Wednesday, December 11, 2024

ಪ್ರತಿರೋಧವನ್ನು ವಿರೋಧವಾಗಿ ಮಾತ್ರ ಗ್ರಹಿಸುವ ನಾಡಿನಲ್ಲಿ..

Most read

ಸಮಾಜದಲ್ಲಿ ನೋವು, ಅವಮಾನ, ಹಿಂಸೆಯನ್ನು ಅನುಭವಿಸುತ್ತಲೇ ಸಂವಿಧಾನ ಕೊಡಮಾಡಿದ ಅವಕಾಶ ಪಡೆದು ಪ್ರಜಾಸತ್ತಾತ್ಮಕ ರೀತಿಯಲ್ಲೇ ಹೋರಾಟ ಮಾಡಿ ತಮ್ಮ ಧ್ವನಿಯನ್ನು ಸಮಾಜಕ್ಕೆ ತಲುಪಿಸಲು ಪ್ರಯತ್ನ ಪಡುವವರು ಕೇಳುವ ಪ್ರಶ್ನೆಗಳು ಇವತ್ತು ಯಾಕೆ ಅಪಾಯಕಾರಿಯಾಗಿ ಕಂಡುಬರುತ್ತಿವೆ? – ಡಾ.ಉದಯ ಕುಮಾರ ಇರ್ವತ್ತೂರು, ವಿಶ್ರಾಂತ ಪ್ರಾಂಶುಪಾಲರು.

ಎಲ್ಲ ಸಾಮಾಜಿಕ, ರಾಜಕೀಯ ಅಡೆತಡೆಗಳನ್ನು ಮೀರಿ ವೈಚಾರಿಕತೆಯ ಬೆಳಕಿನಲ್ಲಿ ಸಾಂವಿಧಾನಿಕ ಆಶಯದಲ್ಲಿ ಸಮಸಮಾಜದ ಕನಸು ನನಸು ಮಾಡಲು ಕಂಕಣಬದ್ಧರಾದ ದಮನಿತ, ತಳ, ಕೆಳ ಸಮಾಜದ ಪ್ರತಿನಿಧಿಯೊಬ್ಬರಾಗಿ ಡಾ. ಮೀನಾ ಕಂದಸ್ವಾಮಿ ಸಾಮಾಜಿಕ ನ್ಯಾಯದ ಕುರಿತು ನಂಬಿಕೆ ಇರುವ ಮಂಗಳೂರಿನ ಹಲಕೆಲವು ಮನಸ್ಸುಗಳೊಡನೆ “ಪ್ರತಿರೋಧವಾಗಿ ಬರವಣಿಗೆ” ಎನ್ನುವ ವಿಷಯದ ಕುರಿತು ಮಾತುಕತೆ ನಡೆಸಿದರು.

ತನ್ನ ಮಾತುಕತೆಯ ಉದ್ದಕ್ಕೂ ಡಾ. ಮೀನಾ, ಪರಂಪರೆಯಿಂದ ತನಗೆ ಬಳುವಳಿಯಾಗಿ ಸಿಕ್ಕಿದ ಸಂಕಟಗಳಿಗೆ ಕೊರಗುವುದನ್ನು ಬದಿಗಿರಿಸಿ, ದೇಶದ ಸಂವಿಧಾನ ತನ್ನ ನಾಗರೀಕರಿಗೆ ಒದಗಿಸಿದ ಅವಕಾಶಗಳನ್ನು ಬಳಸಿಯೇ ಅನುಭವ, ಅಧ್ಯಯನದ ಮೂಲಕ ಮುಂದಿನ ಗುರಿಯೆಡೆಗೆ ಸಾಗುತ್ತಿರುವ ಛಲಗಾರ್ತಿಯಾಗಿ ಕಂಡರು. ನಾಳಿನ ಬಗ್ಗೆ ಆತಂಕ, ಅಸ್ಪಷ್ಟತೆ ಇರುವವರ ಮಧ್ಯೆ ಇಂತಹ ವೈಚಾರಿಕ ಗಟ್ಟಿತನ ಮತ್ತು ಅನುಸರಿಸಬೇಕಾದ ದಾರಿಯ ಕುರಿತು ಸ್ಪಷ್ಟತೆ ಇರುವವರ ಅಗತ್ಯ ಬಹಳವಿದೆ. ಒಂದು ಹಂತದಲ್ಲಿ ಹಳೆಯ ಮಾದರಿಯನ್ನು ಮುರಿದು ಹೊಸ ಸಮಾಜವನ್ನು ನಿರ್ಮಿಸಿದ ವೈಚಾರಿಕತೆ ಇಂದು ನವ ಉದಾರವಾದಿ ವ್ಯವಸ್ಥೆಯಿಂದಲೇ ಅಪಾಯ ಎದುರಿಸುತ್ತಿರುವುದು ವಿಪರ್ಯಾಸ. ವ್ಯವಸ್ಥೆಯ ಎದುರು ಪ್ರಶ್ನೆಗಳನ್ನು ಎತ್ತಿದ ವೈಚಾರಿಕರಾದ ಎಂ.ಎಂ. ಕಲ್ಬುರ್ಗಿ, ನರೇಂದ್ರ ದಾಬೋಲ್ಕರ್, ಪತ್ರಕರ್ತೆ ಗೌರಿ ಲಂಕೇಶ್ ತಮ್ಮ ಜೀವದ ಬೆಲೆಯನ್ನೇ ತೆರಬೇಕಾದ ಸನ್ನಿವೇಶ ಎದುರಾಯಿತು.

