.

ಗಂಡಸಿನ ದೇಹ ಒಂದು ಜೋಕ್‌ ಅಲ್ಲ ಎಂದು ಹೇಳುತ್ತ ಜಾನ್‌ ಸೀನಾ ಒಳಗೆ ಪ್ರವೇಶಿಸಿದರು. ಅವರು ಪ್ರಶಸ್ತಿಯ ಹೆಸರು ಇದ್ದ ಎನ್ವೆಲಪ್ ಅನ್ನು ತಮ್ಮ ಕೆಳಭಾಗವನ್ನು ಮುಚ್ಚಿಕೊಂಡು ಜಾಣತನದಿಂದ ಮುಂದೆ ಬಂದರು. ಕಾಸ್ಟೂಮ್ಸ್‌ ತುಂಬ ಮುಖ್ಯ, ಬಹುಶಃ ಅತಿ ಮುಖ್ಯ ಎಂದು ಅವರು ಹೇಳುತ್ತಿದ್ದಂತೆ ವೀಕ್ಷಕರಿಂದ ಕರತಾಡನ ಜೋರಾಯಿತು.

ಇದಾದ ನಂತರ ಇಂಟರ್‌ ನೆಟ್‌ ತುಂಬೆಲ್ಲ ಜಾನ್‌ ಸೀನಾ ಕುರಿತ ಚರ್ಚೆ ಜೋರಾಗಿ ನಡೆಯಿತು. ಹಲವರು ಜಾನ್‌ ಸೀನಾ ತೋರಿದ ಧೈರ್ಯವನ್ನು ಕೊಂಡಾಡಿದರು. ಜಾನ್‌ ಸೀನಾ ನಿಜಕ್ಕೂ ಆಸ್ಕರ್‌ ಗೆದ್ದರು ಎಂದು ಒಬ್ಬ ಎಕ್ಸ್‌ ಬಳಕೆದಾರ ಹೇಳಿದರೆ, ವಿಷಯ ಏನೇ ಇರಲಿ, ಜಾನ್‌ ಸೀನಾ ಅವರ ಬದ್ಧತೆ ಅಪಾರ ಎಂದು ಮತ್ತೋರ್ವರು ಪೋಸ್ಟ್‌ ಮಾಡಿದರು.

ಅತ್ಯುತ್ತಮ ಕಾಸ್ಟೂಮ್‌ ಗಾಗಿ ಪೂರ್‌ ಥಿಂಗ್ಸ್‌ ಎಂಬ ಸಿನಿಮಾಗೆ ಪ್ರಶಸ್ತಿ ನೀಡಲಾಯಿತು.

More articles

Latest article