“ಒಂದು ಚೊಂಬ್ ಲ್ಲಿ ಮುಗ್ಸಿ ಬರೋ ಸಂಡಾಸಿಗೆ, ಟಾಲೆಟ್ ಮನಿ ಕಟ್ಕಂಡು, ಕೊಡಪಾನ್ ಗಟ್ಲೆ ನೀರಿಗ್ ಒದ್ದಾಡು ಅಂತಿರೇನು? ನಿಮ್ಮಂಗ ಮನಿ ಮನಿಗೂ ಒಂದೊಂದ್ ಬೋರ್ ವೆಲ್ಲೋ, ಬಾವಿನೋ ಇದ್ದು, ಅಂಗಳದಲ್ಲಿ ಸಾಕ್ ಬೇಕಾಗೊವಸ್ಟು ಜಾಗ ಇದ್ದಿದ್ರೆ ನಾವು ಟಾಲಿಟ್ ಮನೆ ಕಟ್ಕೋತಿದ್ವಿ”…. ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ದಿವ್ಯಶ್ರೀ ಅದರಂತೆಯವರ ಕಲಿಕಾ ಪ್ರವಾಸದ ಅನುಭವ ಕಥನ ಇಲ್ಲಿದೆ.
ಬೆಂಗಳೂರಿನ ಸೇಂಟ್ ಜೋಸೆಫ್ ಯೂನಿವರ್ಸಿಟಿಯಿಂದ ಹಿಂದಿನ ವರ್ಷ ಜುಲೈ ತಿಂಗಳು outreach ಗೆಂದು ರಾಯಚೂರಿಗೆ ಹೋಗಿದ್ದೆವು. ಜುಲೈ ತಿಂಗಳು ಮಳೆಗಾಲದ ತಿಂಗಳಾದರೂ ಸಹ, ರಾಯಚೂರಿನ ಬಿರುಬಿಸಿಲು ನಮ್ಮನ್ನೆಲ್ಲ ಕಂಗೆಡಿಸಿತ್ತು. ಇದ್ದಿದ್ದು ಮೂರು ದಿನ ಮಾತ್ರ, ಆದರೆ ಅಲ್ಲಿನ ಅನುಭವ ನೂರು ದಿನದಷ್ಟಾಗಿತ್ತು.
ನಾವು ಹೋಗಿ ಇಳಿದದ್ದು ರಾಯಚೂರಿನ ಮಾನ್ವಿ ತಾಲೂಕಿನ ಉಮಳಿ ಹೊಸೂರು ಎಂಬ ಪುಟ್ಟ ಹಳ್ಳಿಯಲ್ಲಿ. ಆ ಹಳ್ಳಿ ಅಕ್ಷರಶಃ ಹಳ್ಳಿಯಾಗಿಯೇ ಇತ್ತು. ಸಂಧಿಗಳಲ್ಲಿ ಕಟ್ಟಿಕೊಂಡ ತಗಡಿನ ಮನೆಗಳು, ಮನೆಯ ಅಂಗಳದಲ್ಲೆ ಹರಿದು ಹೋಗುವ ಕೊಚ್ಚೆ ನೀರು, ಅದೇ ಅಂಗಳದಲ್ಲೆ ಕುಡಿಯುವ ನೀರಿಗೆಂದು ಮಾಡಿದ್ದ ನಳ, ಅಲ್ಲೇ ಸ್ನಾನಕ್ಕೆಂದು ಹಾಕಿದ್ದ ಚಪ್ಪಡಿ ಕಲ್ಲು, ಆ ಕಲ್ಲಿನ ಮೇಲೇ ಬಟ್ಟೆ, ಪಾತ್ರೆ ಮತ್ತು ದನ ಕರುಗಳಿಗೂ ಸ್ನಾನ!
