ನನಗೇ ಯಾಕೆ ಹೀಗಾಗುತ್ತದೆ…?

Most read

ನಾನು ಈ 45 ವರ್ಷದ ಸುದೀರ್ಘ ಬದುಕಿನಲ್ಲಿ ಅರ್ಥ ಮಾಡಿಕೊಂಡದ್ದೆಂದರೆ ನಾವು ಗೋಳು ತೋಡಿಕೊಂಡಷ್ಟೂ ಕೇವಲ ಎದುರಿನವರಿಗಷ್ಟೇ ಗೋಳಲ್ಲ ಬದುಕಿಗೂ ಇನ್ನಷ್ಟು ಗೋಳು ತಂದು ಸುರಿಯಲು ಸಹಕಾರಿ. ನಾವು ವಿಕ್ಟಿಮ್ ಗಳು ಎಂದುಕೊಂಡಾಗೆಲ್ಲಾ ಇನ್ನಷ್ಟು ವಿಕ್ಟಿಮ್‌ ಗಳಾಗಿ ಹೋಗುತ್ತೇವೆ. ಈ ರೀತಿ ನಮ್ಮನ್ನು ನಾವು ವಿಕ್ಟಿಮ್‌ಗಳಾಗಿ ಬಿಂಬಿಸಿಕೊಳ್ಳುವುದರ ಅತ್ಯಂತ ದೊಡ್ಡ ಅನರ್ಥ ನಾವು ದುರ್ಬಲರು ಎಂದು ಮನಸಿಗೆ ಹೇಳಿಕೊಡುವುದುಡಾ ರೂಪಾ ರಾವ್, ಮನ:ಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ.

” ನನಗೇ ಯಾಕೆ ಹೀಗಾಗುತ್ತದೆ,”

” ನನಗೇ ಎಲ್ಲಾ ಯಾಕೆ ಮೋಸ ಮಾಡ್ತಾರೆ, ಪ್ರಪಂಚದಲ್ಲಿ ಎಲ್ಲರೂ ನನ್ನನ್ನು ಯಾಕೆ ದ್ವೇಷ ಮಾಡ್ತಾರೆ,”

” ನನ್ನನ್ನು ಯಾರೂ ಪ್ರೀತಿಸಲ್ಲ, ಎಲ್ಲರೂ ನನ್ನಿಂದ ದೂರ ಹೋಗ್ತಾರೆ”

” ನಾನಿದ್ದರೆ ತಾನೇ ತಾನಾಗಿ ತೊಂದರೆಗಳು ನನ್ನ ಹುಡುಕುತ್ತಾ ಬರುತ್ತವೆ, ನಾನೆ ಇಲ್ಲ ಅಂದರೆ ಅಂತ ಅನಿಸಿಬಿಡುತ್ತದೆ, ಸಾಯಬೇಕು ಅನಿಸಿಬಿಡುತ್ತದೆ”

” ನನ್ನನ್ನು ಎಲ್ಲರೂ ಬಳಸಿಕೊಳ್ಳುತ್ತಾರೆ, ನಾನು ಸಾಫ್ಟ್ ಅಂತಲಾ”

” ನನ್ನನ್ನು ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ “

ಮೇಲಿನೆಲ್ಲಾ ತರಹದ ಪ್ಯಾಟರ್ನ್ ಗಳೂ ನನಗೆ ಆಗಾಗ ಕೌನ್ಸೆಲಿಂಗ್‌ನಲ್ಲೀ ಸಿಕ್ಕಾಗ ಬರುವ ಮಾತುಗಳು. ಅಷ್ಟೇಕೆ‌ ಒಂದೊಮ್ಮೆ ನಾನೇ ಬಳಸುತ್ತಿದ್ದ ಮಾತುಗಳು. ಬರೇ ಫೇಸ್‌ಬುಕ್‌ನಲ್ಲಿ ಮಾತ್ರವಲ್ಲ ಆಗಾಗ ಬಹುತೇಕ ಕಥೆ ಕವನಗಳಲ್ಲಿ ಕಾಣಿಸಿಕೊಳ್ಳುವ ಸಾಲುಗಳು ಇವು.

