ರಫೇಲ್‌ ಹಾರಾಟವನ್ನೇ ನಡೆಸುವ ಮಹಿಳೆಗೆ ವಾಯುಪಡೆಯ ಕಾನೂನು ವಿಭಾಗದಲ್ಲಿ ಅವಕಾಶ ನೀಡಲು ತಾರತಮ್ಯ ಏಕೆ?: ಸುಪ್ರೀಂಕೋರ್ಟ್‌ ಪ್ರಶ್ನೆ

Most read

ನವದೆಹಲಿ: ಭಾರತೀಯ ವಾಯುಪಡೆಯಲ್ಲಿ ರಫೇಲ್‌ ಯುದ್ಧವಿಮಾನ ಹಾರಾಟ ನಡೆಸುವ ಸಾಮರ್ಥ್ಯವನ್ನು ಮಹಿಳೆ ಹೊಂದಿದ್ದಾಳೆ. ಆದರೆ, ಸೇನೆಯ ಜಡ್ಜ್‌ ಅಡ್ವೋಕೇಟ್‌ ಜನರಲ್ (ಜೆಎಜಿ) ವಿಭಾಗದಲ್ಲಿ ಮಹಿಳೆಯರನ್ನು ಕಡಿಮೆ ಸಂಖ್ಯೆಯಲ್ಲಿ ನೇಮಕ ಮಾಡಲಾಗಿದೆ. ಈ ತಾರತಮ್ಯವನ್ನು ಏಕೆ ಅನುಸರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ.

ಸೇನೆಯಲ್ಲಿ ನೇಮಕಾತಿಗೆ ಸಂಬಂಧಿಸಿದಂತೆ 50:50 ಅನುಪಾತ ಸೂತ್ರ ಅನುಸರಿಸುತ್ತಿರುವುದರ ಹಿಂದಿನ ತರ್ಕವೇನು ಎಂದೂ ನ್ಯಾಯಮೂರ್ತಿಗಳಾದ ದೀಪಾಂಕರ ದತ್ತಾ ಹಾಗೂ ಮನಮೋಹನ್‌ ಅವರು ಇದ್ದ ನ್ಯಾಯಪೀಠ ಪ್ರಶ್ನಿಸಿದೆ. ಸೇನೆಯ ಅಧಿಕಾರಿಗಳಾದ ಅರ್ಶನೂರ್ ಕೌರ್ ಹಾಗೂ ಆಸ್ಥಾ ತ್ಯಾಗಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನಡೆಸಿದ ನ್ಯಾಯಾಲಯ ಪ್ರಕರಣ ಕುರಿತ ತೀರ್ಪನ್ನು ಮೇ 8 ಕ್ಕೆ ಕಾಯ್ದಿರಿಸಿದೆ.

ಅರ್ಶನೂರ್  4 ಹಾಗೂ ಆಸ್ಥಾ ಅವರು 5ನೇ ರ‍್ಯಾಂಕ್‌ ಪಡೆದಿದ್ದರು. ಈ ಹುದ್ದೆಗೆ ನೇಮಕಕ್ಕಾಗಿ ನಡೆದ ಪರೀಕ್ಷೆಯಲ್ಲಿ ಈ ಇಬ್ಬರು, ಪುರುಷ ಅಧಿಕಾರಿಗಳಿಗಿಂತಲೂ ಹೆಚ್ಚಿನ ರ‍್ಯಾಂಕ್‌ ಪಡೆದಿದ್ದರು. ಆದರೂ ಈ ಇಬ್ಬರು ಮಹಿಳಾ ಅಧಿಕಾರಿಗಳನ್ನು ಜೆಎಜಿ ಹುದ್ದೆಗೆ ಆಯ್ಕೆ ಮಾಡಿರಲಿಲ್ಲ. ಈ ಕ್ರಮವನ್ನು ಪ್ರಶ್ನಿಸಿ ಅವರು ಕೋರ್ಟ್‌ ಮೆಟ್ಟಿಲೇರಿದ್ದರು.

ಸೇನಾ ನ್ಯಾಯಾಲಯದಲ್ಲಿ ನ್ಯಾಯಾಲಯಕ್ಕೆ ವಕೀಲ/ವಕೀಲೆ ಮತ್ತು ಸಲಹೆಗಾರ/ಸಲಹೆಗಾರ್ತಿ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಲು ಪರಮಾಧಿಕಾರ ಹೊಂದಿರುವ ಸೇನಾಧಿಕಾರಿಯನ್ನು ಜಡ್ಜ್‌ ಅಡ್ವೋಕೇಟ್‌ ಜನರಲ್(ಜೆಎಜಿ) ಎಂದು ಕರೆಯಲಾಗುತ್ತದೆ. ಪುರುಷರು ಹಾಗೂ ಮಹಿಳೆಯರಿಗಾಗಿ ಖಾಲಿ ಇರುವ ಹುದ್ದೆಗಳ ಸಂಖ್ಯೆಗೆ ಸಂಬಂಧಿಸಿ ಸಮರ್ಪಕ ಅನುಪಾತವಿಲ್ಲ. ಒಟ್ಟು 6 ಹುದ್ದೆಗಳು ಇದ್ದರೂ, ಮಹಿಳೆಯರಿಗೆ ಮೂರು ಹುದ್ದೆಗಳನ್ನು ಮಾತ್ರ ಮೀಸಲಿಟ್ಟಿರುವುದನ್ನು ಅರ್ಜಿದಾರರು ಪ್ರಶ್ನಿಸಿದ್ದರು.

ವಿಚಾರಣೆ ಸಂದರ್ಭದಲ್ಲಿ ಈ ತಾರತಮ್ಯ ಪ್ರಶ್ನಿಸಿ ಅರ್ಶನೂರ್ ಕೌರ್‌ ಅವರು ಪ್ರಕರಣ ದಾಖಲಿಸಿರುವುದು ಮೇಲ್ನೋಟಕ್ಕೆ ಸರಿ ಎಂದು ತೋರುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಅರ್ಜಿದಾರರನ್ನು ಜೆಎಜಿ ಹುದ್ದೆಗೆ ನೇಮಕಕ್ಕೆ ಸಂಬಂಧಿಸಿ ಲಭ್ಯವಿರುವ ತರಬೇತಿ ಕೋರ್ಸ್‌ಗೆ ಸೇರ್ಪಡೆ ಮಾಡಬೇಕು ಎಂದು ನ್ಯಾಯಮೂರ್ತಿಗಳು ಪ್ರತಿವಾದಿಗಳಿಗೆ ನಿರ್ದೇಶನ ನೀಡಿದ್ದಾರೆ. ಮಹಿಳೆಯೊಬ್ಬರನ್ನು ವಾಯುಪಡೆಯಲ್ಲಿ ರಫೇಲ್‌ ಯುದ್ಧ ವಿಮಾನ ಪೈಲಟ್‌ ಆಗಿ ನೇಮಕ ಮಾಡಿಕೊಳ್ಳಲು ಅವಕಾಶ ಇರುವಾಗ ಜೆಎಜಿ ಹುದ್ದೆಯಲ್ಲಿ ಸೇವೆ ಸಲ್ಲಿಸಲು ಮಹಿಳೆಯರಿಗೆ ಅವಕಾಶ ನೀಡಿದರೆ ತಪ್ಪೇನು ಎಂದು ಕೇಂದ್ರ ಸರ್ಕಾರ ಹಾಗೂ ಸೇನೆ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್ ಐಶ್ವರ್ಯಾ ಭಟ್ಟಿ ಅವರನ್ನು ಪ್ರಶ್ನಿಸಿದೆ.

More articles

Latest article