ನಮ್ಮ ಭಾವನೆಯನ್ನು, ಭಾವಗಳನ್ನು ಪ್ರಚೋದಿಸಿ ತಮ್ಮ ಅಜೆಂಡಾಗಳನ್ನು ನಮ್ಮ ಆಲೋಚನೆಗಳನ್ನಾಗಿ ಬದಲಾಯಿಸುವ ಶಕ್ತಿಗಳನ್ನು ಗುರುತಿಸಿ ಅದನ್ನು ಪ್ರಶ್ನಿಸುವುದು ನಿಜವಾದ ವೈಚಾರಿಕತೆ. ಸಿದ್ಧಾಂತಗಳ ಆಧಾರಿತ ಪರ ವಿರೋಧ ವೈಚಾರಿಕತೆ ಅಲ್ಲವೇ ಅಲ್ಲ – ಡಾ. ರೂಪಾ ರಾವ್, ಮನ:ಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ.
ನಾವು ಏನು ಮಾತನಾಡುತ್ತೇವೆ ಮತ್ತು ಯೋಚಿಸುತ್ತೇವೆ ಎಂಬುದನ್ನು ಯಾರು ನಿರ್ಧರಿಸುತ್ತಾರೆ?
ಗಮನಿಸಿದ್ದೀರಾ? ಕೆಲವು ವಿಷಯಗಳು ಮಾತ್ರ ನಿಮ್ಮ ಸಾಮಾಜಿಕ ಮಾಧ್ಯಮದ ಫೀಡ್ ನಲ್ಲಿ , ನ್ಯೂಸ್ ನೋಟಿಫಿಕೇಶನ್ ಗಳಲ್ಲಿ ತುಂಬಿ ಹರಿಯುತ್ತವೆ ಮತ್ತು ಇನ್ನೂ ಇತರ ವಿಷಯಗಳು ಯಾವುದೇ ಸುಳಿವೂ ಇಲ್ಲದೆ ಕಣ್ಮರೆಯಾಗುತ್ತವೆ! ಕೆಲವು ಪ್ರಕರಣಗಳು ಆಕ್ರೋಶ , ಆಕ್ರಂದನವನ್ನು ಹುಟ್ಟು ಹಾಕಿದರೆ ಮತ್ತೆ ಕೆಲವು ಟಿವಿಯಲ್ಲಿ ಚರ್ಚೆಗಳನ್ನು ಹುಟ್ಟು ಹಾಕುತ್ತವೆ. ಆದರೆ ಇತರ ಅಂತಹುದೇ ದುರಂತಗಳು ಸದ್ದಿಲ್ಲದೇ ಮಸುಕಾಗಿ ಹೋಗುತ್ತವೆ ಯಾಕೆ ?
ನಮಗೆ ಯಾವುದು “ಮುಖ್ಯ” ಮತ್ತು ಯಾವುದು ಅಮುಖ್ಯ ಎಂಬುದನ್ನು ಯಾರು ನಿರ್ಧರಿಸುತ್ತಾರೆ?
ನೀವೀಗ ಹೇಳಬಹುದು ’ನಾವೇ ನಿರ್ಧರಿಸುವುದುʼ ಎಂದು.’
ಈ ಕೆಳಗಿನ ಉದಾಹರಣೆಗಳನ್ನು ನೋಡಿ-
ಬೆಂಗಳೂರಿನಲ್ಲಿ ಟೆಕ್ಕಿಯೊಬ್ಬನನ್ನು ಕೊಲ್ಲಲಾಯಿತು. ನಗರವು ವಾರಗಟ್ಟಲೆ ಅದರ ಬಗ್ಗೆ ಮಾತನಾಡುತ್ತಿತ್ತು. ಟಿವಿ ಚರ್ಚೆಗಳು, ಸಾಮಾಜಿಕ ಮಾಧ್ಯಮ ಪ್ರಚಾರಗಳು, ಸಾರ್ವಜನಿಕ ಆಕ್ರೋಶ-ಇದು ಒಂದು ದೊಡ್ಡ ರಾದ್ಧಾಂತವಾಯಿತು.
