ಹೊಸದಿಲ್ಲಿ: ಮೀಸಲಾತಿಯನ್ನು ಕೊನೆಗೊಳಿಸಲು ಸಂವಿಧಾನವನ್ನು ಬದಲಾಯಿಸಲು ಬಯಸುತ್ತಿರುವುದು ಆರ್‌ಎಸ್‌ಎಸ್ ಮತ್ತು ಬಿಜೆಪಿ ಎಂದು ಎಲ್ಲರಿಗೂ ತಿಳಿದಿದೆ. ನಿಮ್ಮ ನಾಯಕರು ಈ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ನಮ್ಮ ಸಂವಿಧಾನದ 16ನೇ ವಿಧಿಯ ಪ್ರಕಾರ ಜನಸಂಖ್ಯೆಯ ಆಧಾರದ ಮೇಲೆ SC, ST ಮತ್ತು OBC ಗಳಿಗೆ ನೀಡಿದ ಮೀಸಲಾತಿಯನ್ನು ನೀವು ಏಕೆ ವಿರೋಧಿಸುತ್ತೀರಿ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರಶ್ನಿಸಿದ್ದಾರೆ.
ಈ ಕುರಿತು ಮೋದಿಯವರಿಗೆ ಪತ್ರ ಬರೆದಿರುವ ಅವರು, 1947 ರಿಂದ ಪ್ರತಿ ಹಂತದಲ್ಲೂ ಮೀಸಲಾತಿಯನ್ನು ವಿರೋಧಿಸಿದವರು ಆರ್‌ಎಸ್‌ಎಸ್ ಮತ್ತು ಬಿಜೆಪಿ ಎಂದು ಎಲ್ಲರಿಗೂ ತಿಳಿದಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಬಹಿರಂಗ ಚರ್ಚೆಗೆ ಆಹ್ವಾನಿಸಿರುವ ಅವರು, ನಿಮ್ಮ ಭಾಷಣದ ಸುಳ್ಳುಗಳಿಂದ ಕೂಡಿವೆ. ಒಂದು ಸುಳ್ಳನ್ನು ಸಾವಿರ ಬಾರಿ ಪುನರಾವರ್ತಿಸಿದರೂ ಅದು ಸತ್ಯವಾಗುವುದಿಲ್ಲ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಏನು ಬರೆದಿದೆ ಮತ್ತು ನಾವು ಏನು ಭರವಸೆ ನೀಡಿದ್ದೇವೆ ಎಂಬುದನ್ನು ಸ್ವತಃ ಮತದಾರರು ಓದಿ ಅರ್ಥಮಾಡಿಕೊಳ್ಳುವಷ್ಟು ಬುದ್ಧಿವಂತರಾಗಿದ್ದಾರೆ. ನಮ್ಮ ಖಾತರಿಗಳು ತುಂಬಾ ಸರಳ ಮತ್ತು ಸ್ಪಷ್ಟವಾಗಿದೆ, ನಾವು ಅವರಿಗೆ ಅದನ್ನು ವಿವರಿಸಬೇಕಾಗಿಲ್ಲ. ನಿಮ್ಮ ಅನುಕೂಲಕ್ಕಾಗಿ, ನಾನು ಅವುಗಳನ್ನು ಮತ್ತೆ ಹೇಳುತ್ತಿದ್ದೇನೆ ಎಂದು ಪತ್ರದಲ್ಲಿ ಖರ್ಗೆ ವಿವರಿಸಿದ್ದಾರೆ.
