ಹೊಸದಿಲ್ಲಿ. ಹೈದರಾಬಾದ್ ಮೂಲದ ಮೇಘ ಇಂಜಿನಿಯರಿಂಗ್ ಇನ್ಫಾಸ್ಟ್ರಕ್ಚರ್ ಲಿಮಿಟೆಡ್ ಏಪ್ರಿಲ್ 2019ರವರೆಗೆ ಚುನಾವಣಾ ಬಾಂಡ್ (Electoral Bonds) ಮೂಲಕ ಅತಿಹೆಚ್ಚು ದೇಣಿಗೆ ನೀಡಿದ ದೊಡ್ಡ ಕುಳಗಳ ಪಟ್ಟಿಯಲ್ಲಿಎರಡನೇ ಸ್ಥಾನದಲ್ಲಿದೆ.
ತಮಾಶೆಯೆಂದರೆ ಸಂಸ್ಥೆಯ ಮೂಲ ಬಂಡವಾಳ 156 ಕೋಟಿ ರುಪಾಯಿಗಳಾದರೆ ಅದು ರಾಜಕೀಯ ಪಕ್ಷಗಳಿಗೆ ನೀಡಿರುವ ದೇಣಿಗೆ 966 ಕೋಟಿ ರುಪಾಯಿಗಳು!
ಮೇಘಾ ಗ್ರೂಪ್ಸ್ ನ ಮಾಲೀಕ ಕೃಷ್ಣಾರೆಡ್ಡಿಗೆ (Krishna Reddy) ರಾಜಕೀಯ ಪಕ್ಷಗಳ ಜೊತೆ ನಿಕಟ ಸಂಪರ್ಕ ಇರುವುದರಿಂದಲೇ ಆತ ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳನ್ನು ನಡೆಸುತ್ತಾನೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ಇವುಗಳಲ್ಲಿ ಸೇರಿವೆ. ಈ ಪೈಕಿ ಗೋದಾವರಿ ನದಿ ತಪ್ಪಲಿನ ಕಲ್ಲೇಶ್ವರಂ ಏತ ನೀರಾವರಿ ಯೋಜನೆ ಜಗತ್ತಿನ ಅತಿದೊಡ್ಡ ಏತ ನೀರಾವರಿ ಯೋಜನೆ ಎನಿಸಿಕೊಂಡಿದೆ. ಈ ಯೋಜನೆಯಲ್ಲಿ ಅವ್ಯವಹಾರಗಳು ನಡೆದಿವೆ ಎಂದು ಸಿಎಜಿ (CAG) ತನ್ನ ವರದಿಯಲ್ಲಿ ಹೇಳಿತ್ತಲ್ಲದೆ, ಸರ್ಕಾರಕ್ಕೆ ಕೋಟ್ಯಂತರ ರುಪಾಯಿ ನಷ್ಟವಾಗಿರುವ ಕುರಿತು ಮಾಹಿತಿ ನೀಡಿತ್ತು.
ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಅತ್ಯಾಪ್ತರಲ್ಲಿ ಒಬ್ಬರಾದ ಮೇಘ ಗ್ರೂಪ್ಸ್ ರಾಜ್ಯದ ಅತಿ ಪ್ರಮುಖ ಮೂಲಸೌಕರ್ಯ ಯೋಜನೆಗಳ ಗುತ್ತಿಗೆ ಹಿಡಿದಿದೆ.
ಝೋಜಿಲಾ ಟನಲ್ ಯೋಜನೆಯ ಗುತ್ತಿಗೆಯೂ ಮೇಘ ಸಂಸ್ಥೆಯ ಪಾಲಾಗಿದೆ. ರಕ್ಷಣಾ ಇಲಾಖೆಗೆ 500 ಕೋಟಿ ರುಪಾಯಿಗಳ ರೇಡಿಯೋ ರಿಲೇ ಕಂಟೇನರ್ ಗಳನ್ನು ಸರಬರಾಜು ಮಾಡುವ ಗುತ್ತಿಗೆಯನ್ನೂ ಮೇಘ ಸಂಸ್ಥೆ ಪಡೆದಿದೆ.
ಮೇಘ ಇಂಜಿನಿಯರಿಂಗ್ ಇನ್ಫಾಸ್ಟ್ರಕ್ಚರ್ ಲಿಮಿಟೆಡ್ ಸಂಸ್ಥೆಗೆ ಸೇರಿರುವ ವೆಸ್ಟ್ರನ್ ಯುಪಿ ಪವರ್ ಟ್ರಾನ್ಸ್ ಮಿಷನ್ ಕಂಪೆನಿ ಲಿಮಿಟೆಡ್ ಕೂಡ ಬಾಂಡ್ ಗಳ ಮೂಲಕ ದೇಣಿಗೆ ನೀಡುವುದರಲ್ಲಿ ಹಿಂದೆ ಬಿದ್ದಿಲ್ಲ. ಅತಿ ಹೆಚ್ಚು ದೇಣಿಗೆ ನೀಡಿದ ಸಂಸ್ಥೆಗಳ ಪಟ್ಟಿಯಲ್ಲಿ ಇದು ಏಳನೇ ಸ್ಥಾನದಲ್ಲಿದೆ. ಪಶ್ವಿಮ ಉತ್ತರ ಪ್ರದೇಶದಲ್ಲಿ ಪವರ್ ಟ್ರಾನ್ಸಮಿಷನ್ ಅಳವಳಿಕೆಯನ್ನು ಇದು ನಡೆಸುತ್ತಿದೆ. ಒಟ್ಟು 220 ಕೋಟಿ ರುಪಾಯಿಗಳನ್ನು ಇದು ಉದಾರವಾಗಿ ರಾಜಕೀಯ ಪಕ್ಷಗಳಿಗೆ (Political Parties) ದೇಣಿಗೆ ನೀಡಿದೆ.
ಕೃಷ್ಣಾರೆಡ್ಡಿಯ ಮೇಘ ಗ್ರೂಪ್ಸ್‌ನ (Megha Groups) ಇನ್ನೆರಡು ಸಂಸ್ಥೆಗಳಾದ ಎಸ್ ಇ ಪಿಸಿ ಮತ್ತು ಇವೆ ಟ್ರಾನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳೂ ಕೂಡ ಕ್ರಮವಾಗಿ 40 ಮತ್ತು 6 ಕೋಟಿ ರುಪಾಯಿಗಳನ್ನು ಬಾಂಡ್ ಗಳ ಮೂಲಕ ದೇಣಿಗೆ ನೀಡಿವೆ. ಮೇಘ ಗ್ರೂಪ್ಸ್ ಒಟ್ಟು ಕೊಟ್ಟಿರುವ ದೇಣಿಗೆ 1,232 ಕೋಟಿ ರುಪಾಯಿಗಳು!
2019ರ ಅಕ್ಟೋಬರ್ ನಲ್ಲಿ ಮೇಘ ಸಂಸ್ಥೆಯ ಹೈದರಾಬಾದ್ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಆದರೆ ನಡೆದಿದ್ದು ದಾಳಿ ಅಲ್ಲ, ದಾಖಲೆಗಳ ಪರಿಶೀಲನೆ ಎಂದು ಮೇಘ ಸಂಸ್ಥೆ ಹೇಳಿಕೊಂಡಿತ್ತು.