ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಇಷ್ಟೊಂದು ಜಾತಿ ವಿಭಾಗಗಳು ಇವೆ ಎಂದು ನನ್ನ ಗಮನಕ್ಕಿರಲಿಲ್ಲ. ಇಂದಿನ ಕಾರ್ಯಕ್ರಮದಲ್ಲಿ ಆ ಸಮುದಾಯದ ಪ್ರಮುಖರು ತಮ್ಮೊಳಗಿನ ಸಮಸ್ಯೆಗಳನ್ನು ನಿವೇದಿಸಿಕೊಂಡ ನಂತರವೇ ಅವರ ಬದುಕಿನ ಬವಣೆ ಅರ್ಥವಾಗುತ್ತಿದೆ. ಚುನಾವಣೆಯ ನಂತರ ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಮತ್ತೆ ಪ್ರತಿಯೊಂದು ಹೋರಾಟಗಳಲ್ಲಿ ಭಾಗವಹಿಸುತ್ತೇನೆ ಎಂದು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ನುಡಿದರು.
ದಾಂಡೇಲಿಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲೆಯ ಬುಡಕಟ್ಟು ಸಮುದಾಯದವರ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಉತ್ತರ ಕನ್ನಡ ಜಿಲ್ಲೆಯ ಸಿದ್ದಿ ಸಮುದಾಯದವರು ಹಿಂದಿನ ಸಂಸದರಾಗಿದ್ದ ಮಾರ್ಗರೇಟ್ ಆಳ್ವಾ ಅವರ ಪ್ರಯತ್ನದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಯಾಗಿರುವುದು ಖುಷಿಯ ವಿಚಾರ. ಅದೇ ಮಾರ್ಗದಲ್ಲಿ ನಾನು ನಮ್ಮ ಖಾನಾಪುರ ಕ್ಷೇತ್ರದಲ್ಲಿರುವ ಸಿದ್ದಿಗಳನ್ನು ಕೂಡ ಪರಿಶಿಷ್ಟ ಪಂಗಡಕ್ಕೆ ಸೇರುವ ಹಾಗೆ ಮಾಡಿದ್ದೆ. ಇನ್ನು ಮುಂದೆ ಉಳಿದಂತೆ ಆಮೂಲಾಗ್ರ ಅಧ್ಯಯನ ನಡೆಸಿ ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಯಾಗಲು ಅರ್ಹತೆ ಹೊಂದಿರುವ ಎಲ್ಲ ಬುಡಕಟ್ಟು ಸಮುದಾಯದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸಂಸತ್ತಿನಲ್ಲಿ ಧ್ವನಿ ಎತ್ತುವೆ, ಜೊತೆಗೆ ಅದಕ್ಕೆ ಅವಶ್ಯಕತೆ ಇರುವ ಎಲ್ಲ ರೀತಿಯ ಹೋರಾಟಗಳನ್ನು ರೂಪಿಸಿ, ಆ ಹೋರಾಟಗಳಲ್ಲಿ ಭಾಗವಹಿಸುವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಹಲವಾಯಿ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್‌ಗೆ ಜನಸಾಮಾನ್ಯರ ಬಗೆಗಿನ ನೋವಿನ ಹಾಗು ಸಮಸ್ಯೆಗಳ ಅರಿವಿದೆ. ಅವರು ಆಯ್ಕೆಯಾಗಿ ಬಂದಲ್ಲಿ ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟುಗಳಿಗೆ ನಿಜವಾದ ಬೆಂಗಾವಲಾಗಿ ನಿಲ್ಲಲಿದ್ದಾರೆ. ಹಿಂದೆ ಮಾರ್ಗರೇಟ್ ಆಳ್ವಾರವರು ಸಿದ್ದಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದ ಹಾಗೆ ಡಾ. ಅಂಜಲಿ ನಿಂಬಾಳ್ಕರ್‌ರು ಮುಂದೆ ಉಳಿದ ಬುಡಕಟ್ಟುಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಿದ್ದಾರೆ. ತಳ ಸಮುದಾಯದ ಜನರಿಗೆ ಕಾಂಗ್ರೆಸ್‌ನಿಂದ ಮಾತ್ರ ನ್ಯಾಯ ಸಿಗಲು ಸಾಧ್ಯ ಎಂದರು.
ಸಿದ್ದಿ ಸಮುದಾಯದ ಜೂಲಿಯಾನಾ ಫರ್ನಾಂಡಿಸ್, ಮೌಲಾಲಿ ಸಿದ್ದಿ, ಅಂತೋನಿ ಡಿಗ್ಗೇಕರ್, ಯಾಕೋಬ ಸಿದ್ದಿ, ಬರೆರಾ ಸಿದ್ದಿ, ಸಾವೇರ ಸಿದ್ದಿ, ಕುಣಬಿ ಸಮಾಜದ ಸುಭಾಷ ಗಾವಡಾ, ದೇವಿದಾಸ ವೇಳಿಪ, ಗೌಳಿ ಸಮುದಾಯದ ದೇವ್ರು ಪಾಟೀಲ್, ಸುಕಾರಾಂ ಪೊಂಡರ, ಸಿದ್ದು ತರೋತ್, ಹಾಲಕ್ಕಿ ಸಮುದಾಯದ ಸುಮಿತ್ರಾ ಗೌಡ, ನಾಗವೇಣಿ, ಹಗೇರ ಸಮುದಾಯದ ಧಾರೇಶ್ವರ, ಕುಮಾರ, ಹಳ್ಳೆರ ಸಮುದಾಯದ ನಾಗಪ್ಪ, ಮುಕ್ರಿ ಸಮುದಾಯದ ನಮಯ್ಯ ಸೇರಿದಂತೆ ಸಮುದಾಯದ ಗಣ್ಯರು ಪಾಲ್ಗೊಂಡು ಜಿಲ್ಲೆಯ ಸಂವಾದದಲ್ಲಿ ಮಾತನಾಡಿದರು. ತಮ್ಮ ತಮ್ಮ ಸಮುದಾಯದೊಳಗಿನ ಸಮಸ್ಯೆಗಳು, ತಮಗೆ ಸಿಗಬೇಕಾದ ನ್ಯಾಯಯುತ ಬೇಡಿಕೆಗಳ ಬಗ್ಗೆ ತಿಳಿಸಿ ಅನೇಕರು ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಒತ್ತಾಯಿಸಿದರು.
ಸಿದ್ದಿ ಸಮುದಾಯದ ಪ್ರಮುಖರಾದ ಜೂಲಿಯಾನ ಸಿದ್ದಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಹರ್ಷಕುಮಾರ್ ಕುಗ್ವೆ ನಿರೂಪಿಸಿದರು.