ವೈದಿಕರು ಬುದ್ಧ ಹಾಗು ಬೌದ್ಧರನ್ನು ವಿರೋಧಿಸಿದ್ದೆಂಬುದು ಅಪ್ಪಟ ಸುಳ್ಳು. ಯಾಕೆಂದರೆ, ಸ್ವಯಂ ವಿಷ್ಣುವೇ ದಶಾವತಾರದ ಹೆಸರಲ್ಲಿ ಬುದ್ಧನಾಗಿ ಅವತರಿಸಿದ್ದಾನಲ್ಲ ಎನ್ನುವವರಿದ್ದಾರೆ. ಆದರೆ ಇದು ಕೇವಲ ಅರ್ಧ ಸತ್ಯದ ಮಾತೇ ವಿನಃ ಪೂರ್ಣ ನಿಜವಲ್ಲ. ಯಾಕೆಂದರೆ, ಈ ಐತಿಹಾಸಿಕ ಬುದ್ಧನಿಗೂ ಪೌರಾಣಿಕ ಬುದ್ಧನಿಗೂ ಯಾವುದೇ ಸಂಬಂಧವಿಲ್ಲ. ಐತಿಹಾಸಿಕ ಬುದ್ಧನ ಹೆಸರು ಗೌತಮ ಬುದ್ಧನಾದರೆ ಪೌರಾಣಿಕ ಬುದ್ಧನದ್ದು ಸುಗತ ಬುದ್ಧ – ಶಂಕರ್ ಸೂರ್ನಳ್ಳಿ, ಸಾಮಾಜಿಕ ಹೋರಾಟಗಾರರು.
ಭಾರತ ಸಾವಿರಾರು ದೇವದೇವತೆಗಳನ್ನು ಆರಾಧಿಸಿಕೊಂಡು ಬರುತ್ತಿರುವ ನಾಡು. ಹಿಂದೂ ಬಹುಸಂಖ್ಯಾತರಿರುವ ದೇಶವೆಂದು ಕರೆದು ಕೊಳ್ಳುವುದೂ ಉಂಟು. ಆದರೆ ಹೊರದೇಶಗಳಿಗೆ ಭೇಟಿ ನೀಡುವ ಇಲ್ಲಿನ ಗಣ್ಯವ್ಯಕ್ತಿಗಳು ಹೇಳಿಕೊಳ್ಳುವುದು ನಾವು ಬುದ್ಧನ ನಾಡಿನಿಂದ ಬಂದವರೆಂದೇ ಹೊರತು ಕೃಷ್ಣನ, ರಾಮನ ಅಥವಾ ಈಶ್ವರನ ಹೆಸರನ್ನು ಬಹುತೇಕ ಯಾರೂ ಉಲ್ಲೇಖಿಸಲಾರರು. ಇದು ವಿಶ್ವದಲ್ಲಿ ’ಜಗತ್ತಿನ ಬೆಳಕು” ಎಂದು ಖ್ಯಾತನಾದ ಅಹಿಂಸೆ ಸಹನೆಯ ಶಾಂತಿದೂತ ಬುದ್ಧನ ಮಹಿಮೆ. ಜಗತ್ತಿನಲ್ಲಿ ಆತ್ಯಾಧುನಿಕ ಶಸ್ತ್ರಾಸ್ತ್ರ ಅಣ್ವಸ್ತ್ರಗಳ ಯುದ್ಧ ಪೈಪೋಟಿಯ ಇವತ್ತಿನ ಕಾಲಕ್ಕೆ ಗೌತಮಬುದ್ಧ ಹಿಂದಿಗಿಂತ ಹೆಚ್ಚೆಚ್ಚು ಪ್ರಸ್ತುತವೆನಿಸುತ್ತಿದ್ದಾನೆ ಕೂಡ.