ಡಾ. ಮೀನಾ ಕಂದಸ್ವಾಮಿ

ವೈಚಾರಿಕತೆ ಸದಾ ಕ್ರಿಯಾಶೀಲ ಹಾಗೂ ಸಾರ್ವಜನಿಕ ಹಿತಾಸಕ್ತಿಯ ಕುರಿತಂತೆ ಇದರ ನಿಲುವು ರಾಜಿರಹಿತವಾದದ್ದು. ಭಕ್ತಿ ಆಚರಣೆಗಳಿಗೆ ಶರಣಾಗತಿಯೇ ಗತಿಯಾದರೆ, ವೈಚಾರಿಕತೆ ಉಸಿರಾಡುವುದೇ ಪ್ರಶ್ನೆಗಳ ಮೂಲಕ. ಇದಕ್ಕೇ ಎಲ್ಲವೂ ವಿಸ್ಮಯ, ಹಿಂದಣ ಹೆಜ್ಜೆಯಿಂದ ಮುಂದಣ ಹೆಜ್ಜೆಗೆ ಜ್ಞಾನದ ಬೆಳಕೇ ಆಮ್ಲಜನಕ. ಯೋಚನೆ ಮತ್ತು ವಾಸ್ತವದ ನಡುವಿನ ಅಂತರವನ್ನು ಕಳೆಯುವುದರಲ್ಲಿಯೇ ವೈಚಾರಿಕತೆಯ ಜೀವ ಅಡಗಿರುವುದು. ಮನುಷ್ಯ ಚೈತನ್ಯವನ್ನು, ದುಡಿಸಿಕೊಂಡು ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ನೀಡುವ ಆಸೆಯ ಬೀಜವನ್ನು ಮೊಳಕೆಯೊಡೆಸುವ ಕಾವಿರುವುದು ಪ್ರಶ್ನೆ ಮಾಡುವುದರಲ್ಲಿ. ಆದರೆ ನಂಬಿಕೆ, ಭಕ್ತಿಯ ನೆರಳಲ್ಲಿ ನೆಲೆಯಾಗುವ ಅಧಿಕಾರದ ಕೇಂದ್ರಗಳಿಗೆ ಮತ್ತೆ ಮರುನಿರೂಪಣೆಗೊಳ್ಳುವುದು, ಮರುನಿರೂಪಿತಗೊಳ್ಳುವುದು ಯಾವಾಗಲೂ ಆತಂಕ, ಅಪಾಯ, ಭಯವನ್ನುಂಟುಮಾಡುವ ಸಂಗತಿಗಳೇ ಆಗಿವೆ.

