ಬೆಂಗಳೂರು: ತಮ್ಮ ಅಧಿಕೃತ ಕಚೇರಿಯಲ್ಲಿ ರಾಸಲೀಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ರಾಮಚಂದ್ರ ರಾವ್ ಅವರ ವಿರುದ್ಧ ಪಾರದರ್ಶಕ ತನಿಖೆ ನಡೆಸಿ ಏಳು ದಿನಗಳ ಒಳಗಾಗಿ ವರದಿ ನೀಡುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ರಾಜ್ಯ ಮಹಿಳಾ ಆಯೋಗ ಪತ್ರ ಬರೆದಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಅವರು ಪತ್ರ ಬರೆದಿದ್ದಾರೆ.
ಐಪಿಎಸ್ ಡಾ.ರಾಮಚಂದ್ರರಾವ್ ರವರು ತಮ್ಮ ಕಛೇರಿಯಲ್ಲಿ ಸಮವಸ್ತ್ರಧಾರಿಗಳಾಗಿದ್ದ ಸಂದರ್ಭದಲ್ಲಿಯೇ ಮಹಿಳೆಯಯೊಂದಿಗೆ ಅಶ್ಲೀಲ ಹಾಗೂ ಲೈಂಗಿಕ ದೌರ್ಜನ್ಯ ಎಸಗುವ ರೀತಿಯಲ್ಲಿ ನಡೆದುಕೊಂಡಿರುವ ಹೀನಾಯ ಕೃತ್ಯದ ಬಗ್ಗೆ ರಾಜ್ಯದ ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗಿರುವ ದೃಶ್ಯಾವಳಿಗಳನ್ನು ಮಹಿಳಾ ಆಯೋಗವು ಅತ್ಯಂತ ಗಂಭೀರವಾಗಿ ಪರಿಗಣಿಸಿರುತ್ತದೆ.
ಮಹಿಳೆಯರಿಗೆ ರಕ್ಷಣೆಗೆ ನೀಡಬೇಕಾದ, ಉನ್ನತ ಹುದ್ದೆಯಲ್ಲಿರುವ ಪೊಲೀಸ್ ಅಧಿಕಾರಿಯೇ ಈ ರೀತಿಯ ಅಸಭ್ಯ ವರ್ತನೆಯಲ್ಲಿ ತೊಡಗಿರುವುದು ರಾಜ್ಯದ ಮಹಿಳೆಯರಲ್ಲಿ ಕೆಟ್ಟ ಭಾವನೆಯನ್ನು ಮೂಡಿಸುತ್ತದೆ ಹಾಗೂ ನಾಗರಿಕ ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತದೆ. ಈ ಪ್ರಕರಣವು ‘ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ-2013’ ರಂತೆಯೂ ಅರ್ಹ ಪ್ರಕರಣವಾಗಿರುತ್ತದೆ.
ಆದ್ದರಿಂದ ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಪಾರದರ್ಶಕ ತನಿಖೆಗೆ ಆದೇಶಿಸಿ ಸೇವೆಯಿಂದ ಅಮಾನತ್ತು ಮಾಡಲು ಮತ್ತು ಕೈಗೊಂಡ ಕ್ರಮಗಳ ಬಗ್ಗೆ ಏಳು ದಿನಗಳ ಒಳಗಾಗಿ ವರದಿಯನ್ನು ಸಲ್ಲಿಸುವಂತೆ ಹಾಗೂ ಮಹಿಳೆಯರ ಘನತೆ ಮತ್ತು ಗೌರವವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಜರುಗಿಸುವ ಮೂಲಕ, ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸಬೇಕೆಂದು ಅಧ್ಯಕ್ಷರು ಕೋರಿದ್ದಾರೆ.