ಕಾಂಗ್ರೆಸ್ ನ ನಾಲ್ಕು ನ್ಯಾಯ ಯೋಜನೆಗಳು ಯುವಕರು, ಮಹಿಳೆಯರು, ರೈತರು ಮತ್ತು ಕಾರ್ಮಿಕರನ್ನು ಸಶಕ್ತಿಗೊಳಿಸಲಿದೆ. ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದು ನೀವು ಮತ್ತು ಗೃಹ ಸಚಿವರು ಹೇಳುವುದನ್ನು ಕೇಳಿದ್ದೇವೆ. ಕಳೆದ 10 ವರ್ಷಗಳಲ್ಲಿ ನಾವು ನೋಡಿದ ಒಂದೇ ಒಂದು ತುಷ್ಟೀಕರಣ ನೀತಿಯೆಂದರೆ ನೀವು ಮತ್ತು ನಿಮ್ಮ ಮಂತ್ರಿಗಳು ಚೀನಿಯರನ್ನು ಓಲೈಸುವುದು. ಇಂದಿಗೂ, ನೀವು ಚೀನಾವನ್ನು ಭಾರತದ ಪ್ರದೇಶ ಅತಿಕ್ರಮಣ ಮಾಡಿಕೊಂಡಿಲ್ಲ ಎಂದು ಹೇಳುತ್ತಿದ್ದೀರಿ. ಈ ಮೂಲಕ ಗಾಲ್ವಾನ್‌ನಲ್ಲಿ 20 ಭಾರತೀಯ ಸೈನಿಕರ ಅತ್ಯುನ್ನತ ತ್ಯಾಗವನ್ನು ಅವಮಾನಿಸಿದ್ದೀರಿ. ಸಾರ್ವಜನಿಕವಾಗಿ ಚೀನಾಕ್ಕೆ ನೀಡಿದ ‘ಕ್ಲೀನ್ ಚಿಟ್’ ಭಾರತವನ್ನು ದುರ್ಬಲಗೊಳಿಸಿದೆ.
ಅರುಣಾಚಲ ಪ್ರದೇಶ, ಲಡಾಖ್ ಮತ್ತು ಉತ್ತರಾಖಂಡದ ಎಲ್‌ಎಸಿ ಬಳಿ ಚೀನಾದ ಪುನರಾವರ್ತಿತ ಉಲ್ಲಂಘನೆ ಮತ್ತು ಮಿಲಿಟರಿ ಮೂಲಸೌಕರ್ಯ ನಿರ್ಮಾಣದಿಂದಾಗಿ ಉದ್ವಿಗ್ನತೆ ಹೆಚ್ಚುತ್ತಿರುವಾಗಲೂ, ಭಾರತಕ್ಕೆ ಚೀನಾದ ಸರಕುಗಳ ಆಮದು ಕಳೆದ 5 ವರ್ಷಗಳಲ್ಲಿ 54.76% ರಷ್ಟು ಹೆಚ್ಚಾಗಿದೆ ಮತ್ತು 2023 ರಲ್ಲಿ $ 101 ಬಿಲಿಯನ್ ದಾಟಿದೆ.
ದೇಶದ ಸಂಪತ್ತು ಸಮುದಾಯವೊಂದಕ್ಕೆ ಹಂಚುವ ಆರೋಪಕ್ಕೆ ಪ್ರಧಾನಿ ನರೇಂದ್ರ ಮೋದಿ ಗೆ ಬರೆದ ಪತ್ರದಲ್ಲಿ ಖರ್ಗೆ ತಿರುಗೇಟು ನೀಡಿದ್ದು, ಜನರ ಕಷ್ಟಪಟ್ಟು ದುಡಿದ ಹಣವನ್ನು ಕಸಿದುಕೊಳ್ಳಲಾಗುವುದು ಎಂದು ಹೇಳಿದ್ದೀರಿ. ಗುಜರಾತ್‌ನ ಬಡ ದಲಿತ ರೈತರಿಂದ ವಂಚಿಸಿ ಬಿಜೆಪಿಗೆ ಚುನಾವಣಾ ಬಾಂಡ್‌ಗಳಾಗಿ ನೀಡಿರುವ 10 ಕೋಟಿ ರೂ.ಗಳನ್ನು ಹಿಂದಿರುಗಿಸಲು ನಿಮ್ಮ ಪಕ್ಷಕ್ಕೆ ನಾನು ವಿನಂತಿಸುತ್ತೇನೆ. ನಿಮ್ಮ ಪಕ್ಷ ಬಾಂಡ್ ಕೊಡಿ – ಕೆಲಸ ಪಡೆಯಿರಿ, ಹಫ್ತಾ ವಸೂಲಿ ಹೀಗೆ ನಕಲಿ ಕಂಪನಿಗಳ ಮೂಲಕ ಅಕ್ರಮವಾಗಿ ಹಣ ಪಡೆದಿದೆ. ಚುನಾವಣಾ ಬಾಂಡ್‌ಗಳ ಮೂಲಕ 8,250 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. 8,250 ಕೋಟಿಗಳಲ್ಲಿ ಕನಿಷ್ಠ 10 ಕೋಟಿ ರೂಪಾಯಿಯನ್ನು ಈ ದಲಿತ ಕುಟುಂಬಕ್ಕೆ ಹಿಂತಿರುಗಿಸಬಹುದು ಎಂದು ಖರ್ಗೆ ತಿಳಿಸಿದ್ದಾರೆ.