ಐತಿಹಾಸಿಕವಾಗಿ ಭಾರತದಲ್ಲಿ ವ್ಯವಸ್ಥಿತವಾಗಿ ಹಿಂದಿನಿಂದಲೂ ಇದ್ದಂತಹ ಧರ್ಮವೇನಾದರೂ ಇದ್ದಿದ್ದರೆ ಅದು ಜೈನ ಧರ್ಮ. ಬುದ್ಧನ ಸಮಕಾಲೀನ ಮಹಾವೀರ ಜೈನರ 24ನೇ ತೀರ್ಥಂಕರನೇ ಹೊರತು ಆತ ಜೈನಧರ್ಮದ ಸ್ಥಾಪಕನಲ್ಲ. ಭಾರತ ಉಪಖಂಡದಲ್ಲಿ ಆಳಿದಂತಹ ಅನೇಕಾನೇಕ ರಾಜಮಹಾರಾಜರುಗಳೆಲ್ಲ ಜೈನ ಹಾಗು ಬೌದ್ಧ ಧರ್ಮದಿಂದ ಪ್ರಭಾವಿತರಾಗಿ ಆ ಧರ್ಮವನ್ನು ಅನುಸರಿಸಿದ್ದರು. ಧರ್ಮಗಳ ಅನುಸರಣೆ ಜನರ ಐಚ್ಛಿಕ ವಿಷಯವಾಗಿದ್ದರಿಂದ ಮತಾಂತರ ಎಂಬುದು ಇನ್ನೂ ಭೂತದ ರೂಪವನ್ನು ಪಡೆದಿರದಿದ್ದ ಕಾಲವದು. ಸಾಮ್ರಾಟ ಅಶೋಕನ ಅಜ್ಜ ಚಂದ್ರಗುಪ್ತ ಮೌರ್ಯ ಜೈನ ಧರ್ಮವನ್ನು ಪಾಲಿಸಿ ಕೊನೆಗೆ ಆ ಧರ್ಮದ ತತ್ವದಂತೆ ಎಲ್ಲವನ್ನೂ ತ್ಯಜಿಸಿ ದೂರದ ಕರ್ನಾಟಕ (ಶ್ರವಣ ಬೆಳಗೊಳ)ಕ್ಕೆ ಬಂದು ವಿರಾಗಿಯಂತೆ ಬದುಕು ಕಳೆದರೆ ಮೊಮ್ಮಗ ಅಶೋಕ ಮಹಾನ್ ಬೌದ್ಧ ಧರ್ಮದ ಪ್ರತಿಪಾದಕನಾಗಿ ತನ್ನ ಮಕ್ಕಳನ್ನೇ ಶ್ರೀಲಂಕಾ ಮೊದಲಾದೆಡೆ ಧರ್ಮ ಪ್ರಚಾರಕ್ಕೆಂದು ಕಳುಹಿಸುತ್ತಾನೆ. ಬಳಿಕ ಆತನ ಮೊಮ್ಮಗ ಸಂಪ್ರತಿ ಜೈನ ಧರ್ಮಕ್ಕೆ ಮನಸೋತು ದೇಶದಲ್ಲಿ ಜೈನ ಮತವನ್ನು ಪಸರಿಸುವಲ್ಲಿ ಬಹುದೊಡ್ಡ ಕೊಡುಗೆಯನ್ನೇ ನೀಡಿದ್ದ. ಇವರ ರಾಜ್ಯಭಾರಕ್ಕೆ ತಕ್ಕಂತೆ ಪ್ರಜೆಗಳೂ ಕೂಡ ಬಹುತೇಕ ರಾಜನನ್ನೇ ಅನುಸರಿಸುತ್ತಿದ್ದರು.
ಭಾರತದಲ್ಲೇ ಹುಟ್ಟಿ ಭಾರತದ ನಾಡಿ ಮಿಡಿತದಿಂದಲೇ ಬೆಳೆದು ಬಂದ ಬೌದ್ಧ ಧರ್ಮ ಬಳಿಕ ಕೆಲ ರಾಜಕೀಯ ಕಾರಣಗಳಿಗಾಗಿ ದೇಶದಿಂದಲೇ ಕಣ್ಮರೆಯಾಗುತ್ತಾ ಬಂದದ್ದು ಇತಿಹಾಸ. ತೀವ್ರಗತಿಯ ಉಚ್ಛ್ರಾಯ ಸ್ಥಿತಿಯನ್ನು ತಲುಪಿ ರಾಜಾಶ್ರಯದಿಂದ ಮೆರೆದಿದ್ದ ಈ ಬೌದ್ಧಧರ್ಮದ ಉನ್ನತಿಗೆ ಬೆದರಿದ ವೈದಿಕ ಧರ್ಮ ತಾನು ಪ್ರತಿಪಾದಿಸುವ ಮೌಢ್ಯ ತುಂಬಿದ ಅಸ್ಪೃಶ್ಯತೆ ಪ್ರಾಣಿಬಲಿಯೇ ಮೊದಲಾದ ಜಿಗುಟು ಸಿದ್ಧಾಂತಗಳಿಗೆ ಪ್ರತಿಯಾಗಿ ಅಹಿಂಸೆ, ಸಮಾನತೆ, ಸೋದರತ್ವಗಳ ಹೆಸರಲ್ಲಿ ಜನಮನ್ನಣೆ ಗಳಿಸುತ್ತಿರುವ ಬೌದ್ಧ ಧರ್ಮದ ವಿರುದ್ಧ ನಿರಂತರವಾಗಿ ಕತ್ತಿಮಸೆಯ ತೊಡಗಿತು. ಚಾಲ್ತಿಯಲ್ಲಿದ್ದ ವೈದಿಕ ದೇವದೇವತೆಯ ಆರಾಧನೆಯನ್ನು ಎಲ್ಲೂ ಹೇಳದೆ ನಾಸ್ತಿಕವಾದದಂತೆ ತೋರುವ ಬೌದ್ಧಧರ್ಮ ನೇರವಾಗಿ ಅವರಿಗೆ ವಿರೋಧಿಯಂತೆ ಕಂಡುಬಂದರೆ ಇನ್ನೊಂದು ಬಗೆಯಲ್ಲಿ ಇಲ್ಲಿ ಅಸ್ತಿತ್ವದ ಪ್ರಶ್ನೆಯೂ ಸಹ ಅವರನ್ನು ಕಾಡಿತ್ತು. ಬೌದ್ಧ ಜೈನ ಧರ್ಮಗಳನ್ನು ಹೀಗೆಯೇ ಬೆಳೆಯಗೊಟ್ಟರೆ ಎಲ್ಲರನ್ನೂ ಒಳಗೊಳ್ಳದೆ ಮೊದಲೇ ಆ ಕಾಲದಲ್ಲಿ ಅಲ್ಪಸಂಖ್ಯಾತರಾಗಿದ್ದ ತಮ್ಮ ವೈದಿಕ ಧರ್ಮವು ಹೇಳ ಹೆಸರಿಲ್ಲದಂತಾಗುವ ಭಯ ಶಂಕರಾಚಾರ್ಯರಂತವರನ್ನು ಚಿಂತೆಗೀಡು ಮಾಡಿತ್ತು. ಈ ಕಾರಣಕ್ಕೇ ನಾಗಾರ್ಜುನಕೊಂಡದ ದಾಳಿ, ನಲಂದಾ ವಿಶ್ವವಿದ್ಯಾಲಯ, ಚೈತ್ಯಾಲಯಗಳ ನಾಶ, ಬೌದ್ಧರ ಮಾರಣಹೋಮಗಳೆಲ್ಲ ನಡೆದವು.
ಗೌತಮ ಬುದ್ಧ ಮತ್ತು ವಿಷ್ಣುವಿನ ದಶಾವತಾರ
ವೈದಿಕರು ಬುದ್ಧ ಹಾಗು ಬೌದ್ಧರನ್ನು ವಿರೋಧಿಸಿದ್ದೆಂಬುದು ಅಪ್ಪಟ ಸುಳ್ಳು. ಯಾಕೆಂದರೆ, ಸ್ವಯಂ ವಿಷ್ಣುವೇ ದಶಾವತಾರದ ಹೆಸರಲ್ಲಿ ಬುದ್ಧನಾಗಿ ಅವತರಿಸಿದ್ದಾನಲ್ಲ ಎನ್ನುವವರಿದ್ದಾರೆ. ಆದರೆ ಇದು ಕೇವಲ ಅರ್ಧ ಸತ್ಯದ ಮಾತೇ ವಿನಃ ಪೂರ್ಣ ನಿಜವಲ್ಲ. ಯಾಕೆಂದರೆ, ಈ ಐತಿಹಾಸಿಕ ಬುದ್ಧನಿಗೂ ಪೌರಾಣಿಕ ಬುದ್ಧನಿಗೂ ಯಾವುದೇ ಸಂಬಂಧವಿಲ್ಲ. ಐತಿಹಾಸಿಕ ಬುದ್ಧನ ಹೆಸರು ಗೌತಮ ಬುದ್ಧನಾದರೆ ಪೌರಾಣಿಕ ಬುದ್ಧನದ್ದು ಸುಗತ ಬುದ್ಧ. ಮಾಯಾದೇವಿ ಎಂಬ ಕ್ಷತ್ರಿಯ ರಾಣಿ ಗೌತಮ ಬುದ್ಧನ ತಾಯಿಯಾದರೆ ಪೌರಾಣಿಕ ಪಾತ್ರ ಸುಗತ ಬುದ್ಧನ ತಾಯಿ ಅಂಜನಾ ಎಂಬ ಬ್ರಾಹ್ಮಣ ಸ್ತ್ರೀ. ಈಗಿನ ನೇಪಾಲದ ಲುಂಬಿನಿಯಲ್ಲಿ ಗೌತಮ ಬುದ್ಧ ಜನಿಸಿದರೆ ಭವಿಷ್ಯ ಪುರಾಣವು ಸುಗತ ಬುದ್ಧನನ್ನು ಕೀಕಟೇಷು ಭವಿಷ್ಯತಿ.. ಎಂದು ಆತನ ಜನ್ಮ ಸ್ಥಳ ಕೀಕಟ್ ಎನ್ನುತ್ತದೆ. ಗೌತಮ ಬುದ್ಧ ಜ್ಞಾನೋದಯ ಪಡೆದ ಬೋಧಗಯಾವೇ ಈ ಕೀಕಟ್ ಎನ್ನುವರೂ ಇದ್ದಾರೆ.
