ಚಂಡೀಗಢ: ಇಲ್ಲಿನ ಶಂಭು ಹಾಗೂ ಖನೌರಿ ಗಡಿ ಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಹೊರಹಾಕಿದ ಬಳಿಕ ಪಂಜಾಬ್ ಪೊಲೀಸರು ಅಲ್ಲಿ ಹಾಕಿದ್ದ ಸಿಮೆಂಟ್ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿದ್ದಾರೆ.
ಕಳೆದ ಒಂದು ವರ್ಷದಿಂದ ಪ್ರತಿಭಟನಾ ನಿರತ ರೈತರು ಇಲ್ಲಿಯೇ ನೆಲಸಿದ್ದರಿಂದ ಶಂಭು– ಅಂಬಾಲಾ ಹಾಗೂ ಸಂಗ್ರೂರ್– ಜಿಂದ್ ನಡುವಿನ ರಸ್ತೆಯನ್ನು ಮಚ್ಚಲಾಗಿತ್ತು. ಅಲ್ಲಿಗೆ ಜೆಸಿಬಿ ಹಾಗೂ ಇತರೆ ಯಂತ್ರಗಳ ಸಮೇತ ಆಗಮಿಸಿದ ಪೊಲೀಸರು ಅವುಗಳನ್ನು ಕಿತ್ತು ಹಾಕಿದ್ದಾರೆ. ಪಂಜಾಬ್ ಭಾಗದಲ್ಲಿ ಶಂಭು ಹಾಗೂ ಖನೌರಿ ಗಡಿಭಾಗದಲ್ಲಿ ಗುರುವಾರ ಎಂದಿನಂತೆ ವಾಹನ ಸಂಚಾರ ಆರಂಭಗೊಂಡಿದೆ. ಟ್ರಾಲಿ ಹಾಗೂ ಇತರೆ ಅವಶೇಷಗಳನ್ನು ತೆರವುಗೊಳಿಸಲಾಗುವುದು ಎಂದು ಪಟಿಯಾಲ ಜಿಲ್ಲಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ನಾನಕ್ ಸಿಂಗ್ ತಿಳಿಸಿದ್ದಾರೆ.
ಪ್ರತಿಭಟನೆ ಎಚ್ಚರಿಕೆ: ಬ್ಯಾರಿಕೇಡ್ ತೆರವುಗೊಳಿಸಿದ ಪೊಲೀಸರ ಕ್ರಮವನ್ನು ಖಂಡಿಸಿ, ಸಂಯುಕ್ತ ಕಿಸಾನ್ ಮೋರ್ಚಾ, ಕಿಸಾನ್ ಮಜ್ದೂರ್ ಮೋರ್ಚಾ ನೇತೃತ್ವದಲ್ಲಿ ರಾಜ್ಯದ ಎಲ್ಲ ಡಿಸಿಪಿ ಕಚೇರಿಗಳ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಚಂಡೀಗಢದಲ್ಲಿ ಕೇಂದ್ರ ಕೃಷಿ ಖಾತೆ ಸಚಿವ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಕೇಂದ್ರ ನಿಯೋಗದ ಜೊತೆ ಸಭೆ ನಡೆಸಿ ಹಿಂತಿರುಗುತ್ತಿದ್ದ ರೈತ ಮುಖಂಡರಾದ ಸರವಣ ಸಿಂಗ್ ಪಂಡೇರ್, ಜಗಜೀತ್ ಸಿಂಗ್ ಡಲ್ಲೇವಾಲ್ ಅವರನ್ನು ಪಂಜಾಬ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಂಭು ಹಾಗೂ ಖನೌರಿ ಭಾಗದಲ್ಲಿ ರಾಜ್ಯದ ಎರಡು ಪ್ರಮುಖ ಹೆದ್ದಾರಿ ಮುಚ್ಚಿದ್ದರಿಂದ ಪಂಜಾಬ್‌ನ ಆರ್ಥಿಕ ವಹಿವಾಟಿನ ತೀವ್ರ ಹೊಡೆತ ಬಿದ್ದಿದೆ. ಆಪ್ ಸರ್ಕಾರವು ಕೈಗಾರಿಕೆಗಳನ್ನು ಸೆಳೆದು ಉದ್ಯೋಗ ನೀಡಲು ಆದ್ಯತೆ ನೀಡುತ್ತಿದೆ ಎಂದು ಪಂಜಾಬ್ ಹಣಕಾಸು ಸಚಿವ ಹರ್ಪಾಲ್ ಸಿಂಗ್ ಛೀಮಾ ಹೇಳಿದ್ದಾರೆ.