ವಿಜಯಪುರ : ರಾಜ್ಯದ ಏಕೈಕ ಮಹಿಳಾ ವಿಶ್ವ ವಿದ್ಯಾಲಯವಾದ ಅಕ್ಕ ಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದ ವಿದ್ಯಾರ್ಥಿನಿಯರು ವಸತಿ ಸೌಲಭ್ಯವಿಲ್ಲದೆ ಪರದಾಡುವಂತಾಗಿದೆ. ಇಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿನಿಯರಿಗೆ ವಸತಿ ನಿಲಯ ನೀಡುವ ಮೂಲಕ ವಸತಿ ಸೌಲಭ್ಯ ಕಲ್ಪಿಸಬೇಕೆಂದು ದಲಿತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಅಕ್ಷಯ್ ಕುಮಾರ ಮಾತನಾಡಿ, ರಾಜ್ಯದ ಹೆಸರಾಂತ ಏಕೈಕ ಮಹಿಳಾ ವಿಶ್ವ ವಿದ್ಯಾಲಯದ ಸ್ಥಾಪನೆಗೆ ಚಿಂತಕರಾದ ನಂಜುಂಡ ಸ್ವಾಮಿಯವರ ಕೊಡುಗೆ ಅಪಾರವಾಗಿದೆ. ಕರ್ನಾಟಕದಲ್ಲಿರುವ ಶೋಷಿತ ಸಮುದಾಯದ ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಉನ್ನತ ಮತ್ತು ಸಂಪೂರ್ಣ ಶೈಕ್ಷಣಿಕ ಅಭಿವೃದ್ಧಿಯ ಹಿತದೃಷ್ಟಿಯಿಂದ ಈ ವಿಶ್ವ ವಿದ್ಯಾಲಯವನ್ನು ತೆರೆಯಲಾಗಿದೆ. ರಾಜ್ಯದ ಪ್ರತಿ ಜಿಲ್ಲೆಯ ಹೆಣ್ಣುಮಕ್ಕಳು ಇಲ್ಲಿಗೆ ಓದಲು ಬರುತ್ತಾರೆ. ಇಷ್ಟೆಲ್ಲ ದೂರದೃಷ್ಟಿಯಿಂದ ವಿಜಯಪುರದಲ್ಲಿ ಆರಂಭವಾದ ವಿಶ್ವವಿದ್ಯಾಲಯವು ಹೆಸರಿಗಷ್ಟೇ ಮಹಿಳಾ ವಿಶ್ವ ವಿದ್ಯಾಲಯವಾಗಿದೆ. ಮಹಿಳೆಯರಿಗೆ ಇಲ್ಲಿ ಯಾವುದೇ ಮೂಲ ಸೌಕರ್ಯಗಳು ಇಲ್ಲದೆ ಇರುವುದು ವಿಪರ್ಯಾಸ.
ದೂರದ ಊರಿನಿಂದ ಬರುವ ಹೆಣ್ಣುಮಕ್ಕಳಿಗೆ ವಸತಿ ಸೌಲಭ್ಯ ಒದಗಿಸಿ ಕೊಡಬೇಕಾಗಿರುವುದು ಇಲ್ಲಿನ ವ್ಯವಸ್ಥಾಪಕರ ಕರ್ತವ್ಯ. ಮಹಿಳೆಯರಿಗೆ ಸಿಗಬೇಕಾದ ಮೂಲ ಸೌಕರ್ಯಗಳಾದ ವಸತಿ, ಊಟ, ಉತ್ತಮ ಶಿಕ್ಷಣ ಅದೇ ಸಿಗಲಿಲ್ಲವೆಂದರೆ ಯಾವ ಉದ್ದೇಶಕ್ಕೆ ಕುಲಪತಿಗಳು, ವ್ಯವಸ್ಥಾಪಕರು, ರೆಜಿಸ್ಟ್ರಾರುಗಳು ಇಲ್ಲಿದ್ದಾರೆ ಎಂದು ವಿವಿಯ ವ್ಯವಸ್ಥಾಪಕ ಮಂಡಳಿಯ ವಿರುದ್ಧ ಹರಿಹಾಯ್ದರು.
ಆರುತಿಂಗಳ ಹಿಂದೆಯೇ ವಸತಿ ನಿಲಯ ವ್ಯವಸ್ಥೆಯನ್ನು ಸರಿಪಡಿಸಬೇಕೆಂದು ವಿಸಿ ತುಳಸಿ ಮಾಲಾ ಅವರ ಗಮನಕ್ಕೆ ತಂದಿದ್ದೆವು. ನಮ್ಮ ಮನವಿಗೆ ಇದುವರೆಗೆ ಯಾವುದೇ ಸ್ಪಂದನೆ ಅವರಿಂದ ದೊರೆತಿರುವುದಿಲ್ಲ. ವಿದ್ಯಾರ್ಥಿನಿಯರ ಬಗ್ಗೆ ಈ ರೀತಿಯ ನಿರ್ಲಕ್ಷ್ಯ ಅವರ ಸ್ಥಾನಕ್ಕೆ ಗೌರವ ತರುವಂತಹದ್ದಲ್ಲ. ಕೂಡಲೇ ಜಾಗೃತಿ ವಹಿಸಿ ಇಲ್ಲಿರುವ ಎಲ್ಲಾ ವಿದ್ಯಾರ್ಥಿನಿಯರಿಗೆ ಸಕಲ ಮೂಲ ಸೌಕರ್ಯವುಳ್ಳ ವಸತಿ ನಿಲಯ ಒದಗಿಸಬೇಕು. ವಿದ್ಯಾರ್ಥಿನಿಯರಿಗೆ ಈ ಭರವಸೆ ನೀಡುವವರೆಗೆ ಈ ಹೋರಾಟವನ್ನು ಕೈ ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಸಂಬಂಧಪಟ್ಟ ಅಧಿಕಾರಿಗಳು, ವಿದ್ಯಾರ್ಥಿನಿಯರ ಸಮಸ್ಯೆಗಳನ್ನು ಆಲಿಸಿದರು. ಅವರ ಕುಂದುಕೊರತೆ, ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ ಅವರು ಸಮಸ್ಯೆ ಮುಂದುವರಿಯದಿರಲು ಕ್ರಮ ಕೈಗೊಳ್ಳುವುದಾಗಿ ವಿದ್ಯಾರ್ಥಿನಿಯರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ತಿನಿ ಮುಖಂಡರಾದ ಯುವರಾಜ, ಮಹಾಂತೇಶ್, ಯಮನೂರಿ, ಪ್ರಜ್ವಲ, ಸಂದೇಶ್ ಮತ್ತು ವಿದ್ಯಾರ್ಥಿನಿಯರು ಭಾಗಿಯಾಗಿದ್ದರು.