ಮಹಿಳೆಯರು ಪುರುಷರು ನಿರ್ಮಿಸಿದ ಸೀಮೆಗಳ ದಾಟಿ ಬದುಕನ್ನು ನೋಡಬೇಕಿದೆ- ಅರುಳ್‌ ಮೌಳಿ.

Most read

ಉಡುಪಿ, ಮಾರ್ಚ್‌8 : ಇವತ್ತಿನ ಮಹಿಳೆಯರ ಅಸ್ತಿತ್ವವಾದರೂ ಏನು?  ಮಹಿಳೆಯರಿಗೆ ಅವರದ್ದೇ ಆದ ಮನೆ ಇಲ್ಲ, ಇರುವುದು ಅಪ್ಪನ ಮನೆ, ಗಂಡನ ಮನೆ. ಮಹಿಳೆಗೆ ಅವಳದ್ದೇ ಆದ ದೈವವಿಲ್ಲ. ಒಂದೋ ತಂದೆ ಮನೆಯ ಕುಲ ದೈವ ಅಥವಾ ಗಂಡನ ಮನೆಯ ಕುಲ ದೈವ. ಹಾಗಾದರೆ ಮಹಿಳೆಯ ಅಸ್ತಿತ್ವ ಎನು…? ಅದು ಹಿಂದುವಾಗಲಿ  ಮುಸ್ಲಿಂ ಆಗಲಿ ಕ್ರಿಶ್ಚಿಯನ್ ಆಗಲಿ ಒಟ್ಟಾಗಿ ಯಾವುದೇ ಧರ್ಮದಲ್ಲೂ  ಮಹಿಳೆಗೆ ತನ್ನದೇ ಆದ ಅಸ್ತಿತ್ವ ಇಲ್ಲ, ಆದ್ದರಿಂದ ಮಹಿಳೆಯರು ತಮ್ಮ ಅಸ್ತಿತ್ವವನ್ನು ಪ್ರಶ್ನೆಸುವಲ್ಲಿ ಒಂದಾಗಬೇಕಿದೆ. ಪುರುಷರು ನಿರ್ಮಿಸಿರುವ ಸೀಮೆ ಗಳನ್ನು ದಾಟಿ ಆದರಾಚೆಯ ಬದುಕನ್ನು ನೋಡಬೇಕಿದೆ ಎಂದು ಚೆನ್ನೈನ ನ್ಯಾಯವಾದಿ, ಮಹಿಳಾಪರ ಚಿಂತಕಿ ಎ.ಅರುಳ್‌ ಮೌಳಿ ಹೇಳಿದರು.

ಅವರು ಕರ್ನಾಟಕ ರಾಜ್ಯ ಮಹಿಳಾ  ದೌರ್ಜನ್ಯ ವಿರೋಧಿ ಒಕ್ಕೂಟವು ಉಡುಪಿಯಲ್ಲಿ ನಡೆಸುತ್ತಿರುವ ಮಹಿಳಾ ಚೈತನ್ಯ ದಿನದ ಭಾಗವಾಗಿ ಮಹಿಳಾ ಪ್ರಾತಿನಿಧ್ಯ: ಆಶಯ ಮತ್ತು ವಾಸ್ತವ  ವಿಚಾರಸಂಕಿರಣ ಉದ್ಘಾಟಿಸಿ ಆಶಯ ಮಾತುಗಳನ್ನು ಆಡುತ್ತಿದ್ದರು. ಅಜ್ಜರಕಾಡಿನಲ್ಲಿರುವ ಟೌನ್‌ ಹಾಲಿನಲ್ಲಿ ಸರಸ್ವತಿ ಬಾಯಿ ರಾಜವಾಡೆ ವೇದಿಕೆಯಲ್ಲಿ ಕಾರ್ಯಕ್ರಮವನ್ನು ಆಯೋಜನೆ ಗೊಳಿಸಲಾಗಿತ್ತು.