ನಾವು ಹೋದವರು ಸುಮಾರು ಎಂಬತ್ತು ವಿದ್ಯಾರ್ಥಿಗಳು, ಅದರಲ್ಲಿ ಪೂರ್ತಿ ಕನ್ನಡ ಬರುತ್ತಿದ್ದದ್ದು ಮೂವರಿಗೆ, ಬಟ್ಲರ್ ಕನ್ನಡ ಮಾತಾಡುವವರು ಒಂದತ್ತು ಮಂದಿ. ಕಾಲೇಜಿನಲ್ಲಿ ಬರೀ ಇಂಗ್ಲಿಷ್ ಮಾತಾಡಿ ಸಾಕಾಗಿ ಹೋಗಿದ್ದ ನನಗೆ, ಅಲ್ಲಿನ ಊರಿನ ಜನರೊಟ್ಟಿಗೆ ಪೂರ್ತಿ ಮೂರು ದಿನ ಕನ್ನಡದಲ್ಲೇ ಮಾತಾಡ ಬೇಕಾಗಿದ್ದು ಎಲ್ಲಿಲ್ಲದ ಸಂತೋಷ ತಂದಿತ್ತು. ಇನ್ನೊಂದ್ ಖುಷಿ ಎಂದರೆ ನನಗೆ ಪೂರ್ತಿ ಕನ್ನಡ ಬರುತ್ತಿದ್ದರಿಂದ ನನ್ನ ಟೀಮಿಗೆ ಕನ್ನಡಲ್ಲೇ ನಾಟಕ ಕಲಿಸಬೇಕಿತ್ತು ಮತ್ತು ಆ ಹಳ್ಳಿಯ ಮಕ್ಕಳೊಟ್ಟಿಗೆ ರ್ಯಾಲಿಯನ್ನು ನಾನೇ ಮುನ್ನಡೆಸಬೇಕಿತ್ತು.
“ಯವ್ವಾ ತಂಗಿ ನೀನರು ಕನ್ನಡ ಮಾತಾಡ್ತಿಯಲ್ಲೇ ಯವ್ವಾ, ಬಾರೀ ಕುಸಿ ಆತು ನೋಡ್ ನಮ್ಗ.. ನಿನ್ ಪಿರೆಂಡ್ಸ್ ಟಸಲೆ -ಪುಸಲೇ ಅನ್ನದು ನಮ್ಗ್ ಹೆಂಗ್ ತಿಳಿಬೇಕೆ ಯವ್ವಾ” ಅಂತ ಅಲ್ಲಿನ ಅವ್ವಂದಿರು ಬಂದು ತಬ್ಬಿ ಮುತ್ತಿಟ್ಟಿದ್ದು ಸ್ವರ್ಗಕ್ಕೆ ಎರಡೇ ಗೇಣು ಅನ್ನೋ ಹಾಗಿತ್ತು.” ನಮ್ ಕೂಡ ಬಾ ನೀನು, ನಿಂಗ್ ನಮ್ ಇಡೀ ಊರ್ ತೋರಿಸ್ತೀವಿ” ಅಂತ ಕೈಹಿಡಿದು ನಡೆದೇಬಿಟ್ಟರು. ಸುಮಾರು ಮೂರ್ನಾಲ್ಕು ತಾಸು ಅವರೊಟ್ಟಿಗೆ ಇಡೀ ಊರು ಸುತ್ತಿ ಬಂದ್ವಿ.
“ಅವ್ವ ಇಲ್ಲಿ ಟಾಯ್ಲೆಟ್ ಎಲ್ಲಿ ಐತಿ, ಸುಸ್ಸು ಹೋಗ್ಬೇಕು” ಅಂದೆ, ಒಬ್ಬ ಅವ್ವ ಇನ್ನೊಬ್ಬ ಅವ್ವನ ಮುಖ ನೋಡಿ ನಕ್ಕು ” ಅಲ್ಲೇ ತಂಗಿ ನಮ್ಮೂರ್ ಏನ್ ನಿಮ್ ಬೆಂಗಳೂರು ಅನ್ಕೊಂಡಿಯೇನು? ಇಲ್ಲಿ ಟಾಲೇಟ್ ಗೀಲೇಟ್ ಎಲ್ಲ ಏನೂ ಇಲ್ಲಾ, ಅದುನ್ನೆಲ್ಲ ಕಟ್ಟಾಕೆ ನಮ್ ಅಂಗಳದಲ್ಲಿ ಜಾಗನು ಇಲ್ಲಾ, ಮನೆ ಒಳಗೆ ಟಾಲೆಟ್ ಕಟ್ಕೊಂಡ್ ಹೊಲಸು ಜೀವ್ನ ನಡಸು ಅಂತಿಯೇನು ನೀನು” ಅಂತ ಹೇಳಿ ಸಂಜೆವರೆಗೂ ನನ್ನ ಹೊಟ್ಟೆ ಮತ್ತು ಬಾಯಿ ಎರಡನ್ನೂ ಕಟ್ಟಿಸಿಬಿಟ್ಟರು.