ನಾನು ಈ 45 ವರ್ಷದ ಸುದೀರ್ಘ ಬದುಕಿನಲ್ಲಿ ಅರ್ಥ ಮಾಡಿಕೊಂಡದ್ದೆಂದರೆ ನಾವು ಗೋಳು ತೋಡಿಕೊಂಡಷ್ಟೂ ಕೇವಲ ಎದುರಿನವರಿಗಷ್ಟೇ ಗೋಳಲ್ಲ, ಬದುಕಿಗೂ ಇನ್ನಷ್ಟು ಗೋಳು ತಂದು ಸುರಿಯಲು ಸಹಕಾರಿ. ನಾವು ವಿಕ್ಟಿಮ್ ಗಳು ಎಂದುಕೊಂಡಾಗೆಲ್ಲಾ ಇನ್ನಷ್ಟು ವಿಕ್ಟಿಮ್‌ ಗಳಾಗಿ ಹೋಗುತ್ತೇವೆ. ಈ ರೀತಿ ನಮ್ಮನ್ನು ನಾವು ವಿಕ್ಟಿಮ್‌ಗಳಾಗಿ ಬಿಂಬಿಸಿಕೊಳ್ಳುವುದರ ಅತ್ಯಂತ ದೊಡ್ಡ ಅನರ್ಥ  ನಾವು ದುರ್ಬಲರು ಎಂದು ಮನಸಿಗೆ ಹೇಳಿಕೊಡುವುದು.

ಒಂದು ಮಗುವಿಗೆ ಚಿಕ್ಕಂದಿನಿಂದ ನೀನು ಬಹಳ ವೀಕ್, ನೀನು ಇದನ್ನು ಮಾಡಲಾರೆ, ಹಾಗೆ ಮಾಡಬಾರದು ಎಂದೆಲ್ಲಾ ಹೇಳುತ್ತಿದ್ದರೆ ಮಗು ಹೇಗೆ ತಾನು ದುರ್ಬಲನೆಂದೇ ಭಾವಿಸುತ್ತದೆಯೋ ಹಾಗೇ ಮನಸು ಕೂಡ,

“ಪದೇ ಪದೇ ನನಗೆ ಜನ ಮೋಸ ಮಾಡುತ್ತಾರೆ, ಪದೇ ಪದೇ ನನಗೆ ಏಕೆ‌ ಕಷ್ಟ  ಬರುತ್ತದೆ, ದ್ವೇಷ ಮಾಡುತ್ತಾರೆ,” ಎಂಬ ಸಾಲುಗಳು ಬಹಳ ಸಲ ನನಗೂ ಮನಸಲ್ಲಿ ಬರುತ್ತೆ. ಆದರೆ ಮುಂದಿನ ಕ್ಷಣ ನನಗಾಗಿಯೇ‌ ಬಂದ ವಿಶೇಷ ಹಾಗು ಸಂಭ್ರಮದ ಕ್ಷಣ, ನನ್ನನ್ನು ಪ್ರೀತಿಸುವವರು, ನನಗೆ ಸಹಾಯ ಮಾಡಿದವರು ಎಲ್ಲರನ್ನೂ ನೆನಪಿಸಿಕೊಳ್ಳುವೆ.  ಮರುಕ್ಷಣವೇ ನಾನು ಎಷ್ಟು ಲಕ್ಕಿ ಅಂತನಿಸಿ ಬಿಡುತ್ತದೆ‌.