ಇವತ್ತು ಸಾಹಿತ್ಯ, ಕಥೆ, ಸಿನಿಮಾ, ನಾಟಕ, ಚಿತ್ರ, ಶಿಲ್ಪಗಳಲ್ಲಿ ಧ್ಯಾನಾಸಕ್ತನಾದ ಗೌತಮ ಬುದ್ಧನನ್ನೇ ವಿಷ್ಣುವಿನ ಅವತಾರವೆಂದು ನೇರವಾಗಿ ಬಿಂಬಿಸಲಾಗುತ್ತಿದೆ. ತನ್ನ ಜನಪರ ತತ್ವ ಸಿದ್ಧಾಂತಗಳ ಮೂಲಕ ವೈದಿಕ ಧರ್ಮಕ್ಕೆ ಬಲವಾದ ಹೊಡೆತವನ್ನು ನೀಡಿದ ಗೌತಮ ಬುದ್ಧ ನಿಜಕ್ಕೂ ವಿಷ್ಣುವಿನ ಅವತಾರವೇ ?
ಪೌರಾಣಿಕ ಕಥೆ, ಸ್ಥಳ ಪುರಾಣ ಹೆಣೆಯುವುದರಲ್ಲಿ ಈ ವೈದಿಕರು ಯಾವತ್ತೂ ನಿಸ್ಸೀಮರು. ಒಂದು ಘಟನೆ ಉದಾ: ಗಣಪತಿಯ ಜನನ, ಹನುಮಂತನ ಜನನ ಇತ್ಯಾದಿಗಳು ಹದಿನೆಂಟು ಪುರಾಣ, ರಾಮಾಯಣ ಅಥವಾ ಮಹಾಭಾರತದಂತಹ ಪೌರಾಣಿಕ ಕೃತಿಗಳಲ್ಲಿ ತೀರಾ ವಿಭಿನ್ನ ಬಗೆಗಳಲ್ಲಿ ಉಲ್ಲೇಖಗೊಂಡಿರುತ್ತವೆ. ಕೆಲವು ಕತೆಯಲ್ಲಿ ಆತ ಹುಟ್ಟುವಾಗಲೇ ಆನೆ ತಲೆಯೊಂದಿಗೇ ಹುಟ್ಟಿದ್ದರೆ ಮತ್ತೊಂದರಲ್ಲಿ ತಂದೆ ಶಿವನಿಂದಲೇ ಶಿರಚ್ಛೇದನ, ಇನ್ನೊಂದರಲ್ಲಿ ಶನಿದೇವನ ವಕ್ರ ದೃಷ್ಟಿಯಿಂದ ಇತ್ಯಾದಿ ಇತ್ಯಾದಿ. ಇಲ್ಲಿ ಚಿತ್ರಣಗಳು ತೀರಾ ಭಿನ್ನವಿದ್ದರೂ ಎಲ್ಲಾ ಕಥೆಗಳೂ ಕೂಡ ನಾಟುವಂತೆ ಚಿತ್ರಿಸಲ್ಪಟ್ಟಿರುತ್ತವೆ. (ತುಂಬಾ ಹಿಂದೆ ಕಸ್ತೂರಿ ಮಾಸಪತ್ರಿಕೆಯಲ್ಲಿ ವಿದ್ವಾಂಸರಾದ ಗೌರೀಶ ಕಾಯ್ಕಿಣಿಯವರ “ಗಣಪತಿ ಗಜಮುಖನಾಗಿಯೇ ಹುಟ್ಟಿದನೇ..” ಎಂಬ ಲೇಖನ ಓದಿದ ನೆನಪು. ಅದರಲ್ಲಿ ಒಂದೇ ಸಂಗತಿ ಹೇಳುವ ಹಲವು ಬಗೆಯ ಕಥೆಗಳ ಉಲ್ಲೇಖವಿದೆ. ವಿಷ್ಣು ಪುರಾಣದ ಕಥೆಯೇ ಬೇರೆಯಾದರೆ ಗರುಡ ಪುರಾಣದ್ದು ಮತ್ತೊಂದು. ಭವಿಷ್ಯ ಪುರಾಣದ್ದು ಇನ್ನೊಂದು. ಮಹಾಭಾರತದಲ್ಲಿ ನಾರದರು ಧರ್ಮರಾಯನಿಗೆ ಹೇಳಿದ್ದು ಇನ್ನೊಂದು ಹೀಗೆ… ಇಂತವರಿಗೆ ಬುದ್ಧನ ಹೊಸಕಥೆ ಹೆಣೆಯುವುದು ಯಾವ ಲೆಕ್ಕ ?.
