ಜಾತಿ ಗಣತಿ: ಸಮೀಕ್ಷಾ ಕರ್ತವ್ಯಕ್ಕೆ ಹಾಜರಾಗದ ನೌಕರರ ಮೇಲೆ ಶಿಸ್ತು ಕ್ರಮ: ಸಚಿವ ಎಚ್‌ ಕೆ ಪಾಟೀಲ್‌ ಎಚ್ಚರಿಕೆ

Most read

ಬೆಂಗಳೂರು: ರಾಜ್ಯದಲ್ಲಿ ನಡೆದಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಕುರಿತು ಕೆಲವು ನಿರ್ದೇಶನಗಳನ್ನು ನೀಡಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ದಿ:27.09.2025 ರಂದು ಬೆಳಗ್ಗೆ 11.30 ಗಂಟೆಗೆ ರಾಜ್ಯದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿ‍ರ್ವಹಣಾಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಲಿದ್ದಾರೆ ಎಂದು ಕಾನೂನು, ಸಂಸದೀಯ ವ್ಯವಹಾರ ಸಚಿವ ಎಚ್‌.ಕೆ ಪಾಟೀಲ್‌ ತಿಳಿಸಿದ್ದಾರೆ.

ಸಚಿವ ಸಂಪುಟದ ಸಭೆಯ ನಂತರ ಸುದ್ದಿಗಾರರಿಗೆ ಸಚಿವ ಸಂಪುಟದ ನಿರ್ಣಯಗಳ ವಿವರಗಳನ್ನು ನೀಡಿದ ಅವರು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದ್ದು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಕೈಗೊಳ್ಳಲಾಗಿರುವ ಈ ಸಮೀಕ್ಷಾ ಕಾರ್ಯದಲ್ಲಿ ನಿಯೋಜಿಸಲ್ಪಡುವ ಅಧಿಕಾರಿ/ನೌಕರರು ಸಮೀಕ್ಷಾ ಕಾರ್ಯಕ್ಕೆ ಹಾಜರಾಗದೇ ಮತ್ತು ಕರ್ತವ್ಯಗಳನ್ನು ನಿರ್ವಹಿಸದೇ ಇರುವಂತಹವರ ವಿರುದ್ಧ ಶಿಸ್ತುಕ್ರಮ ಜರುಗಿಸಲು ಬೆಂಗಳೂರು ವ್ಯಾಪ್ತಿಯಲ್ಲಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ಅಧಿಕಾರ ಪ್ರಾಯೋಜಿಸಲಾಗಿದೆ ಎಂದು ತಿಳಿಸಿದರು.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕಾಗಿ ಗಣತಿದಾರರಾಗಿ ನಿಯೋಜಿಸಲ್ಪಡುವ ಸರ್ಕಾರ, ನಿಗಮ/ ಮಂಡಳಿಗಳ ಅಧಿಕಾರಿ/ ನೌಕರರುಗಳ ವಿರುದ್ಧ ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಗಳು, 2021ರಡಿ ಹಾಗೂ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರನ್ವಯ ಶಿಸ್ತುಕ್ರಮ ಮತ್ತು ದಂಡನೆ ವಿಧಿಸುವ ಅಧಿಕಾರವನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ಪ್ರತ್ಯಾಯೋಜಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

More articles

Latest article