ವಜ್ರಮುನಿ ದೈಹಿಕವಾಗಿ ಇಲ್ಲದೆ ಇದ್ದರು, ಅವರ ನಟನೆ ನಮ್ಮ ಕಣ್ಣ ಮುಂದೆ ಇದೆ. ಒಮ್ಮೆ ಧ್ವನಿ ಏರಿಸಿದರೆ ಎಂಥವರಿಗೂ ಭಯವಾಗುವಂತಹ ಅಪ್ರತಿಮ ನಟ. ಅದರಲ್ಲೂ ಹೆಣ್ಣು ಮಕ್ಕಳನ್ನು ಮಾನಭಂಗ ಮಾಡುವ ಪಾತ್ರದಲ್ಲಿಯೇ ಹೆಚ್ಚಾಗಿ ಕಾಣಿಸಿಕೊಂಡರು. ವಜ್ರಮುನಿ ಅವರ ಸಿನಿಮಾಗಳನ್ನು ನೋಡಿದಾಗ ಕಣ್ಣು ಹೆಚ್ಚಾಗಿ ಕೆಂಪಾಗಿರುತ್ತಿತ್ತು. ಅದಕ್ಕೆಲ್ಲಾ ಕಾರಣ ಏನು..? ಎಂಬುದನ್ನು ವಜ್ರಮುನಿ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
‘ಜನಗಳಿಗೆ ನನ್ನ ಪಾತ್ರ ಕ್ರೂರ ಅಂತ ತೋರಿಸಬೇಕಾದರೆ ಕಣ್ಣುಗಳು ಕೆಂಪಗೆ, ಕೆಂಡದುಂಡೆಗಳಂತಿರಬೇಕು ಅಂತ ಬಯಸುತ್ತಿದ್ದೆ ನಾನು. ಅದಕ್ಕಾಗಿಯೇ ಸಿಗರೇಟಿನ ಹೊಗೆಯನ್ನು ಕಣ್ಣಿನ ಒಳಗೆ ಬಿಟ್ಟುಕೊಳ್ಳುತ್ತಿದ್ದೆ. ಅದಕ್ಕೆ ಕಣ್ಣು ಈಗ ಮಂಜಾಗುತ್ತಿವೆ. ಹೆಣ್ಣು ಮಕ್ಕಳು ನನ್ನನ್ನು ಕಂಡರೆ ಹೆದರಿಕೊಳ್ಳುತ್ತಿದ್ದರು. ಅವರೆಲ್ಲರಿಗೂ ಅವರ ಮನಸ್ಸಿನಲ್ಲಿ ಅಚ್ಚೊತ್ತಿದ್ದ ಅಂಶವೆಂದರೆ ಸಿನಿಮಾಗಳಲ್ಲಿ ನಾನು ನಿರ್ವಹಿಸುತ್ತಿದ್ದ ಮಾನಭಂಗದ ಸನ್ನಿವೇಶಗಳು. ಹಾಗಂತ ನನ್ನ ದೃಷ್ಟಿಯಲ್ಲಿ ನಾನು ಅಂದುಕೊಂಡಿದ್ದೀನಿ’ ಎಂದು ಹೇಳಿದ್ದಾರೆ.
ಇನ್ನು ವಜ್ರಮುನಿ ಅವರು ಅನಾರೋಗ್ಯದ ಕಾರಣಕ್ಕೆ ನಿಧನರಾದರು. ಅನಾರೋಗ್ಯದ ವಿಚಾರವಾಗಿಯೂ ಮಾತನಾಡಿದ್ದಾರೆ. ‘ತೆರೆಯ ಮೇಲೆ ಪಾತ್ರ ಚೆನ್ನಾಗಿ ಕಾಣಲು ಸಾಕಷ್ಟು ಶ್ರಮ ಹಾಕುತ್ತಿದ್ದೆವು. ನಾನೊಬ್ಬನೆ ಅಲ್ಲ ವಿಲನ್ ಇಮೇಜಿನಿಂದ ಗುರುತಿಸಿಕೊಂಡಿದ್ದ ತೂಗುದೀಪ ಶ್ರೀನಿವಾಸ, ಸುಂದರ್ ಕೃಷ್ಣ ಅರಸು ಮುಂತಾದವರು ಕೂಡ ಜೀವನದ ಮಧ್ಯದಲ್ಲಿಯೇ ಆರೋಗ್ಯ ಕೆಡಿಸಿಕೊಂಡು ವ್ಯಥೆಪಟ್ಟಿದ್ದಾರೆ.
ನಮ್ಮ ಆರೋಗ್ಯ ಕೆಡುತ್ತಿದ್ದಾದರೂ ಹೇಗೆ ಅನ್ನುತ್ತೀರಿ..? ಹಾಗೆಲ್ಲ ರಾತ್ರಿಯಿಡೀ ಶೂಟಿಂಗ್ ನಡೆಯುತ್ತಿತ್ತು. ನಿದ್ದೆಗೆಡುವುದಕ್ಕಾಗಿ ಕಾಫಿಯನ್ನೋ, ಟೀಯನ್ನೋ ಕುಡಿಯುತ್ತಿದ್ದೆವು. ಜೊತೆಗೆ ಒಂದಾದ ಮೇಲೆ ಒಂದರಂತೆ ಸಿಗರೇಟು ಸೇದುತ್ತಿದ್ದೆವು. ಇದು ಒಂದು ದಿನದ ಮಾತಲ್ಲ, ಅವಕಾಶಗಳು ಮುಗಿಯುವವರೆಗೂ ಇತ್ತು. ಇವೆರಡೆ ಕಾರಣಗಳು ಅಂತಲ್ಲ. ವಾತಾವರಣ ಬದಲಾಗುತ್ತಿತ್ತು, ಟೆನ್ಶನ್ ಗಳು ಹುಟ್ಟಿಕೊಳ್ಳುತ್ತಿದ್ದವು. ನಾವು ಮದ್ರಾಸ್ ನಲ್ಲಿ ವಾಸವಿದ್ದೆವು. ನಮ್ಮ ಕುಟುಂಬದ ಪರಿಸ್ಥಿತಿ ಏನಾಗುತ್ತಿದೆಯೋ ಎಂಬ ಯೋಚನೆ. ಸರಿಯಾದ ಊಟ-ತಿಂಡಿ ಇಲ್ಲದೆ ಇರುವುದು, ಪ್ರಯಾಣಗಳು ಹೀಗೆ ತಮ್ಮ ಆ ದಿನದ ಕಷ್ಟಗಳನ್ನೆಲ್ಲಾ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.