ಮೂಲತಃ ವಿಷ್ಣು ತಾಳಿದ ಅವತಾರ ಸುಗತ ಬುದ್ಧನದ್ದೇ ಹೊರತು ಗೌತಮನದ್ದಲ್ಲ. ತ್ರಿಪುರಾಸುರನನ್ನು ಕೊಲ್ಲಲು ಹರಿ ಶಿವನಿಗೆ ಸಹಾಯ ಮಾಡುವ ಕಥೆಯಿದು. ಬ್ರಹ್ಮಾಂಡ ಪುರಾಣ, ಭಾಗವತಗಳಲ್ಲಿರುವ ಈ ಕಥೆಯಂತೆ ಲೋಕ ಕಂಟಕ ತ್ರಿಪುರಾಸುರನನ್ನು ಕೊಲ್ಲಲು ಯಾರಿಂದಲೂ ಆಗದು. ಕಾರಣ ಆತನ ಪತ್ನಿಯರ ಪತಿವ್ರತಾ ಧರ್ಮ. ಈ ಕಾರಣಕ್ಕೆ ವಿಷ್ಣುವು ತ್ರಿಪುರನ ಪತ್ನಿಯರೆದುರು ಬೆತ್ತಲೆಯಾಗಿ ನಿಂತು ಅವರ ಮನಸ್ಸನ್ನು ಚಂಚಲಗೊಳಿಸಿ ಅವರ ವ್ರತಭಂಗ ಗೊಳಿಸುತ್ತಾನೆ ಇದೇ ಸಮಯಕ್ಕೆ ಕಾದು ಶಿವನು ತ್ರಿಪುರನ ಸಂಹಾರ ಗೈಯ್ಯುತ್ತಾನೆ. ತುಳಸಿ ಜಲಂದರರ ಕಥೆಯನ್ನೇ ಸ್ವಲ್ಪ ಹೋಲುವ ಈ ಕಥೆ ನಮ್ಮ ದಾಸ ಸಾಹಿತ್ಯದಲ್ಲಿ ಬೇಕಷ್ಟು ಬಾರಿ ಉಲ್ಲೇಖ ಗೊಂಡಿದೆ. ದಾಸರ ರಚನೆಯ ವಿಷ್ಣುವಿನ ದಶಾವತಾರವನ್ನು ಸ್ತುತಿಸುವ ಮಂಗಳ ಹಾಡುಗಳಲ್ಲಿ “ಬೆತ್ತಲೆ ನಿಂತಿಹ ಬೌದ್ಧನಿಗೆ ಉತ್ತಮ ಹಯವೇರಿದ ಕಲ್ಕಿಗೆ…” ಅಥವಾ ’ಸಾಧಿಸಿ (ಹೊಂಚಿ) ತ್ರಿಪುರನ ಗೆಲಿದವಗೆ..” ’ನಾರಿಯರ ವ್ರತವಳಿದವಗೆ.. ಮಂಗಲಂ ಜಯ ಮಂಗಲಂ.” ಎಂಬ ಸಾಲುಗಳು ಸುಗತ ಬುದ್ಧನ ಕತೆ ಹೇಳುತ್ತವೆಯೇ ಹೊರತು ಯಾವತ್ತೂ ಬೆತ್ತಲೆ ನಿಂತಿರದ ಗೌತಮ ಬುದ್ಧನದ್ದಲ್ಲ.