ಇತಿಹಾಸದ ಒಂದು ಕಾಲ ಘಟ್ಟದಲ್ಲಿ ಭಕ್ತಿ, ನಂಬಿಕೆಗಳನ್ನು ಪಲ್ಲಟಗೊಳಿಸಿದ ವೈಚಾರಿಕ, ವೈಜ್ಞಾನಿಕ ಚಿಂತನೆಗಳು ಪ್ರಜಾಪ್ರಭುತ್ವದ ಕಲ್ಪನೆಯನ್ನು ಪರಿಚಯಿಸಿದುವು. ಈ ಹೊಸ ವ್ಯವಸ್ಥೆಯಲ್ಲಿ ಅಧಿಕಾರ ಸ್ಥಾಯಿಯಾಗಿರದೇ ಜಂಗಮವಾಗಿರುವುದೇ ವಿಶೇಷ. ಸಂವಿಧಾನದ ಮೂಲಕ ಆಡಳಿತ ನಡೆಸುವ ಸರಕಾರಗಳೂ ವೈಚಾರಿಕತೆಯ ಕುರಿತು ಅಗತ್ಯಕ್ಕಿಂತ ಹೆಚ್ಚು ಕಠಿಣವಾಗಿ ನಡೆದು ಕೊಳ್ಳುತ್ತಿವೆಯೇ? ರಾಜಕೀಯ ಪಕ್ಷಗಳು ಜಾರಿ ನಿರ್ದೇಶನಾಲಯ, ಆದಾಯ ತೆರಿಗೆಯ ದಾಳಿಯ ಆತಂಕ, ಭಯಕ್ಕೆ ಬಲಿಯಾಗಿ ಸಾರ್ವಜನಿಕ ಹಿತ ಮತ್ತು ಸಾಮಾಜಿಕ ನ್ಯಾಯದ ವಿಷಯದಲ್ಲಿ ಮೌನಕ್ಕೆ ಜಾರುತ್ತಿರುವ ವಾತಾವರಣವಿದೆ. ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾದ ಪತ್ರಿಕೋದ್ಯಮ ಉದ್ಯಮದ ಸ್ವರೂಪ ಪಡೆಯುತ್ತಲೇ ಲಾಭ ನಷ್ಟದ ಲೆಕ್ಕಾಚಾರಕ್ಕೆ ಒತ್ತು ನೀಡುವ ವಾತಾವರಣ ನಿರ್ಮಾಣವಾಗಿರುವ ಹೊತ್ತಲ್ಲಿ ಅಧಿಕಾರವನ್ನು ಪ್ರಭುತ್ವದ ಹೊಣೆಗಾರಿಕೆಯ ಕುರಿತ ಪ್ರಶ್ನೆಗಳನ್ನು ಕೇಳುವವರು ಯಾರು?

ನಾಗರೀಕರಾದವರ ಕನಸುಗಳು ನನಸಾಗುವ ಘನತೆ ಗೌರವಗಳಿಂದ ಬದುಕು ಕಟ್ಟಿಕೊಳ್ಳುವ ಸಮಾನವಾದ ಅವಕಾಶವನ್ನು ಸಂವಿಧಾನ ಸೃಷ್ಟಿಸಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದಂತೆ ಆರ್ಥಿಕ ಸಮಾನತೆಯಿಲ್ಲದೆ ರಾಜಕೀಯ ಸ್ವಾತಂತ್ರ್ಯ ದೀನ ದಲಿತರ ಬದುಕಿನಲ್ಲಿ ಬದಲಾವಣೆಯನ್ನು ತರಲಾರದು. ಸಾಮಾಜಿಕ ಪರಿವರ್ತನೆ ಸಾಧ್ಯವಾಗಬೇಕಿದ್ದರೆ ದೇಶದ ಸಂಪತ್ತಿನ ಮತ್ತು ಅವಕಾಶಗಳ ಮರು ಹಂಚಿಕೆ ಅಗತ್ಯ ಮಾತ್ರವಲ್ಲ ಅನಿವಾರ್ಯ ಕೂಡಾ. ಈ ರೀತಿಯ ಮರುಹಂಚಿಕೆಯ ಹೊಣೆಗಾರಿಕೆಯನ್ನು ನಿರ್ವಹಿಸಬೇಕಿರುವುದು ಜನರಿಂದ ಚುನಾಯಿತವಾದ ಶಾಸನ ಸಭೆಯಲ್ಲಿ ಬಹುಮತದ ಮೂಲಕ ರಚನೆಯಾಗುವ ಸರಕಾರ. ಜನ ಶಾಸನ ಸಭೆಗೆ ತಮ್ಮ ಪ್ರತಿನಿಧಿಗಳನ್ನು ಚುನಾಯಿಸುವಾಗ ತಮ್ಮನ್ನು ಹಿಂದುಳಿದಿರುವಿಕೆಗೆ ಕಾರಣವಾದ ವಿಷಯಗಳಿಂದ ಬಿಡುಗಡೆಗೊಳಿಸಿ, ಬೆಳೆಸಬಹುದಾದ, ಅವಕಾಶ ಕಲ್ಪಿಸಿ ಘನತೆಯ ಬದುಕು ಕಟ್ಟಿಕೊಳ್ಳಲು ಸೂಕ್ತ ಪರಿಸರ ಮತ್ತು ಪರಿಕರ ಸೃಷ್ಟಿಸುವ ಕುರಿತು ಕಾರ್ಯಸೂಚಿಯಂತೆ ಕೆಲಸ ಮಾಡಬಲ್ಲವರಿಗೆ ಅವಕಾಶ ನೀಡಬೇಕಿದೆ. ಈ ಕುರಿತು ಜನರನ್ನು ಎಚ್ಚರಿಸುವ ಮತ್ತು ಸೂಕ್ತ ಶಿಕ್ಷಣ ನೀಡುವ ಕೆಲಸ ನಾಗರೀಕ ಸಂಘಟನೆಗಳು, ಸಮುದಾಯ ಮತ್ತು ಬುದ್ಧಿಜೀವಿಗಳಿಂದ ಆಗಲೇ ಬೇಕಾದದ್ದು ಅನಿವಾರ್ಯ.

