ನವದೆಹಲಿ: ನಾಯಿಗಳ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಅಸಾಧ್ಯ. ನಾಯಿ ಸಿಟ್ಟಿನಲ್ಲಿದ್ದಾಗ ಹೇಗೆ ವರ್ತಿಸುತ್ತದೆ ಎನ್ನುವುದೂ ಅರ್ಥವಾಗುವುದಿಲ್ಲ. ಆದ್ದರಿಂದ ರಸ್ತೆಗಳಲ್ಲಿ ನಾಯಿಗಳಿಲ್ಲದಂತೆ ನೋಡಿಕೊಳ್ಳಲು ಕ್ರಮಗಳನ್ನು ಅನುಸರಿಸಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜರಾರಿಯಾ ಅವರ ತ್ರಿಸದಸ್ಯ ಪೀಠ ನಾಯಿಗಳು ಕಚ್ಚುತ್ತವೆ ಎನ್ನುವುದಷ್ಟೇ ವಿಷಯವಲ್ಲ. ನಾಯಿಗಳು ದ್ವಿಚಕ್ರ ವಾಹನಗಳಲ್ಲಿ ಚಲಿಸುವವರನ್ನು ಕಚ್ಚಬಹುದು ಅಥವಾ ಅಟ್ಟಾಡಿಸಿಕೊಂಡು ಹೋಗಲೂಬಹುದು. ಆಗ ಸವಾರರು ಕೆಳಗೆ ಬಿದ್ದು ಅಪಘಾತಕ್ಕೀಡಾಗುವ ಸಂಭವವಿರುವುದಿಲ್ಲವೇ ಎಂದು ಪ್ರಶ್ನಿಸಿತು.
ಸುಪ್ರೀಂಕೋರ್ಟ್ ಬೀದಿ ನಾಯಿಗಳಿಗೆ ಸಂಬಂಧಿಸಿದಂತೆ ಸುಮೊಟೊ ಪ್ರಕರಣ ದಾಖಲಿಸಿಕೊಂಡಿತ್ತು. ನಾಯಿಗಳಿಗೆ ಗುಂಡಿಕ್ಕಿ ಕೊಲ್ಲಬೇಕು ಎಂದು ನಾವು ಹೇಳುತ್ತಿಲ್ಲ. ನಾಯಿಗಳು ಕಡಿಯುವುದನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು. ಒಟ್ಟಾರೆ ರಸ್ತೆಗಳು ನಾಯಿಗಳಿಂದ ಮುಕ್ತವಾಗಿರಬೇಕು ಅಷ್ಟೇ ಎಂದು ಒತ್ತಿ ಹೇಳಿದೆ. ನಾಯಿಗಳು ಎಲ್ಲಿರುತ್ತವೆಯೋ ಅವು ಅಲ್ಲಿಯೇ ಬಿಡಬೇಕು ಎಂದು ಕಾನೂನು ಹೇಳುತ್ತದೆ. ಹಾಗೆಂದು ಅವುಗಳನ್ನು ಬೀದಿಗಳಲ್ಲಿ ಬಿಡಬೇಕೇ ಎಂದೂ ಪ್ರಶ್ನಿಸಿದೆ.
ರಸ್ತೆಗಳು ನಾಯಿಗಳಿಂದ ಮುಕ್ತವಾಗಿರಬೇಕು. ಬೀದಿ ನಾಯಿಗಳು ದ್ವಿಚಕ್ರ ವಾಹನಗಳು ಮತ್ತು ಸೈಕಲ್ ಸವಾರರಿಗೆ ಎಷ್ಟು ತೊಂದರೆ ಉಂಟು ಮಾಡುತ್ತಿವೆ ಎನ್ನುವುದು ಅರಿವಿದೆ ಎಂದೂ ತಿಳಿಸಿದೆ.
ಪ್ರಾಣಿಗಳ ಹಕ್ಕುಗಳನ್ನು ಪ್ರತಿಪಾದಿಸುವ ಸಂಸ್ಥೆಗಳ ಪರ ವಾದಿಸಿದ ವಕೀಲರು ನಾಯಿಗಳು ವಿಶ್ವವಿದ್ಯಾಲಯಗಳ ಆವರಣದಲ್ಲಿಯೂ ವಾಸಿಸುವುದನ್ನು ಕಾಣಬಹುದಾಗಿದೆ. ನಾನು ವಿಶ್ವವಿದ್ಯಾಲಯದಲ್ಲಿದ್ದಾಗ ಅಲ್ಲಿಯೂ ನಾಯಿಗಳಿದ್ದವು. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಆವರಣದಲ್ಲಿಯೂ ನಾಯಿಗಳಿವೆ. ಆದರೆ ಅವು ಯಾರನ್ನೂ ಕಚ್ಚಿಲ್ಲ ಎಂದು ಹೇಳಿದರು. ಆಗ ನ್ಯಾಯಮೂರ್ತಿಗಳು ನೀವು ನೀಡುತ್ತಿರುವ ಈಗ ಅಪ್ರಸ್ತುತವಾಗಿದೆ. ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾಲಯದ ಆವರಣದಲ್ಲಿ ನಾಯಿಗಳು ದಾಳಿ ನಡೆಸಿದ್ದು, ಹಲವರನ್ನು ಕಚ್ಚಿರುವ ವರದಿಗಳು ಪ್ರಕಟವಾಗಿವೆ ಎಂದು ಹೇಳಿದರು.