ಆದರೆ ದೊಡ್ಡ ಕಂಪನಿಯೊಂದರಲ್ಲಿ ಮೂರು ಜನ ಇಂಜಿನಿಯರ್ ಗಳು ಅವರ ಕಂಪನಿಯ ಮೇಲಾಧಿಕಾರಿಗಳ ನಿರ್ಲಕ್ಷ್ಯದಿಂದ ತುಂಬಿ ಹರಿಯುವ ನೀರಿನ ಟನೆಲ್‌ನಲ್ಲಿ ಸಿಲುಕಿ ಜೀವ ಕಳೆದುಕೊಂಡರು. ಅದರ ಬಗ್ಗೆ ಚರ್ಚೆ ಇರಲಿ ಟಿವಿ ನ್ಯೂಸ್ ಸಹಾ ಮಾತಾಡಲಿಲ್ಲ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಅದರ ಬಗೆಗೆ ಯಾವುದೇ ಆಕ್ರೋಶ ರೋಷಾವೇಶ ಊಹೂಂ ಯಾವುದೂ ಇಲ್ಲ.
ಎಲ್ಲೋ ನಡೆದ ಜಾತಿ ನಿಂದನೆ ಅಥವಾ ಧಾರ್ಮಿಕ ಮುಖಂಡರ ಮಾತುಗಳು ಮುನ್ನೆಲೆಗೆ ಬರುವಷ್ಟು ಅದೇ ದಿನ ನಡೆದ ಅತ್ಯಾಚಾರಗಳು ಬರುವುದಿಲ್ಲ.
ಈಗ ಹೇಳಿ
ನಮ್ಮ ಫೀಡ್ ಇರಲಿ, ನಾವು ಯಾವುದರ ಬಗ್ಗೆ ಯೋಚಿಸಬೇಕಿದೆ ಎಂದು ನಿರ್ಧರಿಸುವುದಿರಲಿ ಅದನ್ನು ನಿರ್ಧರಿಸುವವರು ನಾವಾ?
ನೋಡಿ, ಪ್ರಭಾವಿ ಪ್ರಕಟಣಾ ಸಂಸ್ಥೆಗಳು ಪ್ರಕಟಿಸಿದ ಪುಸ್ತಕಗಳು, ಅಥವಾ ಪ್ರಭಾವಿ ಲೇಖಕರ ಪುಸ್ತಕಗಳ ಬಗ್ಗೆ, ಕೆಲವೊಂದು ಎಡ ಅಥವಾ ಬಲ ಅಜೆಂಡಾ ಹೊಂದಿದ ಸಿನಿಮಾಗಳ ಬಗ್ಗೆ ಟಿವಿ ಮೊದಲ್ಗೊಂಡು ಯುಟ್ಯೂಬ್ ಚಾನೆಲ್ ಗಳವರೆಗೂ ಇನ್ನಿಲ್ಲದಷ್ಟು ಚರ್ಚೆ ನಡೆಯುತ್ತದೆ. ಜನರೂ ಅವುಗಳೇ ಅತ್ಯುತ್ತಮ ಎಂದು ನಂಬಿ ಅದನ್ನು ಖರೀದಿಸಿ ವಾಹ್ ವಾಹ್ ಎನ್ನುತ್ತಾರೆ .
ಈಗಹೇಳಿ ನಿಮ್ಮ ನಮ್ಮ ಆಲೋಚನಾ ಶಕ್ತಿ , ಖರೀದಿಯ ಹರಿವು ಎಲ್ಲದರ ನಿಯಂತ್ರಣ ನಿಜಕ್ಕೂ ನಮ್ಮದಾಗಿಯೇ ಉಳಿದಿದೆಯಾ? ಬಹಳಷ್ಟು ಸಲ ಇಲ್ಲವೇ ಇಲ್ಲ..
ಮಾಧ್ಯಮಗಳು, ಪ್ರಭಾವಿ ಜನರು ಮತ್ತು ನಮ್ಮ ಸುತ್ತಲಿನ ಜನರ ಸಾಮಾಜಿಕ ಪ್ರವೃತ್ತಿಗಳು ನಮ್ಮ ಆಲೋಚನೆಗಳನ್ನು ರೂಪಿಸುತ್ತವೆ. ಯಾವ ಸಮಸ್ಯೆಗಳು ಮುಖ್ಯ, ಯಾವಾಗ ಯಾವ ವೇದಿಕೆಯ ಮೂಲಕ ಮಾತಾಡುವುದು ಎಂಬುದನ್ನು ಅವರೇ ನಿಗದಿಪಡಿಸುತ್ತಾರೆ. ಮತ್ತು ಜನರು ಅವರನ್ನೇ ಅನುಸರಿಸುತ್ತಾರೆ. ನಮ್ಮ ಸ್ವಂತ ಅಭಿಪ್ರಾಯಗಳನ್ನೇ ಹೇಳುತ್ತಿದ್ದೇವೆ ಎಂದು ನಾವು ಅಂದುಕೊಳ್ತೇವೆ. ನಿಜ ಏನೆಂದರೆ ನಮಗೆ ಪದೇ ಪದೇ ತೋರಿಸಿದ ವಿಷಯಗಳಿಗೆ ನಾವು ಪ್ರತಿಕ್ರಿಯೆ ನೀಡುತ್ತೇವೆ ಅಷ್ಟೇ .
