ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ 2025ರ ಮೂರನೇ ಆವೃತ್ತಿ ಶುಕ್ರವಾರದಿಂದ ಆರಂಭವಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೆ. 21, 22, 24, 25, 26, 27, 28 ಮತ್ತು ಮಾರ್ಚ್ 1 ರಂದು ಪಂದ್ಯಗಳು ನಡೆಯಲಿದೆ. ಕ್ರಿಕೆಟ್ ಪಂದ್ಯ ವೀಕ್ಷಕರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ರೈಲು ಸೇವೆಯನ್ನು ವಿಸ್ತರಣೆ ಮಾಡಿದೆ. WPL ಮ್ಯಾಚ್ ನೋಡಲು ಹೋಗುವವರಿಗೆ ಈ ಮೂಲಕ ನಮ್ಮ ಮೆಟ್ರೋ ಸಿಹಿ ಸುದ್ದಿ ನೀಡಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಹಿಳೆಯರ ಪ್ರೀಮಿಯರ್ ಲೀಗ್ ಪಂದ್ಯಗಳು ನಡೆಯಲಿರುವ ಹಿನ್ನೆಲೆ ನಮ್ಮ ಮೆಟ್ರೋ ರೈಲು ಸೇವೆಯನ್ನು ವಿಸ್ತರಣೆ ಮಾಡಿ ಗುರುವಾರ ಆದೇಶ ಹೊರಡಿಸಿದೆ. ಕ್ರಿಕೆಟ್ ಪಂದ್ಯಗಳನ್ನು ಅಭಿಮಾನಿಗಳು ನೋಡಲು ಬರುತ್ತಾರೆ. ಆ ದೃಷ್ಟಿಯಿಂದ ಅವರ ಅನುಕೂಲಕ್ಕಾಗಿ ಮೆಟ್ರೋ ವ್ಯವಸ್ಥೆ ಕಲ್ಪಿಸಿದೆ.
ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಮೆಟ್ರೋ ಸೇವೆ ವಿಸ್ತರಣೆ ಮಾಡಿದ್ದು, ಚಲ್ಲಘಟ್ಟ, ವೈಟ್‌ಫೀಲ್ಡ್, ಮಾದಾವರ ಮತ್ತು ಸಿಲ್ಕ್ ಬೋರ್ಡ್ ನಿಂದ ರಾತ್ರಿ 11.20 ಕ್ಕೆ ಕೊನೆಯ ರೈಲು ಸೇವೆ ಇರಲಿದೆ. ಮೆಜೆಸ್ಟಿಕ್ ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ಎಲ್ಲಾ ನಾಲ್ಕು ಭಾಗಗಳಿಗೆ ಕೊನೆಯ ರೈಲು ರಾತ್ರಿ 11.55 ಕ್ಕೆ ಹೊರಡಲಿದೆ. ಪ್ರಯಾಣಿಕರು ಮೆಟ್ರೋ ಪ್ರಯಾಣಕ್ಕಾಗಿ ಕ್ಯೂಆರ್ ಟಿಕೆಟ್‌ಗಳು, ಸ್ಮಾರ್ಟ್ ಕಾರ್ಡ್, ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್‌ಗಳು (ಎನ್‌ಸಿಎಂಸಿ) ಮತ್ತು ಟೋಕನ್‌ಗಳನ್ನು ಬಳಸಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ.
ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಯುಪಿ ವಾರಿಯರ್ಸ್, ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಜೈಂಟ್ಸ್ , ಮುಂಬೈ ಇಂಡಿಯನ್ಸ್ ಐದು ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಪೈಪೋಟಿ ನಡೆಸಿವೆ. 2024 ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ ಪಟ್ಟಕ್ಕೇರಿತ್ತು.