ನಾರಾಯಣ ಗುರುಗಳು

ಬ್ರಹ್ಮ ಶ್ರೀ ನಾರಾಯಣ ಗುರುಗಳ ದೂರದೃಷ್ಟಿ, ಸಮಾಜಮುಖಿ ಚಿಂತನೆ ಈ ನಿಟ್ಟಿನಲ್ಲಿ ಸದಾ ಕಾಲ ನೆನಪಿಡುವಂತಹುದು. ಸಂಘಟನೆಯಿಂದ ಶಕ್ತಿ ಪಡೆದು ಶಿಕ್ಷಣದ ಮೂಲಕ ಮುಕ್ತಿ ಪಡೆಯುವ ಮಾತನ್ನು ಅವರು ಹೇಳಿದರು. ಅವರ ಚಿಂತನೆಯ ಫಲವಾಗಿ ಕೇರಳದ ಜನ ಸಮುದಾಯ ಇಂದಿಗೂ ವೈಚಾರಿಕತೆಯ ಕಾರಣದಿಂದ ದೇಶದಲ್ಲಿಯೇ ಅಭಿವೃದ್ಧಿಯಲ್ಲಿ ಸಾಲಿನಲ್ಲಿ ಮೊದಲಿಗರಾಗಿ ಉಳಿದಿದ್ದಾರೆ. ಅಭಿವೃದ್ಧಿಯಲ್ಲಿ ಇತರರಿಗಿಂತ ಮುಂದಿರುವ ಜನತೆ ಸಂಪತ್ತು ಸೃಷ್ಟಿ, ಉದ್ಯಮಶೀಲತೆಯಲ್ಲಿ ಗಟ್ಟಿಯಾದ ಹೆಜ್ಜೆಗಳನ್ನೂರಿದರೂ ವೈಚಾರಿಕವಾಗಿ ಜಾರು ನೆಲದಲ್ಲಿಯೇ ಇದ್ದು ಒದ್ದಾಟ ನಡೆಸುತ್ತಿರುವ ಉದಾಹರಣೆಗಳು ಬೇಕಾದಷ್ಟಿವೆ.

