ಅವಧಿ ಪೂರ್ಣಗೊಳಿಸುವುದಾಗಿ ಸಿದ್ದರಾಮಯ್ಯ ಅವರೇ ಹೇಳಿದ ಮೇಲೆ ಅನುಮಾನ ಏಕೆ?; ಪ್ರಿಯಾಂಕ್‌ ಖರ್ಗೆ

Most read

ಮೈಸೂರು: ಮುಖ್ಯಮಂತ್ರಿಯಾಗಿ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸುವುದಾಗಿ ಸಿದ್ದರಾಮಯ್ಯ ಅವರೇ ಹೇಳಿದ ನಂತರವೂ ಅನುಮಾನ ಪಡುವ ಅಗತ್ಯ ಇಲ್ಲ ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಇಂದು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರವಧಿ ಪೂರ್ಣಗೊಳಿಸುವುದು, ಬಜೆಟ್‌ ಮಂಡನೆ ಸೇರಿದಂತೆ ಎಲ್ಲ ವಿಷಯಗಳನ್ನು ಕುರಿತು ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಅದರ ಮೇಲೆ ನಾವು ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದರು.

ಕಾಂಗ್ರೆಸ್‌‍ ನಲ್ಲಿ ಎಲ್ಲರಿಗೂ ಅವಕಾಶ ನೀಡಲಾಗುತ್ತದೆ. ಯಾರನ್ನು ಮುಖ್ಯಮಂತ್ರಿ ಮಾಡಬೇಕು ಎಂಬುದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ. ಪಕ್ಷವು ಎಲ್ಲಾ ಸಮುದಾಯಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದೆ ಕಾಂಗ್ರೆಸ್‌ ನಲ್ಲಿ ಜಾತಿ ಆಧಾರಿತವಾದ ರಾಜಕಾರಣಕ್ಕೆಅವಕಾಶ ಇಲ್ಲ. ಆಯಾ ಸಮುದಾಯಗಳ ಆಶಯಕ್ಕೆ ಅನುಗುಣವಾಗಿ ಸಮಾನ ಅವಕಾಶಗಳನ್ನು ಕಲ್ಪಿಸಲಾಗುತ್ತಾ ಬರಲಾಗುತ್ತಿದೆ ಎಂದು ಸಚಿವರು ಹೇಳಿದರು.

ನಮ್ಮಿಂದಲೇ ಪಕ್ಷ ಎಂದು ಯಾರಾದರೂ ಭಾವಿಸಿಕೊಂಡಿದ್ದರೆ ಅದು ಅವರ ಭ್ರಮೆ ಮಾತ್ರ. ಕಾಂಗ್ರೆಸ್‌‍ ಪಕ್ಷ ಯಾವುದೇ ವ್ಯಕ್ತಿಯ ಶಕ್ತಿಯ ಮೇಲೆ ನಿಂತಿಲ್ಲ. ವ್ಯಕ್ತಿಗಾಗಿ ಅಥವಾ ವ್ಯಕ್ತಿಯಿಂದ ಕಾಂಗ್ರೆಸ್‌‍ ಇಲ್ಲ. ಕಾರ್ಯಕರ್ತರಿಗಾಗಿ ಕಾಂಗ್ರೆಸ್‌‍ ಪಕ್ಷವಿದೆ ಎಂಬುದನ್ನು ನಾವೆಲ್ಲರೂ ಅರಿತುಕೊಳ್ಳಬೇಕು ಎಂದರು.

ನಾಯಕತ್ವ ಹಾಗೂ ಪ್ರಗತಿ ನಿಂತ ನೀರಲ್ಲ, ಸದಾ ಹರಿಯುತ್ತಿರುತ್ತದೆ. ಹಿಂದೆ ದೇವರಾಜ್‌ ಅರಸ್‌‍ ಅವರು ಮುಖ್ಯಮಂತ್ರಿಯಾಗಿದ್ದರೆ ಈಗ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾರೆ. ಒಂದು ಕಾಲದಲ್ಲಿ ಕಾಂಗ್ರೆಸ್‌‍ ನಲ್ಲಿ ಜವಾಹರಲಾಲ್‌ ನೆಹರು, ಮಹಾತ್ಮಾ ಗಾಂಧಿ ಅವರು ಪ್ರಭಾವಿ ನಾಯಕರಾಗಿದ್ದರು. ಈಗ ಅದೇ ತತ್ವ ಸಿದ್ಧಾಂತಗಳ ತಳಹದಿಯ ಮೇಲೆ ರಾಹುಲ್‌ ಗಾಂಧಿ ಪ್ರತಿಪಕ್ಷದ ನಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ಚಿತ್ತಾಪುರದಲ್ಲಿ ಸಾಯುವವರೆಗೂ ನಾನು ಶಾಸಕನಾಗಿ ಇರಲು ಸಾಧ್ಯವೇ ಎಂದು ಪ್ರಶ್ನಸಿದ ಅವರು ಮುಂದಿನ ನಾಯಕತ್ವ ಬೆಳೆಸುವ ಜವಾಬ್ದಾರಿಯು ನಮ್ಮ ಮೇಲಿದೆ ಎಂದರು.

More articles

Latest article