ಸಕಲೇಶಪುರದ ಪಟ್ಲ ಬೆಟ್ಟದಲ್ಲಿ ಹಿಂಡುಹಿಂಡಾಗಿ ಕಾಣಿಸಿಕೊಂಡ ಕಾಡುಕೋಣಗಳು

Most read

ಹಾಸನ : ಸಕಲೇಶಪುರ ತಾಲ್ಲೂಕು ವನಗೂರು ಕೂಡುರಸ್ತೆಯ ಪಟ್ಲ ಬೆಟ್ಟದ ಬಳಿ ಸುಮಾರು ಹದಿನೈದಕ್ಕೂ ಹೆಚ್ಚು ಕಾಡುಕೋಣಗಳು ಕಾಣಿಸಿಕೊಂಡು ಪ್ರವಾಸಿಗರು ಭಯಭೀತರಾದ ಘಟನೆ ಇಂದು ನಡೆದಿದೆ.

ಪ್ರವಾಸಿ ಸ್ಥಳವೂ ಆಗಿರುವ ಪಟ್ಲ ಬೆಟ್ಟದ ಮೇಲೆ ಫೋರ್ ವೀಲ್ ಜೀಪ್ ಗಳ ಸಹಾಯದಿಂದ ಹೋಗಿ ವನಸಂಪತ್ತನ್ನು ವೀಕ್ಷಿಸಲು ಸಾವಿರಾರು ಪ್ರವಾಸಿಗರು ಪ್ರತಿ ವಾರ ವೀಕೆಂಡ್ ಗಳಲ್ಲಿ ಇಲ್ಲಿಗೆ ಬರುತ್ತಾರೆ.

ಇಂದು ಹಿಂಡುಹಿಂಡಾಗಿ ಕಾಣಿಸಿಕೊಂಡ ಕಾಡೆಮ್ಮೆಗಳು ಮತ್ತು ಕಾಡುಕೋಣಗಳನ್ನು ನೋಡಿ ಪ್ರವಾಸಿಗರು ಭಯಭೀತರಾದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮರಿಗಳು ಸೇರಿ ಸುಮಾರು ಹದಿನೈದಕ್ಕೂ ಹೆಚ್ಚಿರುವ ಕಾಡೆಮ್ಮೆ, ಕಾಡುಕೋಣಗಳು ಪಟ್ಲ ಬೆಟ್ಟದಲ್ಲಿ ಇಂದು ಕಾಣಿಸಿಕೊಂಡವು. ಕಾಟಿ ಎಂದು ಸ್ಥಳೀಯರು ಕರೆಯುವ ಈ ಪ್ರಾಣಿಗಳು ಜನವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವುದು ಅಪರೂಪ. ಕಾಡಿನ ಒಳಭಾಗದಲ್ಲೇ ಇರುವ ಈ ಪ್ರಾಣಿಗಳು ಇಂದು ಬೆಟ್ಟದ ಬಳಿ ಕಾಣಿಸಿಕೊಂಡು ಕಾಡಿನೊಳಗೆ ಹೋಗಿದ್ದನ್ನು ಪ್ರವಾಸಿಗರು, ಸ್ಥಳೀಯರು ತಮ್ಮ ಮೊಬೈಲ್ ಗಳಿಂದ ಸೆರೆಹಿಡಿದರು.

ಪಶ್ಚಿಮಘಟ್ಟ ಭಾಗದಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗಿರುವ ಬೆನ್ನಲ್ಲೇ ಹಿಂಡುಹಿಂಡಾಗಿ ಕಾಡು ಕೋಣಗಳು ಕಾಣಿಸಿಕೊಂಡಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

More articles

Latest article