ವೈಚಾರಿಕತೆಯನ್ನು, ವೈಜ್ಞಾನಿಕ ಚಿಂತನೆಯನ್ನು ಪ್ರೋತ್ಸಾಹಿಸಬೇಕಾದ ವಿಶ್ವವಿದ್ಯಾನಿಲಯ, ಉನ್ನತ ಶಿಕ್ಷಣ ವಲಯಗಳು ಯುವಕರಲ್ಲಿ ಪ್ರಶ್ನಿಸುವ, ವಿಚಾರ ವಿಮರ್ಶೆ ಮಾಡುವ ಸಂಸ್ಕೃತಿಯಿಂದ ನಿಧಾನವಾಗಿ ವಿಮುಖವಾಗುತ್ತಿವೆ. ತೋಳ್ಬಲ, ಧನಬಲದ ಮುಂದೆ ಸಾಂವಿಧಾನಿಕ ಆಶಯಗಳು ಹಾಗೂ ಪ್ರಶ್ನಿಸುವ ಮನೋಭಾವ ಮಂಡಿಯೂರುತ್ತಿದೆ. ಹಿಂದಿನ ಸರಕಾರದ ಅವಧಿಯಲ್ಲಿ ಬಲಪಂಥೀಯ ಸಂಘಟನೆಯ ಆಟಾಟೋಪ, ಕೇವಲ ಜಾತಿಯ ಆಧಾರದಲ್ಲಿ ತಪ್ಪು ಒಪ್ಪುಗಳನ್ನು ಪೂರ್ವಗ್ರಹ ಪೀಡಿತರಾಗಿ (ಅದರಲ್ಲಿಯೂ ವಿಶೇಷವಾಗಿ ಮುಸ್ಲಿಮರ ವಿರುದ್ಧ) ನೋಡುವ ಮನೋಭಾವ ವ್ಯಾಪಕವಾಗಿ ಹರಡಿಕೊಂಡಿತ್ತು. ಶೈಕ್ಷಣಿಕ ಸಂಸ್ಥೆಗಳು ಸುಲಭವಾಗಿ ಪರಿಹರಿಸಿಕೊಳ್ಳಬಹುದಾದ ಅನೇಕ ವಿಷಯಗಳು, ರಾಜಕೀಯ ಹಿತಾಸಕ್ತಿಯ ಪರಿಣಾಮವಾಗಿ ಸಮಾಜದಲ್ಲಿ ಕೋಮುದ್ವೇಷ ಹರಡಲು ಅಸ್ತ್ರಗಳಾದುವು. ಹಿಜಾಬ್, ಸಮವಸ್ತ್ರ ಸಂಹಿತೆ, ವಿದ್ಯಾಸಂಸ್ಥೆಗಳಲ್ಲಿ ಯಾರನ್ನ ಅತಿಥಿಗಳಾಗಿ ಆಹ್ವಾನಿಸಬೇಕೆನ್ನುವ ವಿಷಯಗಳು ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ “ಸದ್ಯದ ಸಂಶೋಧನೆಯ” ವಿಷಯಗಳಾಗುತ್ತಿವೆ.

ಡಾ. ಮೀನಾ ಕಂದಸ್ವಾಮಿಯವರು ತಮ್ಮ ಮಾತಿನಲ್ಲಿ ದೇವಸ್ಥಾನಗಳಿಗಿಂತಲೂ ಹೆಚ್ಚು ವಿಶ್ವವಿದ್ಯಾನಿಲಯಗಳು ಅಸಮಾನತೆಯನ್ನು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿವೆ ಎನ್ನುವುದನ್ನು ಪ್ರಸ್ತಾಪಿಸಿದರು. ನಾವು ದೇವಾಲಯಗಳಿಗೆ ಹೋಗದೇ ಇರಬಹುದು ಆದರೆ ವಿದ್ಯಾಲಯಗಳಿಗೆ ಹೋಗದೆ ಇರಲಾಗದು. ವಿದ್ಯಾಲಯಗಳಲ್ಲಿ ಆಗುತ್ತಿರುವ ಶೋಷಣೆಗಳು ಈ ಕಾರಣದಿಂದಾಗಿಯೇ ಹೆಚ್ಚು ಆಘಾತಕಾರಿ ಎನ್ನುವುದು ಡಾ.ಮೀನಾ ಅವರ ಅಭಿಪ್ರಾಯ. ಇಪ್ಪತ್ತು ವರ್ಷದ ಹಿಂದೆ ಶೋಷಿತ ಸಮುದಾಯದಿಂದ ಬಂದ ತನ್ನ ತಾಯಿಯವರು ಎತ್ತಿರುವಂತಹ ಐ.ಐ.ಟಿಗಳಲ್ಲಿ ಸಾಮಾಜಿಕ ನ್ಯಾಯದ ಪ್ರಶ್ನೆ ಇಂದು ಮುಖ್ಯವಾಹಿನಿಯ ರಾಜಕೀಯ ಪಕ್ಷಗಳಿಗೆ ಮನವರಿಕೆಯಾದಂತಿದೆ ಎನ್ನುವುದರ ಮೂಲಕ ಸಮಸ್ಯೆಯ ಗಂಭೀರತೆಯನ್ನು ತಿಳಿಸಲು ಯತ್ನಿಸಿದರು.