ಮೊನ್ನೆಯ ಒಂದು  ಕೌನ್ಸೆಲಿಂಗ್‌ ನಲ್ಲಿ  ಬಾಯ್ ಫ್ರೆಂಡ್ ಬಿಟ್ಟು ಹೋದಾಗ ತನ್ನನ್ನು ಯಾರೂ ಪ್ರೀತಿಸುತ್ತಿಲ್ಲ ಎಂದು ಅಳುತ್ತಿದ್ದ ಹುಡುಗಿಯೊಬ್ಬಳಿಗೆ ಅವಳನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಅವಳ‌ ಸಿಂಗಲ್ ತಾಯಿ ನೆನಪೇ ಆಗಿರಲಿಲ್ಲ. ನೆನಪು ಮಾಡಿಸಿದಾಗ ಅತ್ತು ಬಿಟ್ಟಳು.

ಇನ್ನೊಬ್ಬ ತನ್ನನ್ನು ಒಂದಷ್ಟು ಹುಡುಗಿಯರು ರಿಜೆಕ್ಟ್ ಮಾಡಿದರು ಎಂದ ಮಾತ್ರಕ್ಕೆ ತನ್ನನ್ನು ಲೋಕವೇ ಇಷ್ಟ ಪಡುತ್ತಿಲ್ಲ , ತಾನು ಎಲ್ಲಿಯೂ ಸಲ್ಲದವ ಎಂದು ಖಿನ್ನತೆಗೆ ಜಾರಿದ್ದ.  ಅವನ ಓದು, ಅವನ ಕೆಲಸ, ತಂದೆ ತಾಯಿ ಎಲ್ಲರೂ ಇದ್ದಾರೆ ಎಂದು ನೆನಪು ಮಾಡಿದಾಗ ಕೊಂಚ ಗೆಲುವು ಕಂಡ.

ಬದುಕು ಹೀಗೆಯೇ.. ಇಲ್ಲದರ ಬಗ್ಗೆ ಯೋಚಿಸುತ್ತಾ ಇರುವುದನ್ನು ಮರೆಯುತ್ತೇವೆ. ಮನಸೂ ಕೂಡ ಇರುವುದನ್ನು ನೋಡದೇ ಕಳೆದುಕೊಂಡುದರ ಬಗ್ಗೆಯೇ‌ ಚಿಂತಿಸಿದಾಗ ʼವರಿ ಟ್ರಾಪ್ʼ ಗೆ ಬೀಳುತ್ತೆ. ಇದು ನಿಲ್ಲದ ವಿಷ ಚಕ್ರ. ಚಿಂತೆ ಮತ್ತೊಂದು ಚಿಂತೆಗೆ ದೂಡುತ್ತದೆಯೇ ಹೊರತು ಪರಿಹಾರ ಕೊಡುವುದಿಲ್ಲ.

ಚಿಂತೆ ಭಾವನಾತ್ಮಕ. ಇದನ್ನು ತಾರ್ಕಿಕ  ಚಿಂತನೆಯನ್ನಾಗಿ, ಯೋಚನೆಯನ್ನು ಆಲೋಚನೆಯನ್ನಾಗಿ  ಮಾಡಿದಾಗ ಮನಸು ಈ ಕ್ಷಣ ಶಾಶ್ವತವಲ್ಲ ಎಂದು ನಂಬಿ ಮುಂದೆ ಹೋಗುತ್ತದೆ.

ಡಾ ರೂಪಾ ರಾವ್

ಮನ:ಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ

ಬೆಂಗಳೂರು ವಾಸಿಯಾಗಿರುವ ಇವರು ಮನಃಶಾಸ್ತ್ರದಲ್ಲಿ ಹಾಗೂ ಸೈಕೋಥೆರಪಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ಸಂಪರ್ಕ ಸಂಖ್ಯೆ: 97408 66990

ಇದನ್ನೂ ಓದಿ- ಬಾಲ್ಯದ ನೆರಳು ಭವಿಷ್ಯದುದ್ದಕ್ಕೂ..

More articles

Latest article