ಈ ಬೆತ್ತಲೆ ಕಥೆ ಹೇಳಲು ಮತ್ತು ಕೇಳಲು ಅಸಭ್ಯ ಎಂಬಂತಿರುವ (ವೈದಿಕ ಪುರಾಣದಲ್ಲಿ ಬರುವ ಶೃಂಗಾರ ಕಥೆಗಳನ್ನೆಲ್ಲ ನೋಡಿದವರಿಗಿದು ಅಂತಾ ಅಸಭ್ಯವೆಂದೇನೂ ಅನಿಸದು. ತುಳಸಿ ಜಲಂದರ ಕಥೆಯಲ್ಲಿ ಪರಪತ್ನಿ ತುಳಸಿಯೊಂದಿಗೆ ವಿಷ್ಣು ಸೇರುತ್ತಾನೆ. ಮೇಲೆ ಆಕಾಶದಲ್ಲಿ ಸಂಚರಿಸುವಾಗ ಯಾವುದೋ ಮುಖ್ಯ ದೇವನೊಬ್ಬ ಯಾರದೋ ಜಲಕ್ರೀಡೆ ನೋಡಿ ಸ್ಖಲನಗೊಂಡು ಆ ವೀರ್ಯದಿಂದ ಮಗು ಹುಟ್ಟುವುದು, ವಿಷ್ಣುವಿನ ಹೆಣ್ಣು ವೇಷದ ಮೋಹಿನಿಗೆ ಮರುಳಾಗಿ ಶಿವನಿಂದ ಹುಟ್ಟುವ ಅಯ್ಯಪ್ಪನ ಕಥೆ ಇಂತವೆಲ್ಲ ಪುರಾಣಗಳಲ್ಲಿ ಸಾಕಷ್ಟಿವೆ) ಕಾರಣಕ್ಕೆ ಕಾಲ ಕ್ರಮೇಣ ದಶವತಾರದ ಕಥೆಯಲ್ಲಿನ ಬೆತ್ತಲೆ ಸುಗತನನ್ನು ಕೈಬಿಡುತ್ತಾ ಬರಲಾಯಿತು. ಹಾಗೇ ಈ ಸುಗತನ ಸ್ಥಾನವನ್ನು ಗೌತಮ ಬುದ್ಧನಿಗೆ ನೀಡಲಾಯಿತು.
ಆದರೆ ವೇದ ವಿರೋಧಿ ಗೌತಮ ಬುದ್ಧನನ್ನು ಇನ್ನೂ ದ್ವೇಷಿಸುವವರು ಈ ಬದಲಾವಣೆಗೂ ಒಪ್ಪದೇ ಗೌತಮನ ಬದಲು ಬಲರಾಮ (ಬಲದೇವ) ವಿಠೋಬ, ಜಗನ್ನಾಥರನ್ನ ಬದಲಿ ಪಾತ್ರವಾಗಿ ದಶಾವತಾರದ ಹತ್ತರ ಲೆಕ್ಕ ಭರ್ತಿಗಾಗಿ ತಂದುಕೊಂಡರು. ಕೆಲ ವರ್ಷಗಳ ಹಿಂದೆ ಉಡುಪಿಯ ಬನ್ನಂಜೆಯಲ್ಲಿ ದಲಿತರು ಬೌದ್ಧದೀಕ್ಷೆ ಕಾರ್ಯಕ್ರಮ ನಡೆಸಿದಾಗ ಕಂಗಾಲಾದ ಉಡುಪಿಯ ಪೇಜಾವರ ಶ್ರೀಗಳು ಈ ಬೌದ್ಧ ಬೇಡ ನಾನು ನಿಮಗೆಲ್ಲ ವೈಷ್ಣವ ದೀಕ್ಷೆ ಕೊಡುತ್ತೇನೆ ಎಂದು ಕಾರ್ಯಕ್ರಮಕ್ಕೆ ಸಾಧ್ಯವಿದ್ದಷ್ಟು ತಡೆಯೊಡ್ಡಲು ನೋಡಿದ್ದರು. ಬುದ್ಧ ನಿಜಕ್ಕೂ ವಿಷ್ಣುವೇ ಆಗಿದ್ದರೆ ಪೇಜಾವರರ ವೈಷ್ಣವ ದೀಕ್ಷಾ ಗಾಳಕ್ಕೆ ಅರ್ಥವೇ ಇಲ್ಲ. ಯಾಕೆಂದರೆ, ಬುದ್ಧನೇ ವಿಷ್ಣು ಎಂದಾದ ಮೇಲೆ ಬೌದ್ಧ ದೀಕ್ಷೆಯೂ ವೈಷ್ಣವ ದೀಕ್ಷೆಯೇ ಆಗಬೇಕು ತಾನೆ? ಆದರೆ ಅವರಿಗೆ ಗೊತ್ತು ಗೌತಮ ಬೌದ್ಧ ವಿಷ್ಣು ಅಲ್ಲವೆಂದು. (ಪ್ರಸಿದ್ಧ ಆಧ್ಯಾತ್ಮಿಕ ವಿದ್ವಾಂಸ ಡಾ. ಪಾವಗಡ ಪ್ರಕಾಶ್ ರಾವ್ ರವರು ಚಂದನ ವಾಹಿನಿಯಲ್ಲಿ ನಡೆಸಿಕೊಡುತ್ತಿದ್ದ ಸತ್ಯದರ್ಶನ ಎಂಬ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ನೇರವಾಗಿ ಬಹಳಷ್ಟು ಬಾರಿ ಗೌತಮ ಬುದ್ಧ ವಿಷ್ಣುವಿನ ಅವತಾರವಲ್ಲ, ಅದು ಬೇರೆಯೇ ಎಂಬ ಸ್ಪಷ್ಟನೆಯನ್ನು ಕೊಟ್ಟಿದ್ದರು).
