ದೇವೇಗೌಡರೇನು ಇನ್ ಕಂ ಟ್ಯಾಕ್ಸ್ ಆಫೀಸರ್ರಾ? : ಡಿಕೆ ಶಿವಕುಮಾರ್ ವ್ಯಂಗ್ಯ

Most read

ಬೆಂಗಳೂರು: ಎಐಸಿಸಿಗೆ ಹಣ ಕಳುಹಿಸುತ್ತಿದ್ದಾರೆ ಎಂಬ ದೇವೇಗೌಡರ ಆರೋಪದ ಹಿನ್ನೆಲೆಯಲ್ಲಿ ದೇವೇಗೌಡರೇನು ಇನ್ ಕಮ್ ಟ್ಯಾಕ್ಸ್ ಆಫೀಸರ್ರಾ? ಎಂದು ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿ.ಕೆ
ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ಆದಾಯ ತೆರಿಗೆ ಇಲಾಖೆಯವರು 1823 ಕೋಟಿ ರುಪಾಯಿ ಕಟ್ಟಬೇಕು ಎಂದು ನಮ್ಮ ಪಕ್ಷಕ್ಕೆ ನೊಟೀಸ್ ಕೊಟ್ಟಿದ್ದಾರೆ. ವಿರೋಧ ಪಕ್ಷದವರ ಮೇಲೆ ದಾಳಿ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ನಾವು ಎಐಸಿಸಿಗೆ ಹಣ ಕಳುಹಿಸುತ್ತಿದ್ದೇವೆ ಎಂದು ಖಚಿತವಾಗಿ ಹೇಳಲು ದೇವೇಗೌಡರೇನು ಇನ್ ಕಂ ಟ್ಯಾಕ್ಸ್ ಆಫೀಸರ್ರಾ? ಎಂದು ಪ್ರಶ್ನೆ ಮಾಡಿದರು.

ನಾನೂ ಏನು ಬೇಕಾದರೂ ಆರೋಪ ಮಾಡಬಹುದು. ಅವರ ಆರೋಪ ವಿಚಾರ ಎಲ್ಲ ನಿರಾಧಾರ. ನಾವು ದುಡ್ಡು ಎಐಸಿಸಿಗೆ ಕಳುಹಿಸುವ ಅವಶ್ಯಕತೆ ಇಲ್ಲ. ನಮ್ಮ ಪಕ್ಷ ೨೦ ಕ್ಕೂ ಹೆಚ್ಚು ಸೀಟು ಗೆಲ್ಲುತ್ತದೆ ಎಂಬ ಮಾಹಿತಿ ಇದೆ. ಅದಕ್ಕಾಗಿ ಅಸಹಾಯಕತೆಯಿಂದ ಹೀಗೆ ಟೀಕೆಮಾಡ್ತಿದ್ದಾರೆ. ಜೆಡಿಎಸ್ ಪಕ್ಷವೇ ಇಲ್ಲದಂತಾಗಿದೆ. ಇದ್ದಿದ್ದರೆ ಅಳಿಯನನ್ನು ಜೆಡಿಎಸ್ ಕ್ಯಾಂಡಿಡೇಟ್ ಮಾಡುತ್ತಿದ್ದರು ಎಂದು ಡಿ.ಕೆ.ಶಿವಕುಮಾರ್ ಗೇಲಿ ಮಾಡಿದರು.

ಜೆಡಿಎಸ್ ಪಕ್ಷ ಅಸ್ತಿತ್ವದಲ್ಲೇ ಇಲ್ಲ. ಇವರೇ ಇವರ ಪಾರ್ಟಿಯನ್ನು ಬಿಜೆಪಿಯೊಂದಿಗೆ ಮರ್ಜ್ ಮಾಡಿಬಿಟ್ಟರು ಎನ್ನೋ ನೋವು ನನಗಿದೆ. ದೇಶಕ್ಕೇ ಪ್ರಧಾನಿ ಆದವರು, ಕುಟುಂಬಸ್ಥರು ಎರಡು ಬಾರಿ ಸಿಎಂ ಆದವರು ಹೀಗೆ ಮಾಡಬಾರದಿತ್ತು. ವಿರೋಧ ಪಕ್ಷದವರು ಪ್ರಬಲವಾಗಿರಬೇಕು ಅಂತ ನಮ್ಮ ಆಸೆ. ಆದರೆ ಇವರೇ ಬಿಜೆಪಿ ಜೊತೆಗೆ ಪಾರ್ಟಿ ಮರ್ಜ್ ಮಾಡ್ತಿದ್ದಾರಲ್ಲ. ಬಹಳ ದೊಡ್ಡ ದೊಡ್ಡವರು ನಮ್ಮ ಪಾರ್ಟಿ ಸಂಪರ್ಕ ಮಾಡ್ತಿದ್ದಾರೆ. ಈಗ ಹೆಸರು ಹೇಳುವುದಕ್ಕೆ ಹೋಗುವುದಿಲ್ಲ ಎಂದು ಅವರು ಹೇಳಿದರು.

More articles

Latest article