ಹೊಸದಿಲ್ಲಿ: ಹಾಸನದ NDA ಅಭ್ಯರ್ಥಿ, ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಕಾಮಕಾಂಡದ ಕುರಿತು ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಕರ್ನಾಟಕದಲ್ಲಿ ಮಹಿಳೆಯರ ಮೇಲೆ ನಡೆದ ಘೋರ ಅಪರಾಧಗಳ ಬಗ್ಗೆ ನರೇಂದ್ರ ಮೋದಿ ಯಾಕೆ ನಾಚಿಕೆಗೇಡಿನ ಮೌನಕ್ಕೆ ಶರಣಾಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು, ಪ್ರಧಾನಿ ಉತ್ತರಿಸಬೇಕು, ಎಲ್ಲ ಗೊತ್ತಿದ್ದರೂ ಕೇವಲ ಮತಕ್ಕಾಗಿ ನೂರಾರು ಹೆಣ್ಣು ಮಕ್ಕಳನ್ನು ಶೋಷಿಸುವ ಪಿಶಾಚಿ ಪರವಾಗಿ ಪ್ರಚಾರ ಮಾಡಿದ್ದು ಯಾಕೆ? ಎಂದು ಪ್ರಶ್ನಿಸಿದ್ದರು.
ಅಷ್ಟಕ್ಕೂ, ಇಷ್ಟು ದೊಡ್ಡ ಕ್ರಿಮಿನಲ್ ದೇಶದಿಂದ ಹೇಗೆ ಸುಲಭವಾಗಿ ತಪ್ಪಿಸಿಕೊಂಡರು? ಕೈಸರ್‌ಗಂಜ್‌ನಿಂದ ಕರ್ನಾಟಕದವರೆಗೆ ಮತ್ತು ಉನ್ನಾವೊದಿಂದ ಉತ್ತರಾಖಂಡದವರೆಗೆ ಹೆಣ್ಣು ಮಕ್ಕಳ ಅಪರಾಧಿಗಳಿಗೆ ಪ್ರಧಾನಿ ಮೌನ ಬೆಂಬಲ ನೀಡುತ್ತಿರುವುದು ದೇಶಾದ್ಯಂತ ಅಪರಾಧಿಗಳಿಗೆ ಧೈರ್ಯ ತುಂಬುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಮೋದಿಯವರ ‘ರಾಜಕೀಯ ಕುಟುಂಬದ’ ಭಾಗವಾಗುವುದರಿಂದಅಪರಾಧಿಗಳಿಗೆ ‘ಭದ್ರತೆಯ ಖಾತರಿ’ ಸಿಗುತ್ತಿದೆಯೇ ಎಂದು ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.