ಒಬ್ಬ ತಾಯಿ ತನ್ನ ಮಗುವನ್ನು ಮೇಲಿನಿಂದ ಬೀಳಿಸಿ ತಾನೂ ಸತ್ತಿದ್ದು ದೊಡ್ಡ ನ್ಯೂಸ್ ಆಯಿತು, ಆದರೆ ಒಬ್ಬ ತನ್ನ ಮಕ್ಕಳನ್ನು ಕೊಂದು ತನ್ನ ಜೀವನವನ್ನು ಕೊನೆಗೊಳಿಸಿದನು. ಆದರೆ ಅದು “ಸುದ್ದಿ ಯೋಗ್ಯ” ವಾಗಿರಲಿಲ್ಲ. ಹಾಗಾಗಿ ಯಾವುದೇ ವೈರಲ್ ಆಕ್ರೋಶವಿರಲಿಲ್ಲ.
ಆ ಪ್ರಭಾವಿ ಜನ, ಮಾಧ್ಯಮ ಮತ್ತು ಸೋ ಕಾಲ್ಡ್ ಸೆಲೆಬ್ರಿಟಿಗಳು ವಿಷ ಹಂಚುತ್ತಾರೆ ಸರಿ. ಆದರೆ ನಾವೇಕೆ ಅದನ್ನು ತೆಗೆದುಕೊಳ್ತೇವೆ? ಕಾರಣಗಳಿಗೆ ನಮ್ಮ ಒಳಮನಸ್ಸು ಕಾರಣ ಹೇಗೆ?
1. ಅಜೆಂಡಾ-ಸೆಟ್ಟಿಂಗ್ ಥಿಯರಿ: ಮೇಲೆ ಹೇಳಿದವರುಗಳು ನಮಗೆ ಏನು ಯೋಚಿಸಬೇಕು ಎಂದು ಹೇಳುವುದಿಲ್ಲ. ಒಂದು ಪ್ರಕರಣವನ್ನು ಭಾವುಕತೆ ಮತ್ತು ಆಕ್ರೋಶದಿಂದ ಎತ್ತಿ ತೋರಿಸಿದರೆ ಸಾಕು ಅದು ಸಾರ್ವಜನಿಕರ ಗಮನಕ್ಕೆ ಬಂದು ಸುಪ್ತ ಮನಸ್ಸಿನಲ್ಲಿ ತಳ ಊರುತ್ತದೆ. ಅಥವಾ ಆ ಪ್ರಭಾವಿಗಳು ಅದನ್ನು ನಿರ್ಲಕ್ಷಿಸಿದರೆ, ಅದು ಮಹತ್ವದ್ದಲ್ಲ ಎಂದು ನಾವು ಮೌನವಾಗುತ್ತೇವೆ..
2. ಟ್ರೆಂಡಿಂಗ್ ಅನ್ನು ಫಾಲೋ ಮಾಡುವ ಗುಣ
ನಿಮಗೆ ನನ್ನ ಹೆಸರನ್ನು ಕೇಳಿದಾಗ ಏನನಿಸುತ್ತದೆ, ನನ್ನ ಬಗ್ಗೆ ಒಂದೆರೆಡು ಮಾತು ಹೇಳಿ ಇವೆಲ್ಲಾ ಸಾಮಾನ್ಯ ಜನರಲ್ಲಿ ಯಾರ್ಯಾರು ಟ್ರೆಂಡ್ ಅನ್ನು ಎಷ್ಟರ ಮಟ್ಟಿಗೆ ಫಾಲೋ ಮಾಡುತ್ತಾರೆ ಎಂಬುದರ ಟೆಸ್ಟ್. ಇಲ್ಲಿ ಗುಂಪಿಗೆ ಸೇರುವ ತವಕ ಅಥವಾ ಬ್ಯಾಂಡ್ವ್ಯಾಗನ್ ಎಫೆಕ್ಟ್ ನಮ್ಮನ್ನು ಸೆಳೆಯುತ್ತದೆ. ಎಲ್ಲರೂ ಯಾವುದೋ ಸಮಸ್ಯೆಯ ಪರ ಅಥವಾ ವಿರೋಧದ ಬಗ್ಗೆ ಮಾತನಾಡುತ್ತಿದ್ದರೆ, ನಾವ್ಯಾವ ಗುಂಪಿನ ಬಗ್ಗೆ ಒಲವು ಹೊಂದಿದ್ದೇವೆ ಎಂಬುದನ್ನು ಆಧರಿಸಿ ಆ ಗುಂಪಿನ ಟ್ರೆಂಡ್ ಫಾಲೋ ಮಾಡ್ತೇವೆ.