ತಮಾಷೆಯೆಂದರೆ ಕೆಲ ವೈದಿಕ ಕಥಾ ಪ್ರವೀಣರು ಗೌತಮ ಬುದ್ಧನನ್ನು ಹೇಗಿದ್ದಾನೋ ಹಾಗೆಯೇ ತೆಗೆದುಕೊಂಡು (ಅಂದರೆ ನಾಸ್ತಿಕವಾದದ ವೈದಿಕ ವಿರೋಧಿ ಬುದ್ಧನಾಗಿಯೇ) ಹೊಸ ಕಥೆಯನ್ನು ಬರೆದರು. ಅದು ವೇದಗಳ ಮಹಿಮೆಯನ್ನು ಪರೋಕ್ಷವಾಗಿ ಸಾರುವಂತೆಯೂ ಕೂಡ ಇತ್ತು. ಅದೆಂದರೆ, ಒಂದು ಸಮಯದಲ್ಲಿ ಸುರಾಸುರರಿಗೆ ಯುದ್ಧ ನಡೆದು ದೇವತೆಗಳೆಲ್ಲ ಸೋತರಂತೆ. ಸೋತ ದೇವತೆಗಳು ಮಾಮೂಲಿನಂತೆ ವಿಷ್ಣುವಿನ ಬಳಿಗೆ ಹೋದಾಗ ಆತ ಈ ರಾಕ್ಷಸರು ವೇದ ಶಾಸ್ತ್ರಗಳನ್ನು ಕಲಿತ ಕಾರಣಕ್ಕೆ ಶಕ್ತಿವಂತರಾಗಿ ಅಜೇಯರಾಗಿದ್ದಾರೆ ಹಾಗಾಗಿ ಈ ವೇದ ಶಾಸ್ತ್ರಗಳಿಂದ ಅವರನ್ನು ವಿಮುಖ ಮಾಡಿದರೆ ಮಾತ್ರ ಅವರನ್ನು ಸುಲಭದಲ್ಲಿ ಗೆಲ್ಲಬಹುದೆಂದು ಗೌತಮ ಬುದ್ಧನಾಗಿ ಜನಿಸಿ ಎಲ್ಲೆಡೆ ನಾಸ್ತಿಕವಾದವನ್ನೇ ಬೋಧಿಸುತ್ತಾ ಅಸುರರನ್ನು ವೇದಶಾಸ್ತ್ರಗಳಿಂದ ವಿಮುಖರನ್ನಾಗಿಸಿ ದೇವತೆಗಳಿಗೆ ಮರಳಿ ದೇವಲೋಕವನ್ನು ಪಡೆಯವಂತೆ ಮಾಡುತ್ತಾನೆ ಎನ್ನುವುದು ಈ ಕಥೆ. ಎಲ್ಲಿಯೂ ಹೇಳುವಂತ ತಿದ್ದುಪಡಿಯನ್ನು ಮಾಡದೇ ಕಥೆಯನ್ನು ತಮ್ಮತ್ತಲೇ ತಿರುಗಿಸಿಕೊಂಡಂತ ಚಾಣಾಕ್ಷತನವನ್ನು ಇಲ್ಲಿ ಗಮನಿಸಬೇಕು.
ಹೌದು, ಅದು ಅವರಿಗೆ ಅನಿವಾರ್ಯವಾಗಿತ್ತೂ ಕೂಡ. ಅಂದರೆ ಬುದ್ಧನನ್ನು ಬುದ್ಧನಂತೆಯೇ ಚಿತ್ರಿಸಲೇ ಬೇಕಿತ್ತು. ಯಾಕೆಂದರೆ ಬುದ್ಧ ಭಾರತದ ಜನಮಾನಸದಲ್ಲಿ ಆಳವಾಗಿ ಬೇರೂರಿದ್ದ. ಒಂದೋ ಸುಗತನದ್ದೇ ಬೇರೆಯದೇ ಕತೆ ಹೇಳಬೇಕು. ಇಲ್ಲವಾದಲ್ಲಿ ಬುದ್ಧನನ್ನು ಬಹುತೇಕ ಬುದ್ಧನಂತೆಯೇ ಇಟ್ಟು ಚಿತ್ರಿಸಬೇಕೇ ಹೊರತು ಬುದ್ಧನ ಕಿತ್ತುಹಾಕುವಿಕೆ ಇಲ್ಲಿ ಅಸಾಧ್ಯವಿತ್ತು.
