ಬಾಗಲಕೋಟೆ: ಗದ್ದಿಗೌಡರ್ ಗೆಲುವು ಸುಲಭವಲ್ಲ, ಸಂಯುಕ್ತ ಪಾಟೀಲ್ ಪ್ರಬಲ ಸ್ಪರ್ಧೆ

Most read


ಉತ್ತರ ಕರ್ನಾಟಕ ಭಾಗದ ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹವಾ ಇದ್ದರೆ, ಲೋಕಸಭೆಯ ಲೆಕ್ಕಾಚಾರವೇ ಬೇರೆ. ಕಳೆದ ಎರಡು ಅವಧಿಯಲ್ಲಿಯೂ ಜಾತಿ ಪ್ರಾಬಲ್ಯದ ಜೊತೆಗೆ ಮೋದಿ ಹೆಸರಿನಿಂದ ಲೋಕಸಭೆಯಲ್ಲಿ ಗೆದ್ದು ಬರುತ್ತಿರುವ ಭಾರತೀಯ ಜನತಾ ಪಕ್ಷದ ಪಿ. ಸಿ. ಗದ್ದಿಗೌಡರ್ ಮತ್ತೆ ಗೆಲುವಿನ ಆಸೆಯಲ್ಲಿ ಟಿಕೆಟ್ ಪಡೆದು ಸ್ಪರ್ಧಿಸುತ್ತಿದ್ದಾರೆ. ಆದರೆ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಗೆಲುವು ಅಷ್ಟು ಸುಲಭವಲ್ಲ.

ಕ್ಷೇತ್ರದ ಅಭಿವೃದ್ಧಿ ವಿಷಯ ಬಂದಾಗ ಗದ್ದಿಗೌಡರ್ ಸಾಧನೆ ಕುರಿತು ಜನರು ನೀಡುವ ಅಂಕ ಶೂನ್ಯ. ಅದೇ ಅವರಿಗೆ ಈ ಬಾರಿ ಮುಳುವಾಗುವಂತೆ ಕಾಣುತ್ತಿದೆ. ಈ ಬಾರಿ ಟಿಕೆಟ್ ಹಾಲಿ ಸಂಸದರಿಗೆ ತಪ್ಪಬಹುದು ಎನ್ನುವ ಮಾತುಗಳು ಕೇಳಿಬರುವ ನಡುವೆಯೇ ಬಿಜೆಪಿಯು ಮತ್ತೆ ಟಿಕೆಟ್ ಕೊಟ್ಟು ಸ್ಪರ್ಧೆಗೆ ಕಳುಹಿಸಿದೆ. ಲೋಕಸಭೆಯಲ್ಲಿ ಏನೂ ಮಾತನಾಡದ, ಪ್ರಶ್ನೆ ಕೇಳದ ನಿರುತ್ಸಾಹಿಗಳನ್ನೂ ಆಯ್ಕೆ ಮಾಡುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ. ಗದ್ದಿಗೌಡರ್ ಬದಲಾವಣೆಗೆ ಪಟ್ಟು ಹಿಡಿದಿದ್ದ ಜಿಲ್ಲೆ ಬಿಜೆಪಿ ಮುಖಂಡರಲ್ಲಿ ಚುನಾವಣಾ ಪ್ರಚಾರಕ್ಕೆ ಆಸಕ್ತಿಯೇ ಉಳಿದುಕೊಂಡಿಲ್ಲ.

ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತ ಗಾಣಿಗೆರ ಮತ್ತು ಪಂಚಮಸಾಲಿ ಸಮಾಜದ ಮತಗಳು ಹೆಚ್ಚಿವೆ. ಈ ಬಾರಿ ಕಾಂಗ್ರೆಸ್ನಿಂದ ಮಾಜಿ ಸಚಿವರಾದ ಸಿದ್ದು ನೌಮಗೌಡ ಅವರ ಪುತ್ರ ಆನಂದ ನ್ಯಾಮಗೌಡ ಅವರು ಸ್ಪರ್ಧೆಗೆ ಬರುತ್ತಾರೆ ಎಂಬ ಮಾತುಗಳು ಇಡೀ ಜಿಲ್ಲೆಯಾದ್ಯಂತ ಹರಿದಾಡಿತ್ತು. ಇವರ ಜೊತೆಗೆ ಅಷ್ಟೇ ಪೈಪೋಟಿ ಕೊಡಬಲ್ಲ ಹುನಗುಂದ ಶಾಸಕ ವಿಜಯನಂದ ಕಾಶಪ್ಪನವರ ಪತ್ನಿ ವೀಣಾ ಕಾಶಪ್ಪನವರು ಸಹ ಕೈ ಟಿಕೆಟ್ ಆಕಾಂಕ್ಷಿಯಾಗಿದ್ದರು. ಮಾಜಿ ಸಚಿವ ಮತ್ತು ಬಾಗಲಕೋಟೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಅಜಯ್ ಕುಮಾರ್ ಸರ್ ನಾಯಕ್ ಸಹ ಟಿಕೆಟ್ ಸ್ಪರ್ಧೆಯಲ್ಲಿ ಇದ್ದರು.

