ಬೆಂಗಳೂರು: ಜೀವಕ್ಕೆ ಆತಂಕ ತೊಂದೊಡ್ಡುವ ವ್ಹೀಲಿಂಗ್ ನಂತಹ ಅಪಾಯಕಾರಿ ಚಟುವಟಿಕೆಗಳನ್ನು ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ವ್ಹೀಲಿಂಗ್ ಮಾಡುತ್ತಾ ಸಾರ್ವಜನಿಕರಿಗೆ ಭಯ ಹುಟ್ಟಿಸುತ್ತಿದ್ದ ಆರೋಪಕ್ಕೆ ಗುರಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ಕೊಪ್ಪಳ ಜಿಲ್ಲೆ ಗಂಗಾವತಿಯ ಅರ್ಬಾಜ್ ಖಾನ್ ಅಲಿಯಾಸ್ ಅರ್ಬಾಜ್ (29) ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ವ್ಹೀಲಿಂಗ್ ನಂತಹ ಅಪಾಯಕಾರಿ ವಾಹನ ಚಾಲನೆಯನ್ನು ನಿಯಂತ್ರಿಸಲು ಸದ್ಯ ಜಾರಿಯಲ್ಲಿರುವ ಕಾನೂನು ಸಾಲದು. ಈ ದಿಸೆಯಲ್ಲಿ, ಸರ್ಕಾರ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ–2023 (ಬಿಎನ್ ಎಸ್ ಎಸ್) ಮತ್ತು ಭಾರತೀಯ ಮೋಟಾರು ವಾಹನ ಕಾಯ್ದೆ–1988ಕ್ಕೆ ಕಠಿಣ ನಿಬಂಧನೆಗಳನ್ನು ಸೇರ್ಪಡೆಗೊಳಿಸುವ ಮೂಲಕ ಅಗತ್ಯ ತಿದ್ದುಪಡಿ ತರಬೇಕು ಎಂದು ನಿರ್ದೇಶನ ನೀಡಿದೆ.
ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ವ್ಹೀಲಿಂಗ್ ಎನ್ನುವುದು ಈಗ ಗ್ರಾಮೀಣ ಪ್ರದೇಶಗಳಿಗೂ ಲಗ್ಗೆಯಿಟ್ಟಿದೆ. ಇದನ್ನು ಸಾಹಸಮಯ ಸಾಧನೆ ಎಂದು ಯುವಜನಾಂಗ ನಂಬಿದೆ. ಆದರೆ ಇದರಿಂದಾಗುವ ಗಂಭೀರ ಹಾನಿಯ ಬಗ್ಗೆ ಅವರಿಗೆ ಅರಿವೇ ಇರುವುದಿಲ್ಲ. ಈ ಕೃತ್ಯದಲ್ಲಿ ತೊಡಗುವವರು ನಿಸ್ಸಂಶಯವಾಗಿ ಸಮಾಜದ ಸ್ವಾಸ್ಥ್ಯ ಮತ್ತು ನೆಮ್ಮದಿಗೆ ಭಂಗ ಉಂಟು ಮಾಡುತ್ತಿದ್ದಾರೆ ಎಂದು ನ್ಯಾಯಪೀಠ ಆತಂಕ ವ್ಯಕ್ತಪಡಿಸಿದೆ.
ಈ ಪ್ರಕರಣದಲ್ಲಿ ಅರ್ಜಿದಾರನಿಗೆ ಜಾಮೀನು ನೀಡಬಹುದಾಗಿದೆ. ಆದರೆ, ಈತನಿಗೆ ವ್ಹೀಲಿಂಗ್ ಮಾಡುವುದು ಹವ್ಯಾಸವಾಗಿದೆ ಎನ್ನುವುದು ಪ್ರಾಸಿಕ್ಯೂಷನ್ ವಾದದಿಂದ ದೃಢಪಟ್ಟಿದೆ. ಹಾಗಾಗಿ, ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದ ಮಾತ್ರಕ್ಕೆ ಜಾಮೀನು ನೀಡಬೇಕು ಎಂದೇನೂ ಇಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
ಗಂಗಾವತಿಯ ಹೇಮಗುಡ್ಡ ದುರ್ಗಮ್ಮ ದೇವಸ್ಥಾನದ ಬಳಿ 2024ರ ಅಕ್ಟೋಬರ್ 9 ರಂದು ದಸರಾ ಉತ್ಸವ ನಡೆಯುತ್ತಿದ್ದಾಗ, ಮೂವರು ಯುವಕರು ಯಮಹಾ ಬೈಕ್ ನಲ್ಲಿ ವ್ಹೀಲಿಂಗ್ ಮಾಡುತ್ತಿದ್ದರು. ಪೊಲೀಸರು ಇವರನ್ನು ಹಿಡಿಯಲು ಮುಂದಾದಾಗ ಯುವಕರು ಆಯತಪ್ಪಿ ನೆಲಕ್ಕೆ ಬಿದ್ದಿದ್ದರು. ಆಗ ಈ ಯುವಕರು ತಮ್ಮನ್ನು ರಕ್ಷಿಸಲು ಬಂದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ, ಅವರ ಮೊಬೈಲ್ ಫೋನ್ ಗಳನ್ನು ಕಿತ್ತುಕೊಂಡು ತುಂಗಭದ್ರಾ ನಾಲೆಗೆ ಎಸೆದಿದ್ದರು ಎಂಬ ಆರೋಪ ಇವರ ಮೇಲಿದೆ.