ಇದು ನಮ್ಮೆಲ್ಲರನ್ನು ತಟ್ಟಬೇಕಾದ ಮತ್ತು ನಾವೆಲ್ಲರೂ ನಮ್ಮನ್ನು ಕೇಳಿಕೊಳ್ಳಬೇಕಾದ ಪ್ರಶ್ನೆಗಳೇ ಆಗಿವೆ. ಇಂದು ಸಾರ್ವಜನಿಕ ಶಿಕ್ಷಣ ಸಂಸ್ಥೆಗಳು ಎದುರಿಸುವ ಗಂಭೀರ ಬಿಕ್ಕಟ್ಟುಗಳಿಗೆ ಮೇಲ್ನೋಟಕ್ಕೆ ಗೋಚರಿಸುವ ಕಾರಣಗಳ ಆಚೆಗೆ ಇಂತಹ ಪರಿಸ್ಥಿತಿ ಯಾಕಾಗಿದೆ? ಈಗಾಗಲೇ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಖಾಸಗೀ ಬಂಡವಾಳದ ಹಿಡಿತ ಬಿಗಿಯಾಗುತ್ತಿದೆ. ಖಾಸಗೀ ವಲಯದಲ್ಲಿ ಸಾಮಾಜಿಕ ನ್ಯಾಯದ ಪ್ರಶ್ನೆಗೆ ಯಾವ ಮಟ್ಟದ ಮನ್ನಣೆ ಸಿಗುತ್ತಿದೆ? ಇದರ ಹಿಂದಿನ ಕಾರಣವೇನು? ಜನಪ್ರತಿನಿಧಿಗಳ ಆಯ್ಕೆಯ ಸಾಂವಿಧಾನಿಕ ಕಾರ್ಯವೂ ಇಂದು ಹೂಡಿಕೆಯ ಕ್ಷೇತ್ರವಾಗಿ ಮಾರ್ಪಡುತ್ತಿದೆ. ಕರ್ನಾಟಕದ 224 ಜನ ಶಾಸಕರ ಆಯ್ಕೆಯಾಗುವಾಗ ಒಂದು ಅಂದಾಜಿನ ಪ್ರಕಾರ ಹದಿನೈದು ಸಾವಿರ ಕೋಟಿಯಷ್ಟು ಖರ್ಚಾಗುತ್ತದೆ ಅಂದರೆ, ಜನನಾಯಕನೊಬ್ಬ ಎಷ್ಟೇ ಜನಪರವಾಗಿದ್ದರೂ, ನೀತಿವಂತನಾಗಿದ್ದರೂ ಹಣವಂತನಾಗಿರದಿದ್ದರೆ ಆಯ್ಕೆ ಬಿಡಿ, ಚುನಾವಣೆಗೆ ನಿಲ್ಲೋ ಮಾತೇ ಇಲ್ಲ. ಇನ್ನು ನಾಡಿನ ಪ್ರಜ್ಞೆಯಾಗಬೇಕಾದಂತ ಶಿಕ್ಷಕರು, ವಿಜ್ಞಾನಿಗಳು, ಲೇಖಕರು, ಆಡಳಿತಗಾರರನ್ನು ರೂಪಿಸಬೇಕಿರುವ ವಿಶ್ವವಿದ್ಯಾನಿಲಯದ ಕುಲಪತಿಗಳಾಗಲೂ ಜಾತಿ ಬಲದೊಂದಿಗೆ, ಹತ್ತಾರು ಕೋಟಿಗಳ ನಿಧಿಯೂ ಅಗತ್ಯವಿರುವ ಸಮಾಜದಲ್ಲಿ ನಾವಿದ್ದೇವೆ. ಸಾಮಾಜಿಕ ವಿನ್ಯಾಸಕ್ಕೆ ಸಂಬಂಧ ಪಟ್ಟ ಈ ರೀತಿಯ ಜಾತಿಯ ಎಲ್ಲ ಪ್ರಶ್ನೆಗಳನ್ನು ಎತ್ತುವ ಮತ್ತು ಅವುಗಳಿಗೆ ಸೂಕ್ತ ಉತ್ತರದತ್ತ ಮುಟ್ಟುವ  ಗಂಭೀರವಾದ ಪ್ರಯತ್ನಗಳು ಆಗಬೇಡವೇ?

