ಕಲಬುರಗಿ: ʼಕಲಬುರಗಿ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆ ಏನಿದೆ? ಈಗ ಮತ್ತೆ ಬರುತ್ತಿದ್ದಾರೆ ಏನಾದರೂ ಘೋಷಣೆ ಮಾಡುತ್ತಾರೆಯೇ? ಏನೂ ಘೋಷಣೆ ಮಾಡದೆ ಬಂದರೆ ಏನು ಪ್ರಯೋಜನ?ʼ ಎಂದು ರಾಜ್ಯ ಸಭೆ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಜಿಲ್ಲಾಡಳಿತ ಹಾಗೂ ಜಿಲ್ಲಾಪಂಚಾಯತಿ ವತಿಯಿಂದ ಆಯೋಜಿಸಲಾಗಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಹಾಗೂ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಕೇವಲ ರೇಲ್ವೆಗಳಿಗೆ ಹಸಿರು ಝಂಡಾ ತೋರಿಸಿದರೇ ಅಭಿವೃದ್ದಿ ಆದಂತಾಗುತ್ತದೆಯೇ? ಸಾವಿರಾರು ಕೋಟಿಯ ಯೋಜನೆಗಳಿಗೆ ಮೋದಿ ಹಸಿರುನಿಶಾನೆ ತೋರಿಸಲಿ ಅದು ಬಿಟ್ಟು ಬರೀ ರೇಲ್ವೆಗಳಿಗೆ ಝಂಡಾ ತೋರಿಸಿದರೆ ಏನರ್ಥ ಎಂದು ಟೀಕಿಸಿದ ಅವರು ವಾಡಿಯ ರೇಲ್ವೆ ಮೇಲ್ಸೇತುವೆ ಪ್ರಾರಂಭವಾಗಿ ವರ್ಷಗಳೇ ಕಳೆದರು ಇನ್ನೂ ಮುಗಿದಿಲ್ಲ ಎಂದರು.
ಕಲ್ಯಾಣ ಕರ್ನಾಟಕದ ಯಾವ ಜಿಲ್ಲೆಗಳಿಗೆ ಏನು ಮಾಡಿದ್ದಾರೆ? ಆದರೆ ಕಾಂಗ್ರೆಸ್ ಪಕ್ಷಕ್ಕೆ ಬೈಯುವುದು ಮಾತ್ರ ಬಿಟ್ಟಿಲ್ಲ. ನೀವು ಎಷ್ಟೇ ಬೈದರೂ ಪರವಾಗಿಲ್ಲ ಕೆಲಸ ಮಾಡಿ ತೋರಿಸಿಪ್ಪಾ ಮಾರಾಯ ಎಂದ ಖರ್ಗೆ ಏನು ಕೆಲಸ ಮಾಡದ ನಿಮಗೆ ಯಾಕೆ ಜನರು ಮತ ಹಾಕಬೇಕು ಎಂದು ಪ್ರಶ್ನಿಸಿದರು.
ರೈತರ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ದರ ನಿಗದಿ ಮಾಡಿ ಅವರ ಲಾಭ ದುಪ್ಪಟ್ಟು ಮಾಡುವೆಎಂದು ಬರೀ ಘೋಷಣೆ ಮಾಡಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಎಂ ಎಸ್ ಪಿ ಕಾನೂನುಬದ್ಧ ಮಾಡುತ್ತೇವೆ ಎಂದು ಖರ್ಗೆ ಹೇಳಿದರು. ಆದರೆ, ದಿಲ್ಲಿ ಗಡಿಯಲ್ಲಿ ರೈತರು ಪ್ರತಿಭಟನೆ ಕುಳಿತಿದ್ದಾರೆ. ಅವರ ಸಮಸ್ಯೆ ಬಗೆಹರಿಸುವುದು ಬಿಟ್ಟು ಅವರು ದಿಲ್ಲಿಗೆ ಬರದಂತೆ ತಡೆಯಲು ಮೋದಿ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಮಹಿಳೆಯರಿಗೆ ಮತ ಚಲಾಯಿಸುವ ಹಕ್ಕು ನೀಡಿದ್ದೇ ಕಾಂಗ್ರೆಸ್ ಪಕ್ಷ ಎಂದು ಖರ್ಗೆ ಈಗ ದೇಶದ ಆದಿವಾಸಿಗಳ ಕಲ್ಯಾಣಕ್ಕಾಗಿ ಯೋಜನೆಗಳನ್ನು ಹಮ್ಮಿಕೊಳ್ಳಲಿದ್ದೇವೆ. ಸರ್ಕಾರದ ಐದು