ಅವರು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಎಂದರೆ ನಮ್ಮ ಘನತೆಯ ಬದುಕಿಗೆ ಮುನ್ನುಡಿ ಬರೆದ ಹೋರಾಟ. ಆದರೆ ಈ ಹೋರಾಟದ ದಿನವನ್ನು ಸೌಂದರ್ಯ ವರ್ಧಕಗಳ ಪ್ರದರ್ಶನದ ಶೋಗಳನ್ನಾಗಿ ಮಾಡುತ್ತಿರುವುದು ದುರಂತ. ಮಹಿಳಾ ದಿನಾಚರಣೆ ಎಂಬುದು ಘನತೆಯ, ಸಮಾನತೆಯ, ಗೌರವಯುತ  ಬದುಕಿನ ಬುನಾದಿ‌. ಅದೊಂದು ಸೌಂದರ್ಯ ಸ್ಪರ್ಧೆಯ ದಿನವಲ್ಲ ಎಂದರು.

ಹೆಣ್ಣಾಗಿ ಮನೆಯೊಳಗೆ ಸಮಾಜದೊಳಗೆ ಮಹಿಳೆಯ ಪಾತ್ರ ಬಹಳ ದೊಡ್ಡದು ಮತ್ತು ಮಹಿಳೆಯ ಕೆಲಸ ಬಹಳ ಮೌಲ್ಯಯುತವಾದದ್ದು. ಅವರಿಗೆ ವಿವಿಧ ರೀತಿಯ ಕೌಶಲಗಳಿವೆ.  ಅವೆಲ್ಲವೂ ಪರಿಣಾಮಕಾರಿಯಾಗಿದ್ದು ಅದನ್ನು ಪ್ರಸ್ತುತ ಸಮಾಜದಲ್ಲಿ ಸ್ವೀಕರಿಸುತ್ತಿಲ್ಲ, ಯಾವುದಕ್ಕೂ ಪ್ರಾಧಾನ್ಯತೆ ದೊರೆಯುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದರು.

ಮುಂದುವರೆದು ರಾಕೆಟ್ ಉಡಾವಣೆ ಮಾಡುವ ವಿಜ್ಞಾನಿಗಳಿಗಾದರೂ  ಸ್ವಲ್ಪ ವಿಶ್ರಾಂತಿ ಪಡೆಯಲು ಅವಕಾಶವಿದೆ. ಆದರೆ ಮಹಿಳೆಯರ ಆಲೋಚನೆ ವಿಜ್ಞಾನಿಗಳನ್ನು ಮೀರಿದ್ದು, ಪ್ರತಿದಿನದ ಮನೆಯ ಕಾರ್ಯ ಚಟುವಟಿಕೆಗಳು, ಮನೆಯ ಸದಸ್ಯರಿಗೆ ಬೇಕಾದ ತಿಂಡಿ ಊಟದ ತಯಾರಿ, ಮಕ್ಕಳ  ಲಾಲನೆ ಪಾಲನೆ  ಹಗಲು ದುಡಿಮೆ, ರಾತ್ರಿ ಮರುದಿನದ ಕೆಲಸಗಳ ತಯಾರಿ ಹೀಗೆ ಮನಸ್ಸಿಗೂ ದೇಹಕ್ಕೂ ವಿಶ್ರಾಂತಿ ಎಂಬುದಿಲ್ಲದೆ ದುಡಿಯುವ  ಮಹಿಳೆಯ ಕೆಲಸಕ್ಕೆ ಮೌಲ್ಯ ಇದೆಯೇ? ಎಂದು ಪ್ರಶ್ನಿಸಿದರು.

ನಾವು ನಮ್ಮ ಪೂರ್ವಜರು, ನಮ್ಮ ಅಜ್ಜಿಯಂದಿರ ಕಾಲ ಘಟ್ಟವನ್ನು ದಾಟಿ ಬಂದಿದ್ದೇವೆ. ಆದರೆ ರಾಜಕೀಯವಾಗಿ ,ಆರ್ಥಿಕವಾಗಿ, ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ಸಮನತೆ ಸಾಧಿಸಿದ್ದೇವೆಯೇ? ಹೌದಾದರೆ ಒಬ್ಬ ಮಹಿಳೆಯಾದ ನಾನು ರಾತ್ರಿ ಎಷ್ಟು ಹೊತ್ತಿಗೆ ಓಡಾಡಬೇಕು, ಯಾವ ಬಟ್ಟೆ ಧರಿಸಬೇಕು, ಯಾವ ಹುಡುಗನ ಜೊತೆಗೆ ಸ್ನೇಹ ಬೆಳೆಸಬೇಕೆಂಬ ತೀರ್ಮಾನದಲ್ಲಿ ಸಮಾಜಕ್ಕೆ ಸಮರ್ಥನೆ ಕೊಡುವ ಅಥವಾ ಸ್ವೀಕರಿಸುವ ಅಗತ್ಯ ಯಾಕೆ ಬೇಕು ಎಂದೂ ಖಾರವಾಗಿ ಪ್ರಶ್ನಿಸಿದರು.