ಈ ಮೇಲಿನ ಯಾವುದೂ ನಮಗೆ ಅಪಾಯಕಾರಿ ದುರಂತದೆಡೆಗೆ ನಮ್ಮನ್ನು ದೂಡುತ್ತಿದೆ ಎಂದು ಅನಿಸುತ್ತಿಲ್ಲ. ಆದರೆ ಸಮಾಜದಲ್ಲಿ ನೋವು, ಅವಮಾನ, ಹಿಂಸೆಯನ್ನು ಅನುಭವಿಸುತ್ತಲೇ ಸಂವಿಧಾನ ಕೊಡಮಾಡಿದ ಅವಕಾಶ ಪಡೆದು ಪ್ರಜಾಸತ್ತಾತ್ಮಕ ರೀತಿಯಲ್ಲೇ ಹೋರಾಟ ಮಾಡಿ ತಮ್ಮ ಧ್ವನಿಯನ್ನು ಸಮಾಜಕ್ಕೆ ತಲುಪಿಸಲು ಪ್ರಯತ್ನ ಪಡುವವರು ಕೇಳುವ ಪ್ರಶ್ನೆಗಳು ಇವತ್ತು ಯಾಕೆ ಅಪಾಯಕಾರಿಯಾಗಿ ಕಂಡುಬರುತ್ತಿವೆ? ನಮ್ಮ ಅಭಿವೃದ್ಧಿಯ ವಿನ್ಯಾಸದಲ್ಲಿರುವ ದೋಷಗಳಿಗೆ ಬೆಲೆ ತೆರುತ್ತಿರುವ ಜನ ನಮ್ಮ ನೋವನ್ನು ಕಡಿಮೆ ಮಾಡಿ, ತೆರಿಗೆಯ ಭಾರವನ್ನು ಕಡಿಮೆ ಮಾಡಿ, ಬದುಕು ಕಟ್ಟಿಕೊಳ್ಳಲು ಸರಿಯಾದ ಅವಕಾಶ ನೀಡಿ ಎಂದು ಕೇಳುವುದನ್ನೂ ಅಪರಾಧವಾಗಿ ಮಾಡುವ ಪರಿಸ್ಥಿತಿ ಯಾಕೆ ಇದೆ? ನ್ಯಾಯ ಕೇಳಿ ನ್ಯಾಯಾಲಯಕ್ಕೆ ಹೋದರೆ, ಹೋರಾಟ ಬಲಾಢ್ಯರ ವಿರುದ್ಧವಿರುವಂತಹ ಬಹುತೇಕ ಸಂದರ್ಭಗಳಲ್ಲಿ ನ್ಯಾಯಾಧೀಶರೇ ವಿಚಾರಣೆಯ ಜವಾಬ್ದಾರಿ ವಹಿಸಲು ಹಿಂದೇಟು ಹಾಕುತ್ತಿರುವ ಪ್ರಸಂಗಗಳು ಸೃಷ್ಟಿಯಾಗುತ್ತಿರುವುದು ಯಾಕಾಗಿ? ಆದಾಯ ತೆರಿಗೆ, ಜಾರಿ ನಿರ್ದೇಶನಾಲಯಗಳ ದಾಳಿಗೊಳಗಾದ ರಾಜಕಾರಣಿಗಳು ಪಕ್ಷ ಬದಲಿಸಿ, ಪಥ ಬದಲಿಸಿದ ತಕ್ಷಣ ಅಪರಾಧ, ನಿರಪರಾಧವಾಗುವ ವಿದ್ಯಮಾನಗಳ ಹಿಂದೆ ಯಾವ ಶಕ್ತಿ ಇದೆ? ಯಾರ ಹಿತಾಸಕ್ತಿ ಇದೆ? ನಮ್ಮನ್ನು ಕಾಯುವ ದೇವರು, ದೇವತೆಗಳು ಕೋವಿಡ್ ಕಾಲದಲ್ಲಿ ನಿಸ್ಸಹಾಯಕರಾಗಿ, ತನ್ನವರಿಂದ ಸಂಸ್ಕಾರ ಮಾಡುವ ಅವಕಾಶದಿಂದಲೂ ವಂಚಿತರಾದ ಮೃತದೇಹಗಳ ನಿರ್ಗಮಿತ ಆತ್ಮಗಳು ಮಾಡಿದ್ದ ಪಾಪದ ಸ್ವರೂಪವೇನು? ದೇವರ ಹೆಸರಲ್ಲಿ, ಸಂವಿಧಾನದ ಹೆಸರಲ್ಲಿ ನ್ಯಾಯ ಪಕ್ಷಪಾತಿಯಾಗಿ ಕರ್ತವ್ಯ ನಿರ್ವಹಿಸಿ ಸತ್ಯದ ಸ್ವರೂಪವಾಗುತ್ತೇನೆಂದು ಪ್ರಮಾಣ ಮಾಡಿ ಸಮಾಜದಿಂದ ಗೌರವ, ಮಾನ್ಯತೆ ಪಡೆದು ನ್ಯಾಯಾಧಿ ದೇವತೆಗಳಾಗಿ ಕರ್ತವ್ಯ ಮಾಡಿದಂತಹ ನ್ಯಾಯಾಧೀಶರುಗಳು ಬದುಕಿನ ಮುಸ್ಸಂಜೆಯಲ್ಲಿ ಪೊಗದಸ್ತು ಫಲ ನೀಡುವ ಮರದ ನೆರಳಿಗೆ ನಡೆಯುವುದರ ಹಿಂದಿನ ಮೋಡಿಯೇನಿರಬಹುದು? ಇಂತಹ ನೂರಾರು ಸಾವಿರಾರು ಪ್ರಶ್ನೆಗಳು ಬಿಡದೆ ಕಾಡುವಾಗ ಅದನ್ನು ಸಮಾಜಕ್ಕೆ ವರ್ಗಾಯಿಸುವ ಲೇಖನಿಗಳು, ಗನ್ನುಗಳಾಗಿ ಕಾಣುವುದು ಯಾರಿಗೆ?