ಮುಂದೆ ಆ ಊರಿನ ಶಾಲೆಗೆ ಹೋಗಿ, ಒಂದು ತಾಸು ಮಕ್ಕಳೊಟ್ಟಿಗೆ ಸಮಯ ಕಳಿಬೇಕಿತ್ತು. ಕ್ಲಾಸಿನೊಳಗೆ ಹೊಕ್ಕಿದ್ದೇ ತಡ ಬೆಂಗ್ಳುರು ಹುಡ್ಗ ಹುಡ್ಗಿರು ನಮ್ ಸಾಲಿಗೆ ಬಂದಾರೆ ಅಂತ ಅಲ್ಲಿನ ಮಕ್ಕಳು ಕುಣಿದಿದ್ದೆ ಕುಣಿದಿದ್ದು. ಅವರನ್ನ ಸುಮ್ಮನಿರಿಸಲು ಒಂದು ಕತೆ ಹೇಳು ದಿವ್ಯ ಅಂತ, ನನ್ನನ್ನ ಐವತ್ತು ಮಕ್ಕಳೊಟ್ಟಿಗೆ ಒಂದು ಕ್ಲಾಸಿನಲ್ಲಿ ಬಿಟ್ಟು ಹೋದರು. ಮಕ್ಕಳನ್ನೆಲ್ಲ ಒಂದು ಹಿಡಿತಕ್ಕೆ ತಂದು ಕತೆ ಹೇಳಲು ಶುರುವಿಟ್ಟೆ.
ಕತೆಗೂ ಮುಂಚೆ ಒಂದು ಪ್ರಶ್ನೆ ಕೇಳ್ತೀನಿ, ಉತ್ತರ ಕೊಡಿ ಅಂತ,
“ನೀವೆಲ್ಲಾ ಎಲ್ಲಿ ನಂಬರ್ ಟೂ ಮಾಡ್ತೀರಿ?” ಅಂದೆ.
ಒಬ್ಬರ ಮುಖ ಒಬ್ಬರು ನೋಡಿ ಮುಖ ಹಿಸುಕಿಕೊಂಡರು ಆಮೇಲೆ ಒಬ್ಬ ಹುಡುಗ “ತಿಪ್ಪೆಗೆ ಹೊಕಿವಿ ಅಕ್ಕೋ” ಅಂದ.
ಸರಿ ಅಂತ ಕತೆ ಶುರು ಮಾಡಿದೆ.
ನೀವು ಹೋಗೋ ತಿಪ್ಪೆಲಿ ಒಂದು ನೊಣದ ಸಂಸಾರ ಇದೆ ಆಯ್ತಾ. ಆ ನೊಣಗಳೆಲ್ಲ ದಿನಾ ನಿಮ್ಮ ಕಕ್ಕದ ಮೇಲೇ ಕೂತು ಆಟ ಆಡ್ತವೆ, ಹಂಗೇ ಆಟ ಆಡಿ ಸುಸ್ತಾಗಿ, ಊರೊಳಗೆ ಒಂದು ಟ್ರಿಪ್ ಹೋಗಿ ಬರೋಣ ಅಂತ ನಿಮ್ ಮನೆಗೆಲ್ಲ ಬರ್ತವೆ. ನಿಮ್ ಅಮ್ಮ ಚಂದ ಮಾಡಿಟ್ಟಿರೋ ತಿಂಡಿ ಮೇಲೇ ಕೂತು ಆಟ ಆಡೋಣ ಅಂತ ಕೂತ್ಕೋತಾವೇ. ಆಗ ನೊಣದ ಕಾಲಲ್ಲಿ ಇದ್ದ ಕಕ್ಕ, ನೀವು ತಿನ್ನೋ ತಿಂಡಿ ಮೇಲೂ ಅಂಟಿಕೊಳ್ಳುತ್ತೆ, ಆಮೇಲೆ ಅದೇ ತಿಂಡಿನ ಆಹಾ ಅಂತ ನೀವೂ……..
“ಅಕ್ಕೋ ನಿಲ್ಸಕ್ಕೋ” ಮಾತು ಬಂತು ಒಂದು ಮಗುವಿನಿಂದ.
ಅಯ್ಯೋ ಅಕ್ಕಾ ಇದೆಲ್ಲಾ ನಿಜಾನಾ? ನಾವು ನಮ್ಮ ಕಕ್ಕನಾ ತಿ…… ಎರಡನೇ ಮಗು.
