ಬೆಂಗಳೂರು: ನಗರದಲ್ಲಿ ವ್ಹೀಲೀಂಗ್ ಮಾಡುತ್ತಾ ಸಂಚಾರ ನಿಯಮ ಉಲ್ಲಂಘಿಸುತ್ತಿರುವವರ ವಿರುದ್ಧ ಕಾರ್ಯಾಚರಣೆಯನ್ನು ನಗರ ಸಂಚಾರ ಪೊಲೀಸರು ಮುಂದುವರೆಸಿದ್ದಾರೆ. ಡಿಸೆಂಬರ್.28 ಮತ್ತು 29ರಂದು ವ್ಹೀಲಿಂಗ್ ಮಾಡುತ್ತಾ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಏಳು ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಇಂತಹ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಆಗ್ರಹಪಡಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಪಶ್ಚಿಮ ಸಂಚಾರ ವಿಭಾಗದ ಬ್ಯಾಟರಾಯನಪುರ, ಕೆಂಗೇರಿ, ಜ್ಞಾನಭಾರತಿ ಹಾಗೂ ಕಾಮಾಕ್ಷಿಪಾಳ್ಯ ಠಾಣೆಯ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಈ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಇಂದು ವರ್ಷದ ಕೊನೆಯ ದಿನವಾಗಿದ್ದು, ಎಲ್ಲೆಡೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಯಾರೊಬ್ಬರೂ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಪೊಲೀಸರ ಕೈಗೆ ಸಿಕ್ಕಿಬೀಳಬೇಡಿ. ಜಾಗೃತೆಯಿಂದ ವಾಹನ ಚಲಾಯಿಸಿ ಸುರಕ್ಷಿತವಾಗಿರಿ.