ಚಿತ್ರನಟಿ ರಮ್ಯಾ ಟೀಕಿಸಿದವರ ವಿರುದ್ಧ ದೂರು ದಾಖಲಿಸಿಕೊಂಡ ರಾಜ್ಯ ಮಹಿಳಾ ಆಯೋಗ

Most read

ಬೆಂಗಳೂರು: ಚಿತ್ರನಟಿ ರಮ್ಯಾ ಅವರನ್ನು ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲವಾಗಿ ಪ್ರತಿಕ್ರಿಯೆ ನೀಡಿರುವವರ ವಿರುದ್ಧ  ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ ಎಂದು ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ತಿಳಿಸಿದ್ದಾರೆ.

ಜಾಲತಾಣದಲ್ಲಿ ಯಾರೇ ಆಗಲಿ ಮಹಿಳೆಯರ ಬಗ್ಗೆ ಕೀಳು ಮಟ್ಟದ ಪೋಸ್ಟ್‌ ಗಳನ್ನು ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಇದೇ ವೇಳೆ ಎಚ್ಚರಿಕೆ ನೀಡಿದ್ದಾರೆ.

ಮಹಿಳೆಯರಿಗೆ ಮಾನಸಿಕವಾಗಿ ನೋವನ್ನುಂಟು ಮಾಡುವ ಇಂತಹವರಿಗೆ ಕಾನೂನಿನಡಿಯಲ್ಲಿ 3ರಿಂದ 7 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶ ಇದೆ. ರಮ್ಯಾ ಅವರನ್ನು ಕುರಿತು ನಟ ದರ್ಶನ್‌ ಅಭಿಮಾನಿಗಳು, ಕೆಟ್ಟ ಪದಗಳಿಂದ ನೀದಿಸುತ್ತಿದ್ದಾರೆ.  ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೋಮುನಾಯಕ ಎಂಬುವರು ದೂರು ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ರಮ್ಯಾ ಅವರು ನಟಿ ಎಂಬ ಕಾರಣಕ್ಕೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿಲ್ಲ. ರಾಜ್ಯದ ಯಾವುದೇ ಹೆಣ್ಣು ಮಕ್ಕಳಿಗೆ ಮಾನಹಾನಿ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ಬಂದರೆ ನಾವು ಪ್ರಕರಣ ದಾಖಲಿಸುತ್ತೇವೆ. ಈಗ ರಮ್ಯಾಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯಬಾರದೆಂದು ಆಯೋಗ ಬಯಸುತ್ತದೆ ಎಂದು ಹೇಳಿದ್ದಾರೆ.

ಈ ದೂರಿಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು, ಸೆನ್‌ ಪೊಲೀಸ್‌‍ ಠಾಣೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದು ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.

More articles

Latest article