ನಿಮ್ಮ ಹಿಂದಿನ ಹಣಕಾಸು ಸಚಿವರು ಮತ್ತು ನಿಮ್ಮ ಪಕ್ಷದ ನಾಯಕರು ಪಿತ್ರಾರ್ಜಿತ ತೆರಿಗೆ ವ್ಯವಸ್ಥೆ ಬೇಕು ಎಂದು ಪದೇ ಪದೇ ಪ್ರಸ್ತಾಪಿಸುತ್ತಿರುವಾಗ. ಕಾಂಗ್ರೆಸ್ ಪಿತ್ರಾರ್ಜಿತ ತೆರಿಗೆಯನ್ನು ತರಲು ಬಯಸುತ್ತದೆ ಎಂದು ಸುಳ್ಳು ಹೇಳುತ್ತಿದ್ದೀರಿ. ನಿಮ್ಮ ನಾಯಕರ ಈ ಭಾಷಣಗಳು ಮತ್ತು ಹೇಳಿಕೆಗಳನ್ನು ಜನರು ಆನ್‌ಲೈನ್‌ನಲ್ಲಿ ನೋಡಬಹುದು. ಮೊದಲೆರಡು ಹಂತದ ಚುನಾವಣೆಗಳಲ್ಲಿ ಕಡಿಮೆ ಮತದಾನವಾಗಿರುವುದರ ಬಗ್ಗೆ ನೀವು ಚಿಂತೆಗೀಡಾಗಿದ್ದೀರಿ. ನಿಮ್ಮ ನೀತಿಗಳು ಅಥವಾ ನಿಮ್ಮ ಪ್ರಚಾರ ಭಾಷಣಗಳ ಬಗ್ಗೆ ಜನರು ಉತ್ಸಾಹ ಹೊಂದಿಲ್ಲ ಎಂದು ಸ್ಪಷ್ಟವಾಗಿ ತಿಳಿಯುತ್ತಿದೆ.
ಬಿಸಿಲಿನಿಂದಲ್ಲ, ನಿಮ್ಮ ನೀತಿಗಳಿಂದ ಬಡವರು ಸುಟ್ಟು ಹೋಗಿದ್ದಾರೆ. ಧರ್ಮದ ಹೆಸರಿನಲ್ಲಿ ಮತದಾರರನ್ನು ಒಗ್ಗೂಡಿಸುವಂತೆ ನಿಮ್ಮ ಕಾರ್ಯಕರ್ತರಿಗೆ ಮನವಿ ಮಾಡಿದ್ದೀರಿ. ಮತದಾರರು ನಿಮಗೆ ಮತ ಹಾಕಲು ಉತ್ಸುಕರಾಗದಿದ್ದರೆ, ನಿಮ್ಮ ಕಾರ್ಯಕರ್ತರನ್ನು ದೂಷಿಸಬೇಡಿ ಎಂದು ಮಲ್ಲಿಕಾರ್ಜುನ ಖರ್ಗೆ ಕಿವಿಮಾತು ಹೇಳಿದ್ದಾರೆ.