ಬೆಂಗಳೂರು: ರಾಜ್ಯದ ಪ್ರಕಾಶಕರ ಸಂಕಷ್ಟಗಳು ನನ್ನ ಗಮನಕ್ಕೆ ಬಂದಿದ್ದು, ಪ್ರಕಾಶಕರ ಹಿತಕಾಯಲು ಸಗಟು ಖರೀದಿ ಯೋಜನೆಗಾಗಿ ಮುಂದಿನ ದಿನಗಳಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ಒದಗಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಭರವಸೆ ನೀಡಿದ್ದಾರೆ.
ಅವರು ಇಂದು ತಮ್ಮ ಗೃಹ ಕಚೇರಿಯಲ್ಲಿ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಯೋಜನೆಯಡಿ ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಕನ್ನಡ ಪುಸ್ತಕ ಪ್ರಾಧಿಕಾರ ಮನೆಗೊಂದು ಗ್ರಂಥಾಲಯ ಯೋಚನೆಯಡಿ ಉತ್ತಮ ಕೆಲಸ ಮಾಡುತ್ತಿದೆ ,ಪುಸ್ತಕ ಪ್ರೀತಿ ಎಂಬುದನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ,ಅವು ನಮ್ಮ ಜ್ಞಾನಾರ್ಜನೆಗೆ ನೆರವಾಗುತ್ತದೆ ಇಂತಹ ಪುಸ್ತಕ ಪ್ರೀತಿಯ ಫಲವಾಗಿಯೇ ಸಾಹಿತಿಗಳು ಪ್ರಕಾಶಕರು ಹಾಗೂ ಪುಸ್ತಕೋದ್ಯಮ ಜೀವಂತವಾಗಿರಲು ಸಾಧ್ಯ .ಆ ನಿಟ್ಟಿನಲ್ಲಿ ಪುಸ್ತಕ ಪ್ರೇಮ ದೊಡ್ಡ ರೀತಿಯಲ್ಲಿ ಆಂದೋಲನವಾಗಿ ಬೆಳೆಯಬೇಕಿದೆ, ಅದಕ್ಕೆ ಪುಸ್ತಕ ಪ್ರಾಧಿಕಾರದ ಈ ಯೋಜನೆ ಪೂರಕವಾಗಲಿ ಎಂದು ಹಾರೈಸಿದರು.
ಸಚಿವರ ಮನೆಯ ಗ್ರಂಥಾಲಯ ಅನುಷ್ಠಾನದ ಪ್ರಶಂಸಾ ಪತ್ರವನ್ನು ಸಚಿವರಿಗೆ ನೀಡಿದ ಹಿರಿಯ ಸಾಹಿತಿ ಹಾಗೂ ಮಾಜಿ ಸಚಿವೆ ಡಾ. ಬಿ ಟಿ ಲಲಿತ ನಾಯಕ್ ಅವರು ಮಾತನಾಡಿ ಪುಸ್ತಕ ಮನುಷ್ಯನನ್ನು ಮೃಗತ್ವದಿಂದ ಮಾನವತ್ವದ ಕಡೆಗೆ ಕೊಂಡೊಯುತ್ತದೆ , ಪಾಶ್ಚತ್ಯ ದೇಶಗಳಲ್ಲಿರುವ ಪುಸ್ತಕ ಪ್ರೀತಿ ನಮಗೆ ಮಾದರಿಯಾಗಿದೆ, ನಮ್ಮದು ಧರ್ಮಾಧಾರಿತ ಸಮಾಜವಾಗಿದೆ ಇದನ್ನು ಮಾನವ ಧರ್ಮವಾಗಿ ರೂಪಿಸುವ ಹೊಣೆಗಾರಿಕೆ ಪುಸ್ತಕಗಳ ಮೇಲಿದೆ ಎಂದರು..ಪ್ರಾಧಿಕಾರ ಮನೆಗೊಂದು ಗ್ರಂಥಾಲಯ ಯೋಚನೆಯ ಮೂಲಕ ಪುಸ್ತಕ ಪ್ರಕಾಶಕರು, ಸಾಹಿತಿಗಳಿಗೆ ನೆರವಾಗಲು ಹೊರಟಿದ್ದಾರೆ ಇದೊಂದು ಉತ್ತಮ ಯೋಜನೆ ಈ ಯೋಜನೆ ಯಶಸ್ವಿಯಾಗಲಿ ಎಂದು ಶುಭ ಕೋರಿದರು.
ಪ್ರಕಾಶಕರು ಗ್ರಂಥಾಲಯ ಇಲಾಖೆ ಸಗಟು ಖರೀದಿ ಸ್ಥಗಿತಗೊಳಿಸಿರುವುದರಿಂದ ಸಂಕಷ್ಟಕ್ಕೆ ಈಡಾಗಿದ್ದಾರೆ ಅದನ್ನು ಸರಿಪಡಿಸುವಂತೆ ಪ್ರಾಧಿಕಾರದ ಪರವಾಗಿ ಮನವಿ ಸಲ್ಲಿಸಿದ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಅವರು ಮಾತನಾಡಿ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಯೋಜನೆ ದೊಡ್ಡ ನಿರೀಕ್ಷೆಯೊಂದಿಗೆ ಆರಂಭ ಮಾಡಿದ್ದೇವೆ ,ಒಂದು ಲಕ್ಷ ಮನೆಗಳನ್ನು ತಲುಪುವ ಗುರಿ ನಮ್ಮದಾಗಿದೆ ಆ ನಿಟ್ಟಿನಲ್ಲಿ ಪ್ರತಿಯೊಂದು ಜಿಲ್ಲೆಯಲ್ಲೂ ಜಾಗೃತಿ ಸಮಿತಿ ರಚನೆ ಮಾಡಲಾಗಿದೆ, ಈ ಜಾಗೃತಿ ಸಮಿತಿ ಸದಸ್ಯರು ಗ್ರಂಥಾಲಯ ರೂಪಿಸುವಿಕೆಗೆ ನೆರವಾಗಲಿದ್ದಾರೆ ಎಂದರು.
ಸಮಾರಂಭದಲ್ಲಿ ಬೆಂಗಳೂರು ನಗರ ಜಿಲ್ಲೆಯ ಗ್ರಂಥಾಲಯ ಜಾಗೃತಿ ಸಮಿತಿ ಸದಸ್ಯರಿಗೆ ಸಚಿವ ಶಿವರಾಜ ತಂಗಡಗಿ ಅರ್ಹತಾ ಪತ್ರಗಳನ್ನು ವಿತರಣೆ ಮಾಡಿದರು. ಪ್ರಾಧಿಕಾರದ ಆಡಳಿತಾಧಿಕಾರಿ ಕೆ ಬಿ ಕಿರಣ್ ಸಿಂಗ್, ಸದಸ್ಯರಾದ ಲಕ್ಷ್ಮಣ ಕೊಡಸೆ ಹಾಗೂ ಡಾ. ಬಿ ಸಿ ಕುಶಾಲ ಅವರು ಉಪಸ್ಥಿತರಿದ್ದರು.