ಹಂಗಿದ್ರೆ ನಾವೆಲ್ಲಿ ಕಕ್ಕ ಮಾಡ್ಬೇಕು? ನಮ್ಮೂರಲ್ಲಿ ಎಲ್ಲರೂ ಹೋಗೋದು ತಿಪ್ಪೆಗೆನೆ..ಮೂರನೇ ಹುಡುಗ..
ಏನಿಲ್ಲ ಕಣೋ.. ನಿಮ್ ಶಾಲೇಲಿ ಶೌಚಾಲಯ ಇದಿಯಲ್ಲ ಅದೇ ತರದ್ದು ಒಂದು ಸಣ್ಣ ಶೌಚಾಲಯ ನಿಮ್ ಮನೇಲೂ ಕಟ್ಟಿಸಿದ್ರೆ ಆತು. ಆಮೇಲೆ ನೊಣನು ಬರಲ್ಲ, ನೀವೂ ನಿಮ್ಮ ಕಕ್ಕನೆ ತಿ ……ಪರಿಸ್ಥಿತಿ ಇರಲ್ಲ ಅಂದೆ.
ಒಬ್ಬ ಹುಡುಗಿ ಎದ್ದು ಅಕ್ಕಾ ಸಂಜೆ ಮನಿಗ್ ಹೋಗಿ, ನಮ್ ಅಪ್ಪನ್ ಹತ್ರ ಈ ಕತೆ ಹೇಳ್ತಿನಿ, ಟಾಲೆಟ್ ಕಟ್ಟು ಅಂತೀನಿ ಅಂದ್ಲು.
ಇನ್ನೊಬ್ಬಳು “ಅಕ್ಕ ಈ ಟಾಲೆಟ್ ಕಟ್ಟಕೆ ಎಸ್ಟ್ ದುಡ್ಡು ಬೇಕು?
ನಮ್ಮವ್ವ ಕೂಲಿ ಕೆಲ್ಸಕ್ಕೆ ಹೋಕಳೆ, ನಮ್ ಅಪ್ಪ ಕುಡುದು ದುಡ್ಡು ಕೊಡು ಅಂತ ನಮ್ಮವ್ವನ ಹೊಡೀತಾನೆ, ಅವಳ್ ಹತ್ರ ಬರೀ ಎಲ್ಡ್ ಸಾವ್ರ ಆಟೇ ಇರ್ಬೋದು ” ಅಂದ್ಲು.
ಅಷ್ಟೊತ್ತಿಗೆ ಮಧ್ಯಾಹ್ನ ಊಟಕ್ಕೆ ಬೆಲ್ ಆಗಿದ್ರಿಂದ ಮಕ್ಕಳೆಲ್ಲ ತಟ್ಟೆ ಬಡಿತಾ ಓಡಿ ಹೋದರು.
ನಮ್ಮ ಕಾಲೇಜಿನ ಹುಡುಗ ಹುಡುಗಿರೆಲ್ಲಾ ಒಟ್ಟಿಗೆ ಊಟಕ್ಕೆ ಕೂತೆವು. ಅವತ್ತು ನಮ್ಮ ಜೀವಮಾನದಲ್ಲೇ ತಿಂದಿರದಷ್ಟು ಖಾರದ ಊಟ!! ನಾವು ಕಣ್ಣು ಮೂಗುಗಳೆರಡರಲ್ಲು ನೀರು ಸುರಿಸೋದು ಕಂಡು, “ಗೊತ್ತಾಗಿಲ್ಲ ಕನ್ರವ್ವ, ದಿನ ಅಡಿಗೆ ಮಾಡೋಹಂಗೆ ಖಾರ ಹಾಕಿಬಿಟ್ವಿ” ಅಂತ ತಾವೇ ಸಕ್ಕರೆ ತಂದು ನಮ್ ಬಾಯಿಗೆ ಹಾಕಿದ್ರು ಅಲ್ಲಿನ ಅವ್ವಂದಿರು.