ಉದಾಹರಣೆಗೆ, ಒಂದು ವರ್ಗಕ್ಕೆ ಮಹಾತ್ಮ ಗಾಂಧಿ ಎಷ್ಟೇ ಅಪಥ್ಯವಿದ್ದರೂ ಎಷ್ಟೇ ಅಧಿಕಾರ ಬಲವಿದ್ದು ಯತ್ನಿಸಿದರೂ ಗಾಂಧಿಯನ್ನು ಅವರಿಂದ ಕಿತ್ತೊಗೆಯಲು ಸಾಧ್ಯವಾಗಿಲ್ಲ. ಅಂಬೇಡ್ಕರ್ ಬಗ್ಗೆ ಅಸಹನೆ ಇದ್ದರೂ ಅವರಿಲ್ಲದ ಚರಿತ್ರೆ ಅಸಾಧ್ಯ ತಾನೇ. ಹಾಗಾಗಿ ಗಾಂಧಿ ಅಂಬೇಡ್ಕರರನ್ನು ಉಳಿಸಿಕೊಂಡೇ ಅವರ ಕುರಿತಾಗಿ ಸುಳ್ಳೂ ಪಳ್ಳೂ ಅವರು ಮುಸ್ಲಿಮ್ ವಿರೋಧಿಯಾಗಿದ್ದರು, ಹಿಂದೂ ಧರ್ಮದ ಬಗ್ಗೆ ಅಪಾರ ಗೌರವವಿತ್ತು ಎಂಬಿತ್ಯಾದಿಯಾಗಿ ಕಥೆ ಹರಿಬಿಡುವಂತೆ ಅಥವಾ ಅಪಪ್ರಚಾರ ಸಾಧ್ಯವೇ ಹೊರತು ಅವರನ್ನು ಇಲ್ಲವಾಗಿಸಲಾಗದು. ಕರಾವಳಿಗೆ ಬಂದು ದಾಂಧಲೆಗೆ ಶುರುವಿಟ್ಟ ಅಹಿಚ್ಚತ್ರದವರನ್ನು ಓಡಿಸಿದ ಸಮುದಾಯದ ಕೊರಗಜ್ಜನನ್ನೇ ವೈದಿಕರ ದೇವರಾದ ಪರಶಿವನ ಅವತಾರವೆಂದು ಮಾನ್ಯ ಮಾಡಿಲ್ಲವೇ? ವೈದಿಕ ಪುರಾಣಗಳಿಗೆ ಸಂಬಂಧವೇ ಇರದ ಕರಾವಳಿಯ ಭೂತಗಳನ್ನು ಶಿವನಗಣಗಳು ಎಂದು ನಂಬಿಸಲಾಗಿಲ್ಲವೇ? ಸಾಧ್ಯವಿದ್ದರೆ ಓಡಿಸಿ ನಾಶಗೊಳಿಸುವುದು ಇಲ್ಲವಿದ್ದಲ್ಲಿ ತಮ್ಮವನೇ ಎಂದು ಕಥೆ ಕಟ್ಟುವುದು. ಶಕ್ತಿ ಶಾಲಿ ರಾಜನೊಂದಿಗೆ ಯುದ್ಧಕ್ಕಿಂತ ನೆಂಟಸ್ತಿಕೆ ಬೆಳೆಸಿ ರಾಜಿಯಾಗುವಂತಹ ಪ್ರಕ್ರಿಯೆ ಇದು. ವೈದಿಕರ ಭವಿಷ್ಯ ಪುರಾಣದಲ್ಲಿ ಯೇಸುವಿನ ಸಂಗತಿಯ ಪ್ರಸ್ತಾಪವಿದೆ. ಬ್ರಿಟಿಷರು ಇನ್ನೂ ನೂರು ವರ್ಷ ಭಾರತದ ದೊರೆತನದಲ್ಲೇ ಇದ್ದಿದ್ದರೆ ಪುರಾಣ ಸಂಹಿತೆಗಳಲ್ಲಿ ’ಯೇಸು ಪುರಾಣ”ವೂ ಸೇರಿಕೊಂಡರೆ ಅಚ್ಚರಿ ಖಂಡಿತ ಇರುತ್ತಿರಲಿಲ್ಲ- ನಮ್ಮ ಗೌತಮನಂತೆ.
ಶಂಕರ್ ಸೂರ್ನಳ್ಳಿ
ಸಾಮಾಜಿಕ ಹೋರಾಟಗಾರರು