ಇವೆಲ್ಲದರ ನಡುವೆ ಬಸವನ ಬಾಗೇವಾಡಿಯ ಶಾಸಕರಾದ ಶಿವಾನಂದ ಪಾಟೀಲ್ ಅವರ ಮಗಳು ಸಂಯುಕ್ತ ಪಾಟೀಲ್ ಅವರಿಗೆ ಕಾಂಗ್ರೆಸ್ ಪಕ್ಷ ಮಣೆ ಹಾಕಿ ಸ್ಪರ್ಧೆಗೆ ಇಳಿಸುತ್ತಿದೆ. ಸಂಯುಕ್ತ ಪಾಟೀಲ್ ತಂದೆಯಂತೆಯೇ ತಮ್ಮದೇ ಆದ ಪ್ರಭಾವಳಿಯನ್ನು ಬೆಳೆಸಿಕೊಂಡು ಪಕ್ಷದಲ್ಲಿ ಕೆಲಸ ಮಾಡುತ್ತ ಬಂದಿದ್ದಾರೆ. ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಶಿವಾನಂದ ಪಾಟೀಲರ ಪ್ರಭಾವ ಕಡಿಮೆಯೇನಲ್ಲ. ಅವರ ನೆಟ್ ವರ್ಕ್ ಬಹಳ ದೊಡ್ಡದು. ಚುನಾವಣೆಯಲ್ಲಿ ಯಾರನ್ನು ಗೆಲ್ಲಿಸಬೇಕು, ಯಾರನ್ನು ಸೋಲಿಸಬೇಕು ಎಂಬುದು ಶಿವಾನಂದ ಪಾಟೀಲರಿಗೆ ನೀರು ಕುಡಿದಷ್ಟು ಸಲೀಸು. ವಿಧಾನಸಭೆ ಚುನಾವಣೆ ಬಂದಾಗ ಸ್ವಪಕ್ಷೀಯರಲ್ಲದೆ ಬಿಜೆಪಿ ಅಭ್ಯರ್ಥಿಗಳೂ ಪಾಟೀಲರ ಬೆಂಬಲ ಕೋರುತ್ತಾರೆ. ಈಗ ತಮ್ಮ ಮಗಳೇ ಚುನಾವಣೆಗೆ ಸ್ಪರ್ಧಿಸುತ್ತರುವಾಗ ಪಾಟೀಲರು ತಮ್ಮ ಬತ್ತಳಿಕೆಯ ಎಲ್ಲ ಅಸ್ತ್ರಗಳನ್ನು ಹೊರತೆಗೆಯುವುದು ನಿಶ್ಚಿತ.

“ಈ ಬಾರಿಯ ಚುನಾವಣೆಯಲ್ಲಿ ವೀಣಾ ಕಾಶಪ್ಪನವರಿಗೆ ಟಿಕೆಟ್ ಕೊಟ್ಟರೆ ಜೋರಾದ ಸ್ಪರ್ಧೆ ಏರ್ಪಡುತ್ತಿತ್ತು. ಸಂಯುಕ್ತ ಪಾಟೀಲ್ ಅವರಿಗೆ ತಂದೆ ಹಣಬಲವು ಸಹ ಕೆಲಸ ಮಾಡುವ ಸಾಧ್ಯತೆಗಳಿದೆʼʼ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಬಾಗಲಕೋಟೆ ಜಿಲ್ಲಾಧ್ಯಕ್ಷರಾದ ಬಸವರಾಜ್ ಧರ್ಮಂತಿ ಕನ್ನಡ ಪ್ಲಾನೆಟ್ ಜೊತೆ ಅಭಿಪ್ರಾಯ ಹಂಚಿಕೊಳ್ಳುತ್ತಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಐದು ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು. ಉಳಿದಂತೆ ಜಮಖಂಡಿಯಲ್ಲಿ ಸಿದ್ದು ಸವದಿ ಮತ್ತು ತೇರದಾಳದಲ್ಲಿ ಜಗದೀಶ ಗುಡಗಂಟಿ ಬಿಜೆಪಿಯಿಂದ ಗೆದ್ದಿದ್ದಾರೆ. ಟಿಕೆಟ್ ವಂಚಿತರ ಅಸಮಾಧಾನದ ನಡುವೆಯೂ ಈ ಬಾರಿಯ ಚುನಾವಣೆಯನ್ನು ಗೆಲ್ಲಲೇಬೇಕೆಂಬ ಹಠ ಕಾಂಗ್ರೆಸ್ ಗೆ ಇದ್ದಂತಿದೆ.

  • ಮನೋಜ್ ಆರ್ ಕಂಬಳಿ

More articles

Latest article