3. ಪ್ರಾಮುಖ್ಯತೆಯ ಭ್ರಮೆಯ ಸೃಷ್ಟಿ
ಅತಿಹೆಚ್ಚು ಜನರು ಯಾವುದೇ ವಿಷಯವನ್ನು ಶೇರ್ ಮಾಡಿದಾಗ ಅದೊಂದು ರೀತಿಯ ಜನಾಕರ್ಷಣೆಯನ್ನು ಪಡೆಯುತ್ತೆ. ಒಂದು ಪ್ರಕರಣವು ನಿಜವಾಗಿಯೂ ಮುಖ್ಯ ವಿಷಯವಲ್ಲದೇ ಇದ್ದರೂ, ಪ್ರಾಮುಖ್ಯತೆಯ ಭ್ರಮೆಯನ್ನು ಸೃಷ್ಟಿಸುತ್ತದೆ.
4. ಸೆಲೆಕ್ಟೀವ್ ಎಕ್ಸ್‌ಪ್ಲೋರರ್ ಮತ್ತು ಕನ್ಫರ್ಮೇಶನ್ ಬಯಾಸ್
ಜನರು, ತಮ್ಮ ಮನಸಿನಲ್ಲಿ ಬೇರೂರಿರುವ ದೃಷ್ಟಿಕೋನಗಳನ್ನು ಪ್ರತಿನಿಧಿಸುವ ಮಾಧ್ಯಮ ಮತ್ತು ಪ್ರಭಾವಿ ಜನರನ್ನು ಅನುಸರಿಸುತ್ತಾರೆ. ಇವರುಗಳು ಆ ಅಭಿಪ್ರಾಯಗಳನ್ನು, ಕೆಲವು ಸಮಸ್ಯೆಗಳನ್ನು ವೈಭವೀಕರಿಸಿ, ಉತ್ಪ್ರೇಕ್ಷಿಸಿ ಇನ್ನೂ ಬಲಪಡಿಸುತ್ತಾರೆ. ಜಾತಿ ಜಾತಿಗಳ ನಡುವೆ ವೈಮನಸ್ಯ ತಂದಿಡುವ, ಒಂದು ಜಾತಿ ಅಥವಾ ಧರ್ಮದ ಬಗ್ಗೆ ಇನ್ನೊಂದು ಜಾತಿ ಅಥವಾ ಧರ್ಮದವರು ಭಯ ಪಡುವ ಸ್ಥಿತಿ ತಂದಿಡುವುದೂ ಇಂತಹ ಕಾರಣದಿಂದಾಗಿಯೇ. ತಮಾಷೆ ಎಂದರೆ ತಮ್ಮ ಅಭಿಪ್ರಾಯಕ್ಕೆ ವ್ಯತಿರಿಕ್ತವಾದ ವಿಷಯಗಳನ್ನು ಮನಸು ತಾನಾಗಿಯೇ ನಿರ್ಲಕ್ಷಿಸುವಂತೆ ಮಾಡುವುದು ಇದೇ ಕಾರಣಕ್ಕೆ.
5. ಫ್ರೇಮಿಂಗ್ ಎಫೆಕ್ಟ್( ಯಾವುದೇ ವಿಷಯವನ್ನು ಕರುಣಾಜನಕ ಅಥವಾ ದ್ವೇಷ ಬರುವಂತಹ ಕಥೆಯ ವಿಧಾನದಲ್ಲಿ ಹೇಳುವುದು)
ಈ ವಿಧಾನವು ಸಾರ್ವಜನಿಕರ ಅಭಿಪ್ರಾಯವನ್ನು ರೂಪಿಸುತ್ತದೆ. ಮಾಧ್ಯಮಗಳು ಒಂದು ಪ್ರಕರಣವನ್ನು ತೀವ್ರ ಅನ್ಯಾಯವೆಂದು ಬಿಂಬಿಸಿದರೆ ಮತ್ತು ಇನ್ನೊಂದನ್ನು ನಿರ್ಲಕ್ಷಿಸಿದರೆ ಜನರು ಸ್ವಾಭಾವಿಕವಾಗಿ ಪ್ರಮುಖವಾದ ಪ್ರಕರಣದ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ.
