31 ಮನೆಗಳಲ್ಲಿ ಕಳ್ಳತನ ಮಾಡಿದ್ದ ಮಹಿಳೆ ಅರೆಸ್ಟ್‌

Most read



ಬೆಂಗಳೂರು: ಬೀಗ ಹಾಕಿದ್ದ ಮನೆಗಳನ್ನು ಪ್ರವೇಶಿಸಿ ಚಿನ್ನದ ಆಭರಣಗಳು ಹಾಗೂ ನಗದನ್ನು ಕಳ್ಳತನ ಮಾಡುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಹಿಳೆ ಸೇರಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮನೆ ಹೊರಗಡೆಯ ಶೂ ಬಾಕ್ಸ್‌ ಹಾಗೂ ಶೂಗಳಲ್ಲಿ ಅಡಗಿಸಿ ಇಟ್ಟಿರುತ್ತಿದ್ದ ಕೀ ಬಳಸಿ ಕಳ್ಳತನ ಮಾಡುತ್ತಿದ್ದ ಮಹಿಳೆಯನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹೆಣ್ಣೂರು ನಿವಾಸಿ ಜಯಂತಿ (35) ಬಂಧಿತ ಆರೋಪಿ. ಈಕೆಯಿಂದ 7.80 ಲಕ್ಷ ರೂ. ಮೌಲ್ಯದ 110 ಗ್ರಾಂ. ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ. ಈಕೆಯ ಬಂಧನದಿಂದ ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 31 ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು
ಹೇಳಿದ್ದಾರೆ.

ಆರೋಪಿ ಮಹಿಳೆಗೆ ಮದುವೆಯಾಗಿದ್ದು, ನಾಲ್ವರು ಹೆಣ್ಣು ಮಕ್ಕಳು ಇದ್ದಾರೆ. ಮನೆ ಕೆಲಸಕ್ಕೆ ಹೋಗುವ ನೆಪದಲ್ಲಿ ಅಕ್ಕಪಕ್ಕದ ಮನೆಗಳಿಗೆ ಭೇಟಿ ನೀಡಿ ಶೂಗಳಲ್ಲಿ ಮತ್ತು ಶೂ ಬಾಕ್ಸ್‌ ಗಳಲ್ಲಿ ಕೀ ಇಟ್ಟಿರುವುದನ್ನು ಈಕೆ ಕಂಡುಕೊಂಡಿದ್ದಳು. ಮನೆಯಲ್ಲಿ ಯಾರೂ ಇಲ್ಲದೆ ವೇಳೆ ಕೀ ಬಳಸಿ ಕಳ್ಳತನ ಮಾಡುತ್ತಿದ್ದಳು. ಈ ಹಿಂದೆ ಭಾರತಿನಗರದಲ್ಲಿ ವಾಸವಾಗಿದ್ದ ಜಯಂತಿ, ಅಲ್ಲಿಯೂ ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಳು. ಕೆಲವು ತಿಂಗಳ ಹಿಂದೆ ಹೆಣ್ಣೂರಿಗೆ ಕುಟುಂಬ ಸಮೇತ ಸ್ಥಳಾಂತರಗೊಂಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಮನೆಗಳಲ್ಲಿ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ತಲಘಟ್ಟಪುರ ಪೊಲೀಸ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ರೂ. 20 ಲಕ್ಷ ಮೌಲ್ಯದ 260ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

More articles

Latest article