ಬೆಂಗಳೂರು: ಮಾಜಿ ಉಪಮುಖ್ಯಮಂತ್ರಿ ಮತ್ತು ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ನಿನ್ನೆ ಪಕ್ಷದ ವರಿಷ್ಠರನ್ನು ಭೇಟಿಯಾಗಲು ದಿಲ್ಲಿಗೆ ಹೋಗಿ, ಬರಿಗೈಲಿ ಹಿಂದಿರುಗಿದ್ದಾರೆ.
ಮೂಲಗಳ ಪ್ರಕಾರ ಈಶ್ವರಪ್ಪ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲು ಬಯಸಿದ್ದರು. ಆದರೆ ಪಕ್ಷದ ಹೈಕಮಾಂಡ್ ಇತರೆ ನಾಯಕರೊಂದಿಗೆ ಮಾತನಾಡಿ, ಅಮಿತ್ ಶಾ ಜೊತೆ ಮಾತುಕತೆಗೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದೆ. ಹೀಗಾಗಿ ಮಾತುಕತೆಯೇ ನಡೆಯದೇ ಈಶ್ವರಪ್ಪ ಹಿಂದಿರುಗಿದ್ದಾರೆ.
ಇನ್ನು ಯಾವುದೇ ಮಾತುಕತೆಯ ಪ್ರಶ್ನೆಯೇ ಇಲ್ಲ, ನಾನು ಶಿವಮೊಗ್ಗದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ ಎಂದು ಈಶ್ವರಪ್ಪ ಹೇಳಿದ್ದಾರೆ. ನಾನು ಸ್ಪರ್ಧೆಯಿಂದ ಹಿಂದೆ ಹಿಂದೆ ಸರಿಯಬೇಕು ಎಂಬುದಾದರೆ, ಮೊದಲು ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯ ಘಟಕ ಸ್ಥಾನದಿಂದ ಕೆಳಗೆ ಇಳಿಯಬೇಕು ಎಂದು ಅವರು ಷರತ್ತು ವಿಧಿಸಿದ್ದಾರೆ.
ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿ ಅಭ್ಯರ್ಥಿ, ಯಡಿಯೂರಪ್ಪ ಅವರ ಇನ್ನೋರ್ವ ಪುತ್ರ ಬಿ.ವೈ.ರಾಘವೇಂದ್ರ ಅವರ ಗೆಲುವಿಗೆ ಅಡ್ಡಿಯಾಗಲಿದೆಯೇ ಎಂದು ಬಿಜೆಪಿ ಹೈಕಮಾಂಡ್ ನೇರವಾಗಿ ಯಡಿಯೂರಪ್ಪ ಅವರನ್ನೇ ಪ್ರಶ್ನಿಸಿದಾಗ, ಈಶ್ವರಪ್ಪ ಸ್ಪರ್ಧಿಸಿದರೂ ಗೆಲುವು ಸಾಧಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪಕ್ಷ ಈಗ ಈಶ್ವರಪ್ಪ ಅವರ ಬೇಡಿಕೆಗಳಿಗೆ ಸೊಪ್ಪು ಹಾಕುತ್ತಿಲ್ಲ. ನಿನ್ನೆ ಅಮಿತ್ ಶಾ ಜೊತೆ ಭೇಟಿ ತಪ್ಪಿಸಿದ್ದೂ ಸಹ ಸ್ವತಃ ಯಡಿಯೂರಪ್ಪನವರೇ ಎಂದು ತಿಳಿದು ಬಂದಿದೆ.
ತಮ್ಮ ಪುತ್ರ ಕಾಂತೇಶ್ ಅವರಿಗೆ ಹಾವೇರಿಯಿಂದ ಸ್ಪರ್ಧಿಸಲು ಅವಕಾಶ ನೀಡದ ಕುರಿತು ಮುನಿಸಿಕೊಂಡ ಕೆ.ಎಸ್.ಈಶ್ವರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿ ಈಗಾಗಲೇ ಕ್ಷೇತ್ರದಲ್ಲಿ ಬೆಂಬಲಿಗರ ಸಭೆಗಳನ್ನು ನಡೆಸುತ್ತಿದ್ದಾರೆ. ಪಕ್ಷ ಈಗ ಒಂದು ಕುಟುಂಬದ ಆಸ್ತಿಯಾಗಿ ಹೋಗಿದೆ, ಹಿಂದೂ ಕಾರ್ಯಕರ್ತರ, ಬಿಜೆಪಿ ಕಾರ್ಯಕರ್ತರ ಭಾವನೆಗಳಿಗೆ ಬೆಲೆಯೇ ಇಲ್ಲದಂತಾಗಿದೆ ಎಂದು ಈಶ್ವರಪ್ಪ ಮೇಲಿಂದ ಮೇಲೆ ಆರೋಪಿಸುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಯಾವಾಗಲೂ ಕಾಂಗ್ರೆಸ್ ನಲ್ಲಿ ಕುಟುಂಬ ರಾಜಕಾರಣ ನಡೆಯುತ್ತದೆ ಎಂದು ಹೇಳುತ್ತಾರೆ. ಅದೇ ರೀತಿ ಕರ್ನಾಟಕ ಬಿಜೆಪಿಯನ್ನು ಕೂಡ ಒಂದು ಕುಟುಂಬ ನಡೆಸುತ್ತಿದೆ. ಈ ಕುಟುಂಬದ ಬಿಗಿ ಹಿಡಿತದಿಂದ ಪಕ್ಷವನ್ನು ಪಾರು ಮಾಡಬೇಕಾಗಿದೆ. ನಾನು ಪಕ್ಷದ ಕಾರ್ಯಕರ್ತರ ನೋವು ತಣಿಸಲೆಂದು ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.