ಇನ್ನು ಊಟ ಮುಗಿದು ಹೊರಡಬೇಕು, ಒಬ್ಬ ಅವ್ವ ಬಂದು
“ಅಲ್ಲೇ ಯವ್ವಾ, ಗಂಡಸರ ಕೂಡೇ ಕುಂತು ನೀವು ಉಂಡ್ ಬಿಟ್ರಲ್ಲೇ! ಎಲ್ಲೇ ಆಗ್ಲಿ ಮೊದ್ಲು ಗಂಡಸರಿಗೆ ಊಟ ಕೊಡಬೇಕು, ಅವ್ರಿಗೆ ಮೊದ್ಲು ಕೈ ತೊಳಿಯಕೆ ಬಿಡಬೇಕು ನೀವೇನು ಹಿಂಗ್ ಅವರ್ ಕೂಡೇ ಕೂತು ಊಟ ಮಾಡ್ಬಿಟ್ರಲ್ಲ, ಇನ್ನಮುಂದ್ ಹಿಂಗ್ ಮಾಡೋಕ್ ಹೋಗಬ್ಯಾಡ್ರಿ ” ಅಂದ್ಲು.
“ನಮ್ ಕಾಲೇಜಲ್ಲಿ ಗಂಡು ಹೆಣ್ಣು ಇಬ್ಬರೂ ಒಂದೇ, ಯಾರನ್ನೂ ಭೇದ ಮಾಡಲ್ಲ ಅವ್ವಾ, ನಾವು ಹಿಂಗೇ ಇರ್ಬೇಕು ಅಂದೆ”..
“ಎಂತದೋ ಏನೋ ನೀವ್ ಬಾರೀ ವಿಚಿತ್ರ ಮಂದಿ ಬಿಡವ್ವಾ ಅಂತ ಇನ್ನೊಬ್ಬ ಅವ್ವ ದನಿ ಸೇರಿಸಿದ್ಲು”.
ನಾನು ನಗುತ್ತಲೇ ತುತ್ತು ಕೊಟ್ಟ ಅವ್ವಂದಿರ ಹಣೆಗೆ ಮುತ್ತಿಟ್ಟು ಅಲ್ಲಿಂದ ಹೊರಟೆ.
ಇಳಿ ಸಂಜೆ ಹೊತ್ತು, ನಾಕ್ ಜನ ಹಿರಿಯರು ಹರಟೆ ಹೊಡಿತಾ ಇದ್ರು. ನಾನು ಹೋಗಿ ಅವರೊಟ್ಟಿಗೆ ಕೂತು ಒಂದಿಷ್ಟು ಮಾತಾಡಿದೆ. ಸುಮ್ನೆ ಕುತೂಹಲಕೆಂದು “ನಿಮ್ದೇಲ್ಲ ಯಾವ ಪಕ್ಷ, ಯಾರಿಗ್ ವೋಟ್ ಹಾಕ್ತಿರಿ ಅಂದೆ “.
“ಯಾರಿಗ್ ವೋಟ್ ಹಾಕಿದ್ರೆ ಏನ್ ಬಂತವ್ವ, ಯಾವನು ನಮ್ಮೂರ್ ಕಡೆ ಒಂದ್ ಸರ್ತಿನೂ ಬಂದಿಲ್ಲ, ಬದುಕಿರೋ ಸತ್ತಿರೋ ಅಂತಾನೂ ಕೇಳಲ್ಲ, ಎಲೆಕ್ಷನ್ ಇದ್ದಗೊಂದ್ ಸುರ್ ಅಂತ ಕಾರಲ್ ಬಂದು ಚೂರ್ ಮಕ ತೋರ್ಸಿ ಹಂಗೇ ಗುಮ್ ಅಂತ ಹೊಂಟ್ ಬಿಡ್ತಾರೆ, ಅವ್ರೆಲ್ಲಾ ನಮ್ ನೆಲ್ದಾಗೆ ಕಾಲು ಇಟ್ಟಿಲ್ಲ, ಅವ್ರಿಗೆ ನಮ್ ನೆಲ ನಮ್ ಊರು ಅಂದ್ರೆ ಹೇಸಿಗೆ ಅಂತೆ ಕಣವ್ವ ” ಅಂತ ರಾಜಕಾರಣಿಗಳ ಅಸಡ್ಡೆಯನ್ನ ಬಿಚ್ಚಿಟ್ಟರು.