ಸ್ವಾತಂತ್ರ್ಯ ಪಡೆದಾಗ ಈ ದೇಶ ನಮ್ಮದಾಗಿತ್ತು ನಮ್ಮ ಹಸಿವು ನೀಗದೇ ಹೋಗಿದ್ದರೂ ನಮಗೆ ಹಸಿವಾಗುತ್ತಿದೆ ಎನ್ನುವುದನ್ನು ಹೇಳಬಹುದಾಗಿತ್ತು. ನನ್ನಂತಹ ಹಲವು ಅದೃಷ್ಟವಂತರಿಗೆ ಹಸಿವೇ ಆಗದಿರುವಂತೆ ಈ ಸಮಾಜ ನೋಡಿಕೊಂಡಿದೆ. ನಮ್ಮ ಸುತ್ತಮುತ್ತಲಿನವರು ಇಂತಹ ಪ್ರಶ್ನೆಗಳನ್ನು ಎತ್ತಿದಾಗ ಯಾಕಿರಬಹುದು ಎನ್ನುವ ಕುತೂಹಲ ನಮ್ಮೊಳಗೂ ಇದೆ. ಬರುಬರುತ್ತಾ ಈ ಕುತೂಹಲಕ್ಕೂ ಸಕಾರಣವಿರಬೇಕು ಎನ್ನುವ ಪಾಠವನ್ನು ಹೇಳಲಾಗುತ್ತಿದೆ. ಇಂತಹ ದುರಿತ ಕಾಲವನ್ನು ದಾಟುವ ಬಗೆಯೇನು? ಡಾ. ಮೀನಾ ಅವರ ಮಾತುಕತೆಯ ಕಾರ್ಯಕ್ರಮಕ್ಕೆ ಸೂಕ್ತ ಸಾರ್ವಜನಿಕ ಸ್ಥಳಕ್ಕೂ ಕಷ್ಟಪಡಬೇಕಾದ ಪರಿಸ್ಥಿತಿ ನಮ್ಮದು ಎನ್ನುವುದೂ ವಾಸ್ತವ. ಯೋಚಿಸಲೇ ಬೇಕಾದ ಕಾಲ ಬಂದಿದೆ.

ಡಾ.ಉದಯ ಕುಮಾರ ಇರ್ವತ್ತೂರು

ವಿಶ್ರಾಂತ ಪ್ರಾಂಶುಪಾಲರು

ಇದನ್ನೂ ಓದಿ- ಪರಂಪರೆಯ ಮಾರ್ದನಿ ಮತ್ತು ಭವಿಷ್ಯದ ಮುನ್ನುಡಿ

More articles

Latest article