ನಿರ್ಭಯ ಪ್ರಕರಣವನ್ನು ನೋಡುವುದಾದರೆ ಅವಳ ಮೇಲೆ ನಡೆದ ಅತ್ಯಾಚಾರದ ಕ್ರೌರ್ಯ  ಊಹಿಸಲೂ ಅಸಾಧ್ಯ. ಅವಳನ್ನು ಅತ್ಯಾಚಾರ ಮಾಡಿ, ಅವಳ ಮರ್ಮಾಂಗಕ್ಕೆ ಕಬ್ಬಿಣದ ಸಲಾಕೆಯನ್ನು ಹಾಕಿ, ಇಡೀ ದೇಹದ ಅಂಗಗಳನ್ನು ನಾಶ ಮಾಡಿ ಕೊಂದು ಹಾಕುವ ಕ್ರೌರ್ಯ ಈ ಪುರುಷ ಸಮಾಜದಲ್ಲಿ ಬರಲು ಹೇಗೆ ಸಾಧ್ಯವಾಯಿತು? ಹೆಣ್ಣು ಮಕ್ಕಳು ಮೊದಲು ಮನೆಯಲ್ಲಿ ಮಗನ, ಗಂಡನ ತಪ್ಪನ್ನು ಸಮರ್ಥಿಸಿಕೊಳ್ಳುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ಮುಂದೊಂದು ದಿನ ಅವರು ಮಹಿಳಾ ಪೀಡಕರಾಗುವುದರಲ್ಲಿ ಅನುಮಾನವೇ ಇಲ್ಲ. ಎಲ್ಲ ಪೀಡನೆಗಳು ಒಂದೇ ರೀತಿಯಾಗಿ ಇರುವುದಿಲ್ಲ. ನಿರ್ಭಯಳ ಅತ್ಯಾಚಾರ, ಕಥುವಾ ಪ್ರಕರಣ, ಬಿಲ್ಕಿಸ್ ಭಾನುವಿನ ಪ್ರಕರಣಗಳು ಭಿನ್ನ ಭಿನ್ನವಾದ ಸನ್ನಿವೇಶವನ್ನು ತೆರೆದಿಡುತ್ತವೆ ಎಂದರು.

ಬಿಲ್ಕಿಸ್ ಭಾನು ಪ್ರಕರಣದಲ್ಲಿ  ಕೃತ್ಯ ನಡೆಸಲು ಇದ್ದ ಕಾರಣವಾದರೂ ಏನು? ಒಟ್ಟು ಆಕೆಯ ಕುಟುಂಬದ ಮೇಲೆ 11 ಮಂದಿ ಹಲ್ಲೆ  ನಡೆಸಿದರು. ಒಂಬತ್ತು ಮಂದಿಯನ್ನು ಕೊಲ್ಲಲಾಯಿತು. ಆಕೆಯ ಮೂರು ವರ್ಷದ ಮಗುವಿನ ಕಾಲನ್ನು ಹಿಡಿದು ಗೋಡೆಗೆ ಬಡಿದು ಸಾಯಿಸಲಾಯಿತು. ಆಕೆಯ ಮೇಲೆ  ಸಾಮೂಹಿಕ ಅತ್ಯಾಚಾರ ನಡೆಸಿದಾಗ ಆಕೆ ಮೂರು ತಿಂಗಳ ಗರ್ಭಿಣಿ. ಇಂತಹ ಕ್ರೌರ್ಯ  ಮೆರೆದವರಿಗೆ ಜೀವಾವಧಿ ಶಿಕ್ಷೆ ವಿಧಿಸಿದಾಗ  ಆ ಅಪರಾಧಿಗಳನ್ನು ಸನ್ನಡತೆಯ ಆಧಾರದಲ್ಲಿ ಬಿಡುಗಡೆಗೊಳಿಸಿ ಆರತಿ ಮಾಡಿ ಸಿಹಿ ತಿನಿಸಿ ಸಂಭ್ರಮದಿಂದ ಬರಮಾಡಿಕೊಂಡರು. ನಿರ್ಭಯಾ ಪ್ರಕರಣದಲ್ಲಿ ಕೊನೆಯ ಪಕ್ಷ ಜೀವಾವಧಿ ಶಿಕ್ಷೆ ವಿಧಿಸಲಾಯಿತು, ಆದರೆ ಕಥುವಾ ಮತ್ತು ಹತ್ರಾಸ್ ಪ್ರಕರಣದಲ್ಲಿ ಹಾಗೆ ಆಗಲಿಲ್ಲ. ಇಲ್ಲಿ ಅಪರಾಧಿಗಳಿಗೆ ರಾಜಕೀಯ ಬೆಂಬಲ ನೀಡಲಾಯಿತು. ಇದು ವಿಪರ್ಯಾಸವಲ್ಲದೆ ಮತ್ತೇನು? ಎಂದರು.

