ವಿಶ್ವಕಪ್ ಸೂಪರ್-8: ದಕ್ಷಿಣ ಆಫ್ರಿಕಾಗೆ ಇಂದು ಅಮೆರಿಕದ ಸವಾಲು

Most read

ನಾರ್ತ್‌ ಸೌಂಡ್‌, ಸೇಂಟ್‌ ಜಾರ್ಜ್‌ (ಆಂಟಿಗುವಾ ಅಂಡ್‌ ಬರ್ಬುಡ): ವಿಶ್ವಕಪ್‌ ಟಿ-20, 2024ರ ಸೂಪರ್‌-8 (T20 World Cup 2024) ಘಟ್ಟದ ವೇದಿಕೆ ಸಜ್ಜಾಗಿದ್ದು, ವಿವಿಯನ್‌ ರಿಚರ್ಡ್ಸ್‌ ಕ್ರೀಡಾಂಗಣದಲ್ಲಿ ಪ್ರಬಲ ದಕ್ಷಿಣ ಆಫ್ರಿಕಾ ತಂಡ ಅಮೆರಿಕದ ಸವಾಲು ಎದುರಿಸಲಿದೆ.

ಎ ಗುಂಪಿನಲ್ಲಿ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿ ಸೂಪರ್–8 ಪ್ರವೇಶಿಸಿರುವ ಅಮೆರಿಕ (USA) ಇದುವರೆಗೆ ಭರ್ಜರಿ ಪ್ರದರ್ಶನ ತೋರಿದೆ. ಭಾರತ ತಂಡದ ವಿರುದ್ಧ ಪ್ರಬಲ ಪೈಪೋಟಿ ನೀಡಿದ್ದ ಅಮೆರಿಕ, ಪ್ರಬಲ ಪಾಕಿಸ್ತಾನವನ್ನು ಮಣಿಸುವ ಮೂಲಕ ತನ್ನ ಶಕ್ತಿ ತೋರಿಸಿತ್ತು.

ಇನ್ನೊಂದೆಡೆ ಡಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಸೂಪರ್‌-8 ಪ್ರವೇಶಿಸಿರುವ ದಕ್ಷಿಣ ಆಫ್ರಿಕಾ (SOUTH AFRICA) ತಂಡ ಎಲ್ಲ ವಿಭಾಗದಲ್ಲೂ ಬಲಶಾಲಿಯಾಗಿದೆ. ಅಮೆರಿಕ ತಂಡದ ವಿರುದ್ಧ ಗೆಲ್ಲುವ ನೆಚ್ಚಿನ ತಂಡ ದಕ್ಷಿಣ ಆಫ್ರಿಕಾವೇ ಆಗಿದ್ದರೂ ಅಮೆರಿಕದ ಶಕ್ತಿಯನ್ನು ನಿರ್ಲಕ್ಷಿಸುವಂತಿಲ್ಲ.

ವಿಶೇಷವೆಂದರೆ ಅಮೆರಿಕ ತಂಡದಲ್ಲಿ ಅಮೆರಿಕ ಮೂಲದವರನ್ನು ದುರ್ಬೀನು ಹಾಕಿ ಹುಡುಕಬೇಕಿದೆ. ಯಾಕೆಂದರೆ ಆ ತಂಡದಲ್ಲಿರುವ ಎಲ್ಲರೂ ಬೇರೆ ದೇಶಗಳ ಮೂಲದವರು. ಅದರಲ್ಲೂ ಭಾರತ ಮೂಲದವರೇ ಎಂಟು ಮಂದಿ ಆಟಗಾರರಿದ್ದಾರೆ. ಮಿಕ್ಕಂತೆ ಪಾಕಿಸ್ತಾನ ಮೂಲದ ಇಬ್ಬರು, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ನೆದರ್ಲ್ಯಾಂಡ್ ಮತ್ತು ನ್ಯೂಜಿಲೆಂಡ್ ಮೂಲದ ತಲಾ ಒಬ್ಬರು ಆಟಗಾರರಿದ್ದಾರೆ. ಈ ಎಲ್ಲ ಆಟಗಾರರು ಸ್ಥಿರ ಪ್ರದರ್ಶನ ನೀಡುತ್ತಿರುವುದು, ತಂಡ ಸಾಂಘಿಕ ಪ್ರದರ್ಶನ ತೋರುತ್ತಿದೆ.

ಮೊನಾಂಕ್ ಪಟೇಲ್ ನೇತೃತ್ವದ ಅಮರಿಕ ಪಡೆ ಗ್ರೂಪ್ ಹಂತದ ಪಂದ್ಯಗಳನ್ನು ಅಮೆರಿಕದ ಪಿಚ್ ಗಳಲ್ಲೇ ಆಡಿತ್ತು. ಈಗ ಭಿನ್ನವಾಗಿ ವರ್ತಿಸುವ ವೆಸ್ಟ್ ಇಂಡೀಸ್ ಪಿಚ್ ಗಳಲ್ಲಿ ಆಡುವ ಸವಾಲು ಎದುರಿಸಬೇಕಿದೆ.

ಮತ್ತೊಂದೆಡೆ ದಕ್ಷಿಣ ಆಫ್ರಿಕಾ ತಂಡದ ಬೌಲರ್ ಗಳು ಗ್ರೂಪ್ ಹಂತದಲ್ಲಿ ಮಿಂಚಿದ್ದರೂ, ಬ್ಯಾಟ್ಸ್ ಮನ್ ಗಳು ಇನ್ನೂ ಲಯಕ್ಕೆ ಬಾರದೇ ಇರುವುದು ಚಿಂತೆಯ ಕಾರಣವಾಗಿದೆ. ನಾಯಕ ಐಡನ್ ಮಾರ್ಕರಂ ನೇತೃತ್ವದಲ್ಲಿ ಡೇವಿಡ್ ಮಿಲ್ಲರ್, ಕ್ವಿಂಟನ್ ಡಿಕಾಕ್, ಟ್ರಿಸ್ಟನ್ ಸ್ಟಬ್ಸ್, ರೀಜಾ ಹೆಂಡ್ರಿಕ್ಸ್ ಬ್ಯಾಟ್ಸ್ ಮನ್ ಗಳು ತಮ್ಮ ಎಂದಿನ ಆಟ ಪ್ರದರ್ಶಿಸಬೇಕಿದೆ.

ಪಂದ್ಯ ಇಂದು ಭಾರತೀಯ ಕಾಲಮಾನ 8 ಗಂಟೆಗೆ ಆರಂಭಗೊಳ್ಳಲಿದೆ.

More articles

Latest article