ನನ್ನಲ್ಲಿ ಒಂದೂ ಮಾತು ಇರಲಿಲ್ಲ, ಕತ್ತಲಾಗುತ್ತಿದ್ದರಿಂದ ನಾವು ಆ ಹಳ್ಳಿ ಬಿಟ್ಟು ಹೊರಟೆವು, ಮತ್ತೆ ನಮಗಾರಿಗೂ ಅಲ್ಲಿರಬೇಕೆಂದು ಅನಿಸುತ್ತಲೂ ಇರಲಿಲ್ಲ, ಅಲ್ಲಿ ನಮಗಾಗಿ ನೆಲವೂ ಇದ್ದಂತಿರಲಿಲ್ಲ.
ಮರುದಿನ ಮತ್ತೆ ಅದೇ ಊರಿನಲ್ಲಿ ನಮ್ಮ ಸಾಂಸ್ಕೃತಿಕ ಕಾರ್ಯಕ್ರಮಗಳ ಹಾವಳಿ. ನಾಟಕ, ಹಾಡು, ಡ್ಯಾನ್ಸ್ ಅಂತ ಊರಿನ ಬೀದಿಗಳಲ್ಲಿ ಕುಣಿದಿದ್ದೆ ಕುಣಿದಿದ್ದು. ಹಾಗೇ ಕುಣಿಯುವಾಗ, ಕಾಲಿಗೆ ಚಪ್ಪಲಿ, ಕೈಯಿಗೆ ಗ್ಲೌಸ್ ಗಳು ಕಂಪಲ್ಸರಿ ಹಾಕಲೇಬೇಕೆಂದು ನಮ್ಮ ಕಾಲೇಜಿನಿಂದ ಆದೇಶವಾಗಿತ್ತು. ನಮ್ಮ ಬಹುತೇಕ ನಾಟಕಗಳು ಸ್ವಚ್ಛತೆಯ ಬಗ್ಗೆ, ಮಾಲಿನ್ಯದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ, ಅರೋಗ್ಯ ಕಾಪಾಡಿಕೊಳ್ಳುವ ಮುನ್ನೆಚ್ಚರಿಕೆ ಬಗ್ಗೆಯೇ ಇದ್ದವು. ನಮ್ಮ ನಾಟಕ ಮುಗಿದಿದ್ದೆ ತಡ, ನಾಲ್ಕೈದು ಅಮ್ಮಂದಿರು, ಐದಾರು ಗಂಡಸರು ತಮ್ಮ ಮಕ್ಕಳ ಕೈ ಹಿಡಿದು ನಮ್ಮ ಕಡೆ ಬಂದರು.
“ತಂಗಿ, ನೀವೇನೋ ಪ್ಯಾಟೆ ಮಂದಿ, ಕಿಲಿನು, ಕಿಲಿನು (ಕ್ಲೀನ್ ) ಅಂತ ಪದೇ ಪದೇ ಕೈ ಕಾಲು, ಮೈ ತೊಳೀತೀರಿ. ಆದ್ರ ನಮ್ಮ ಬದ್ಕು ಹಂಗಲ್ಲೇ ಯವ್ವಾ, ಕುಡಿಯೋ ನೀರ್ ಬೇಕು ಅಂದ್ರ ಮೈಲ್ ಗಟ್ಲೆ ನಡ್ಕಂಡ್ ಹೊಕಿವಿ, ಇನ್ನು ಮೈ ಕೈ ತೊಳಿಯಕೆ ಈ ನಳದಲ್ಲೇ ಬರೋ ಚೂರು ಪಾರು ನೀರ್ ಹಿಡ್ಕೋತೀವಿ. ಬ್ಯಾಸಗೆ ಬಂತ್ ಅಂದ್ರ ನಮ್ ಪಡಿಪಾಟ್ಲಾ ಕೇಳೋದೇ ಬ್ಯಾಡ ನೋಡು, ವಾರಕ್ಕೆ 2 ಸಲ ಮೈ ತೊಳ್ಕಂಡ್ರೆ ಹೆಚ್ಚಾತು. ಅಂತದ್ರಲ್ಲಿ ಒಂದು ಚೊಂಬ್ ಲ್ಲಿ ಮುಗ್ಸಿ ಬರೋ ಸಂಡಾಸಿಗೆ, ಟಾಲೆಟ್ ಮನಿ ಕಟ್ಕಂಡು, ಕೊಡಪಾನ್ ಗಟ್ಲೆ ನೀರಿಗ್ ಒದ್ದಾಡು