ಈ ಸಮಾಜದಲ್ಲಿ ಮಹಿಳೆಯರ ಮೇಲೆ ನಿರ್ಬಂಧ ಹೇರುವುದು, ಕಟ್ಟುಪಾಡುಗಳನ್ನು ವಿಧಿಸುವುದು ಬಹಳ ಸುಲಭ. ಆದರೆ ದೌರ್ಜನ್ಯ ಕ್ಕೆ ಒಳಗಾದ ಹೆಣ್ಣು ಮಕ್ಕಳ ಮನಸ್ಸಿನ ತುಮುಲಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಈ ಸಮಾಜ ಸೋಲುತ್ತಿದೆ ಎಂದು ವಿಷಾದಿಸುತ್ತಾ ನಮ್ಮ ಮನೆಯ ಗಂಡುಮಕ್ಕಳನ್ನು ಲಿಂಗ ಸೂಕ್ಷ್ಮಗೊಳಿಸುವ ಕಡೆಗೆ ನಮ್ಮ ಪ್ರಯತ್ನ ಸಾಗಿದಾಗ ಸಮ ಸಮಾಜ ಕಟ್ಟಲು ಸಾಧ್ಯ, ಅದರ ಕಡೆಗೆ ನಮ್ಮ ಹೆಜ್ಜೆ ಸಾಗಲಿ ಎಂದು ಆಶಯ ವ್ಯಕ್ತ ಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಕೇತನಾ ಅವರು ಮಾತಾಡಿ ಹೆಣ್ಣು ಮಕ್ಕಳ ಸುಸ್ಥಿರ ಬದುಕಿಗೆ ಸಮಾನತೆಯ ಘನತೆಯ ಬದುಕಿನತ್ತ ಹೆಜ್ಜೆ ಹಾಕಲು ಸರಿಯಾದ ದಿಕ್ಸೂಚಿಯ ಅವಶ್ಯಕತೆ ಇದೆ. ಆ ದಿಕ್ಕಿಗೆ ಸಾಗಲು ಈ ಕಾರ್ಯಕ್ರಮ ಒಂದು ಪ್ರೇರಣೆ ಎಂದರು.

ಒಕ್ಕೂಟದ ಸಂಗಾತಿಗಳು ಆಶಯ ಗೀತೆ ಹಾಡಿದರು.ಗೀತಾ ಬೈಂದೂರು ಸಂವಿಧಾನ ಪೀಠಿಕೆ ಓದಿದರು.  ಉದ್ಯಾವರ ನಾಗೇಶ್‌ ಕುಮಾರ್‌ ಸ್ವಾಗತಿಸಿದರು. ರೇಖಾಂಬ ಟಿ ಎಲ್‌ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಇದೇ ಹೊತ್ತು ಹಿಂದಿನ ವರ್ಷದ ತುಮಕೂರು ಮಹಿಳಾ ದಿನದ ನೆನಪಿನ ಹೊತ್ತಗೆ ʼಬಹುತ್ವದೆಡೆಗೆ ನಮ್ಮ ನಡಿಗೆʼ ಬಿಡುಗಡೆಗೊಂಡಿತು. ಬಾ.ಹ.ರಮಾಕುಮಾರಿಯವರು ಪುಸ್ತಕದ ಕುರಿತು ಮಾತಾಡಿದರು. ಜಾನಕಿ ಬ್ರಹ್ಮಾವರ ಉಪಸ್ಥಿತರಿದ್ದರು.

More articles

Latest article