ಆಂಟಿಗುವಾ: ಟೂರ್ನಿಯುದ್ದಕ್ಕೂ ಸೋಲಿಲ್ಲದ ಸರದಾರನಾಗಿ ಬೀಗುತ್ತಿರುವ ಆಸ್ಟ್ರೇಲಿಯಾಗೆ ಬಾಂಗ್ಲಾದೇಶ ತಂಡ ಪೈಪೋಟಿ ನೀಡಲೇ ಇಲ್ಲ. ಮಳೆಯಿಂದ ಅರ್ಧಕ್ಕೆ ನಿಂತ ಪಂದ್ಯದಲ್ಲಿ ಆಸ್ಟ್ರೇಲಿಯಾ ಡಕ್ವರ್ತ್ ಲೂಯಿಲ್ (ಡಿಎಲ್ ಎಸ್) ನಿಯಮಾವಳಿ ಅನುಸಾರ 28 ರನ್ ಗಳ ಭರ್ಜರಿ ಜಯ ಗಳಿಸಿತು.
ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟ್ ಮಾಡಲು ಬಾಂಗ್ಲಾದೇಶಕ್ಕೆ ಆಮಂತ್ರಣ ನೀಡಿತು. ಒಂದಾದ ಮೇಲೊಂದರಂತೆ ವಿಕೆಟ್ ಗಳನ್ನು ಕಳೆದುಕೊಂಡ ಬಾಂಗ್ಲಾದೇಶ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 140 ಪೇರಿಸಿತು. ಬಾಂಗ್ಲಾದೇಶ ನಾಯಕ ನಜ್ಮುಲ್ ಹುಸೇನ್ ಶಾಂತೋ (41) ಮತ್ತು ತೌಹಿದ್ ಹೃದೊಯ್ (40) ರನ್ ಗಳಿಸುವ ಮೂಲಕ ಬಾಂಗ್ಲಾದೇಶಕ್ಕೆ ಆಸರೆಯಾದರು. ಪ್ಯಾಟ್ ಕಮಿನ್ಸ್ ಮೂರು ವಿಕೆಟ್ ಕಬಳಿಸಿದರೆ, ಆಡಮ್ ಜಂಪಾ ಎರಡು ವಿಕೆಟ್ ಕಿತ್ತು ಬಾಂಗ್ಲಾದೇಶದ ರನ್ ಗತಿಯನ್ನು ನಿಯಂತ್ರಿಸಿದರು.
141 ರನ್ ಗಳ ಸಾಧಾರಣ ಮೊತ್ತ ಬೆನ್ನತ್ತಿದ್ದ ಆಸ್ಟ್ರೇಲಿಯಾದ ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್ ಮತ್ತು ಟ್ರಾವಿಸ್ ಹೆಡ್ ಬಾಂಗ್ಲಾ ಬೌಲರ್ ಗಳ ನೀರಿಳಿಸಿದರು. ವಾರ್ನರ್ 3 ಸಿಕ್ಸರ್, 5 ಬೌಂಡರಿಗಳನ್ನು ಸಿಡಿಸಿ 53 ರನ್ ಗಳಿಸಿದರು. ಇದಕ್ಕೆ ಅವರು ತೆಗೆದುಕೊಂಡಿದ್ದು ಕೇವಲ 35 ಎಸೆತಗಳು ಮಾತ್ರ. ಇನ್ನೊಂದೆಡೆ ಟ್ರಾವಿಸ್ ಹೆಡ್ 21 ಎಸೆತಗಳಲ್ಲಿ 31 ರನ್ ಗಳಿಸಿದರು.
ಆಸ್ಟ್ರೇಲಿಯಾ ಬ್ಯಾಟ್ ಮಾಡುತ್ತಿದ್ದಾಗ ಏಳನೇ ಓವರ್ ನಲ್ಲಿ ಮಳೆ ಬಂದು ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆಗ ಆಸ್ಟ್ರೇಲಿಯಾ ಯಾವುದೇ ವಿಕೆಟ್ ನಷ್ಟವಿಲ್ಲದೆ 64 ರನ್ ಗಳಿಸಿತ್ತು. ಪಂದ್ಯ ಪುನರಾರಂಭವಾದ ನಂತರ ಟ್ರಾವಿಸ್ ಹೆಡ್ ಮತ್ತು ನಾಯಕ ಮಿಚೆಲ್ ಮಾರ್ಶ್ ಔಟಾದರು. ಮಳೆಯ ಕಣ್ಣಾಮುಚ್ಚಾಲೆ ಆಟದ ನಂತರ ಪಂದ್ಯ ಸಂಪೂರ್ಣ ರದ್ದಾಗುವ ಸಂದರ್ಭದಲ್ಲಿ ಆಸ್ಟ್ರೇಲಿಯಾ 11.2 ಓವರ್ ಗಳಲ್ಲಿ 100 ರನ್ ಗಳಿಸಿತ್ತು. ಡಿಎಲ್ ಎಸ್ ಪದ್ಧತಿಯ ಅನುಸಾರ ಆಸ್ಟ್ರೇಲಿಯಾ 28 ರನ್ ಗಳಿಂದ ಗೆದ್ದಿದೆ ಎಂದು ಘೋಷಿಸಲಾಯಿತು.
ಬಾಂಗ್ಲಾದೇಶದ ಪರ ರಿಶಾದ್ ಹುಸೇನ್ ಎರಡು ವಿಕೆಟ್ ಗಳಿಸಿದರು.ಉತ್ತಮ ಬೌಲಿಂಗ್ ಪ್ರದರ್ಶಿಸಿದ ಪ್ಯಾಟ್ ಕಮಿನ್ಸ್ ಅವರಿಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ನೀಡಲಾಯಿತು.
ಸೂಪರ್ 8ರ ಮೊದಲ ಗುಂಪಿನಲ್ಲಿ ಈಗ ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳು ತಲಾ ಒಂದೊಂದು ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್ ತಲುಪುವ ಹಾದಿಯಲ್ಲಿ ಮುಂದೆ ಸಾಗಿವೆ. ಸೆಮಿಫೈನಲ್ ತಲುಪುವ ಅವಕಾಶ ಪಡೆಯಲು ಈ ಗುಂಪಿನ ಅಫಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ತಮ್ಮ ಪಾಲಿನ ಉಳಿದೆರಡೂ ಪಂದ್ಯಗಳನ್ನು ಗೆಲ್ಲಬೇಕಾಗಿದೆ.