ಅಂತಿರೇನು? ನಿಮ್ಮಂಗ ಮನಿ ಮನಿಗೂ ಒಂದೊಂದ್ ಬೋರ್ ವೆಲ್ಲೋ, ಬಾವಿನೋ ಇದ್ದು, ಅಂಗಳದಲ್ಲಿ ಸಾಕ್ ಬೇಕಾಗೊವಸ್ಟು ಜಾಗ ಇದ್ದಿದ್ರೆ ನಾವು ಟಾಲಿಟ್ ಮನೆ ಕಟ್ಕೋತಿದ್ವಿ. ನೀವು ಮಾಡಿದ್ರಲ್ಲ ನಾಟಕದಲ್ಲಿ, ಕಸ, ಸೊಳ್ಳೆ, ರೋಗ, ಕೊಳಚೆ ಅದು ಇದು ಅಂತ, ಅವು ನಮಿಗೂ ಗೊತ್ತು, ಮತ್ತೆ ಟಾಲಿಟ್ ಮನೆ ಕಟ್ಟಿಸ್ಕಿಬೇಕು ಅನ್ನೋ ಆಸೇನೂ ಐತಿ ಆದ್ರೆ ಟಾಲೆಟ್ ಮನೆ ಕಟ್ಟಕ್ ಒಂದಿಷ್ಟು ಜಾಗನು ಇಲ್ಲಾ, ಹಂಗೋ ಹಿಂಗೋ ಇದ್ದದ್ರಲ್ಲೇ ಕಟ್ಟೋಣ ಅಂದ್ರೆ, ಆಮೇಲೆ ನೀರಿಗ್ ಎಲ್ಲಿ ಪರದಾಡೋಣ ಹೇಳಿ? ನೀವ್ ಹೇಳಿದ್ ಕತೆ ಕೇಳಿ, ಮಕ್ಕಳೆಲ್ಲ ಟಾಲೆಟ್ ಮನಿ ಕಟ್ಟಿಸಿ ಅಂತ ಅಳಾಕ್ ಹತ್ಯಾವೇ. ಅವುಕ್ಕೆಲ್ಲ ನಮ್ ಪರಿಸ್ಥಿತಿ ಅರ್ಥ ಮಡ್ಕಿಳೋ ವಯಸ್ಸಿಲ್ಲ. ಹೆಂಗಾರು ಮಾಡಿ, ಅವುಕ್ಕೆ ನೀವೇ ಸಮಾಧಾನ ಮಾಡಿ ಹೋಗ್ರಿ” ಅಂತ ತಮ್ಮ ಅಳಲನ್ನ ನಮ್ಮ ಮುಂದಿಟ್ಟರು.
ಅಲ್ಲಿನ ಜನರ ಪರಿಸ್ಥಿತಿ ಬಗ್ಗೆ, ಹಿಂದೆ ಮುಂದೆ ಯೋಚಿಸದೆ, ನಾನು ಅಲ್ಲಿನ ಮಕ್ಕಳಿಗೆ ನೊಣದ ಕತೆ ಹೇಳಿದ್ದು ತಪ್ಪೆನಿಸಿತು. ಅವರ ಸಮಸ್ಯೆಗಳಿಗೆ ನಮ್ಮ ಕೈಯಲ್ಲಿ ಪರಿಹಾರಗಳೂ ಇರಲಿಲ್ಲ. ಕೊನೆಗೂ ಹೇಗೋ ಅಲ್ಲಿನ ಮಕ್ಕಳಿಗೊಂದಷ್ಟು ಸಮಾಧಾನ ಮಾಡಿ, ಅಲ್ಲಿನ ಜನರಲ್ಲಿ ಕ್ಷಮೆಯಾಚಿಸಿ ಆ ಊರಿಂದ ಬೀಳ್ಕೊಟ್ಟೆವು.
ಅಲ್ಲಿಗೆ ಹೋಗಿ ಬಂದು ಒಂದು ವರ್ಷವೆ ಕಳೆದು ಹೋಯ್ತು. ಇವತ್ತಿಗೂ ಅಲ್ಲಿನ ನೆನಪುಗಳು ಮನ ಕದಡುತ್ತವೆ.
ದಿವ್ಯಶ್ರೀ ಅದರಂತೆ
ಇಂಗ್ಲಿಷ್ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ
ಇದನ್ನೂ ಓದಿ- ಕಂಗನಾಗೆ ಮಾಡಿದ ಕಪಾಳ ಮೋಕ್ಷದ ಸದ್ದು ಮಾರ್ದನಿಸಬೇಕಿದ್ದುದು ಈ ಥರ..