6. (ಚೋಮ್ಸ್ಕಿಯ ಸಿದ್ಧಾಂತ)
ಮಾಧ್ಯಮಗಳು ಮತ್ತು ಪ್ರಭಾವಿ ವ್ಯಕ್ತಿಗಳು ಪ್ರಬಲ ಸಂಸ್ಥೆಗಳಿಗೆ ಲಾಭವಾಗುವ ರೀತಿಯಲ್ಲಿ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುತ್ತಾರೆ. ಜನರು ತಿಳಿಯದೆ ಈ ನಿರೂಪಣೆಯಿಂದಾದ ಬದಲಾವಣೆಯನ್ನು ತಮ್ಮ ಸ್ವಂತ ಅಭಿಪ್ರಾಯಗಳೆಂದು ನಂಬಿಕೊಳ್ಳುತ್ತಾರೆ.
ನಾವೇನು ಮಾಡಬಹುದು?
ಯಾವುದೇ ಭಾವ ಪ್ರಚೋದಕ, ಕರುಣಾಜನಕ, ಆಕ್ರೋಶಕಾರಕ ವಿಡಿಯೋ ಅಥವಾ ಬರಹ ನೋಡಿದಾಗ ಮೊದಲು ಈ ಬರಹ ಅಥವಾ ವಿಡಿಯೋದ ಉದ್ದೇಶವೇನು ? ಈ ಪ್ರಕರಣದ ಬಗ್ಗೆಯೇ ಏನು ತೋರಿಸಲಾಗುತ್ತಿದೆ ಎಂದು ಪ್ರಶ್ನಿಸಿಕೊಳ್ಳುವುದು.
ಯಾಕೆ ಬೇರೆ ವಿಷಯಗಳು, ದುರಂತಗಳು, ಸಿನಿಮಾಗಳು ಗಮನ ಸೆಳೆಯುವುದಿಲ್ಲ? ಎಂದು ವಿಮರ್ಶಿಸಿಕೊಳ್ಳುವುದು.
ಮಾಧ್ಯಮಗಳ ಸುದ್ದಿ ಎಂಬ ಚಕ್ರವ್ಯೂಹದಾಚೆ ಇರುವುದಾದರೂ ಏನು?. ಯಾರಿಗೆ ಇದರಿಂದ ಲಾಭ? ಎಂದೆಲ್ಲಾ ಯೋಚಿಸಿಕೊಳ್ಳುವುದು.
ನಮ್ಮ ಭಾವನೆಯನ್ನು ಭಾವಗಳನ್ನು ಪ್ರಚೋದಿಸಿ ತಮ್ಮ ಅಜೆಂಡಗಳನ್ನು ನಮ್ಮ ಆಲೋಚನೆಗಳನ್ನಾಗಿ ಬದಲಾಯಿಸುವ ಶಕ್ತಿಗಳನ್ನು ಗುರುತಿಸಿ ಅದನ್ನು ಪ್ರಶ್ನಿಸುವುದು ನಿಜವಾದ ವೈಚಾರಿಕತೆ. ಸಿದ್ಧಾಂತಗಳ ಆಧಾರಿತ ಪರ ವಿರೋಧ ವೈಚಾರಿಕತೆ ಅಲ್ಲವೇ ಅಲ್ಲ.
ನಮ್ಮ ಆಲೋಚನೆಗಳನ್ನು ನಾವು ಮಾಡಬೇಕೇ ಹೊರತು ಬೇರೆಯವರು ತಯಾರು ಮಾಡಿ ಅಳವಡಿಸಬಾರದು.
ಡಾ. ರೂಪಾ ರಾವ್
ಮನ:ಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ
ಇದನ್ನೂ ಓದಿ-ಗಹನ ವಿಚಾರಗಳ, ವಿಡಂಬನಾತ್ಮಕ ನಿರೂಪಣೆಯ ʼಫೆಮಿನಿಚಿ ಫಾತಿಮಾʼ