ಗ್ಯಾರಂಟಿಗಳನ್ನು ಅವರು ನಿಭಾಯಿಸುತ್ತಿದ್ದಾರೆ. ಅದರ ಜೊತೆಗೆ ಜನಗಣತೆ ಹಾಗೂ ಸರ್ವೆ ಮಾಡಲಾಗುತ್ತದೆ. ಶಿಕ್ಷಣ ಹಾಗೂ ಆದಾಯ ದ್ವಿಗುಣ ಮಾಡಲು ಯೋಜನೆ ಹಾಕಿಕೊಳ್ಳುತ್ತಿದ್ದೇವೆ. ಯುವನಿಧಿ ಗ್ಯಾರಂಟಿ ಯೋಜನೆಯಡಿಯಲ್ಲಿ ಪದವಿ, ಡಿಪ್ಲೋಮ ಆದವರಿಗೆ ತರಬೇತಿ ನೀಡಿ ಒಂದು ಲಕ್ಷ ಸಹಾಯಧನ ನೀಡುತ್ತೇವೆ. ಅಲ್ಲದೇ ಖಾಲಿ ಇರುವ 30 ಲಕ್ಷ ಹುದ್ದೆಗಳನ್ನು ತುಂಬುತ್ತೇವೆ ಎಂದು ಭರವಸೆ ನೀಡಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಕಷ್ಟದ ಸಮಯದಲ್ಲಿ ಕೆಂದ್ರ ಸರ್ಕಾರ ನಮಗೆ ಸಹಾಯ ಮಾಡದಿದ್ದರೂ ಕೂಡಾರಾಜ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದರು.
ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ ಎಂದ ಶಿವಕುಮಾರ್ ಅಂತ ಪಕ್ಷದ ಚುಕ್ಕಾಣಿ ಹಿಡಿದಿರುವ ಖರ್ಗೆ ಸಾಹೇಬರು ನಿಮ್ಮ ಊರಿನವರು. ನೆಹರು, ಇಂದಿರಾ, ರಾಜೀವ್ ಗಾಂಧಿ ಅವರು ಕುಳಿತ ಜಾಗದಲ್ಲಿ ಕುಳಿತು ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ಇದು ಹೆಮ್ಮೆಯ ವಿಷಯ ಎಂದು ಹೊಗಳಿದರು.
ಜೆಡಿಎಸ್ ಹಾಗೂ ಬಿಜೆಪಿಯವರಿಗೆ ಕೇಳಿಕೊಳ್ಳುವುದು ಇಷ್ಟೇ, ಖರ್ಗೆ ಸಾಹೇಬರ ಕೈ ಬಲಪಡಿಸುವ ಮೂಲಕ ಋಣ ತೀರಿಸಬೇಕಾಗಿದೆ ಎಂದರು.
CAA, ಮಂದಿರ ಹೊರತುಪಡಿಸಿದರೆ, ಬಿಜೆಪಿಯವರಿಗೆ ಬೇರೆ ವಿಚಾರಗಳಿಲ್ಲ. ಧರ್ಮದಲ್ಲಿ ರಾಜಕಾರಣ ಇರಬಾರದು ಆದರೆ ರಾಜಕಾರಣದಲ್ಲಿ ಧರ್ಮ ಇರಬೇಕು. ಕಲಬುರಗಿ ಪುಣ್ಯದ ನಾಡು. ಎಲ್ಲ ಧರ್ಮದ ಜನರಿಗೆ ಸಮಾನವಾದ ಅವಕಾಶ ನೀಡಲಾಗಿದೆ ಎಂದರು.
ನಮ್ಮದು ನುಡಿದಂತೆ ನಡೆದ ಸರ್ಕಾರ. ಚುನಾವಣೆ ಮುನ್ನ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಮಾತು ಉಳಿಸಿಕೊಂಡಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್ ಹೇಳಿದರು.
ಕಲಬುರಗಿ ಜಿಲ್ಲೆಯನ್ನು ಮೆಡಿಕಲ್ ಹಬ್ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಕಲಬುರಗಿ ರೋಟಿ ಬ್ರ್ಯಾಂಡ್ ಬಿಡುಗಡೆ ಮಾಡಲಾಯಿತು.
ವೇದಿಕೆಯ ಮೇಲೆ ಸಿಎಂ ಸಲಹೆಗಾರ ಬಿ.ಆರ್. ಪಾಟೀಲ್, ಕೆಕೆಆರ್ ಡಿಬಿ ಅಧ್ಯಕ್ಷ ಅಜಯ್ ಸಿಂಗ್, ಶಾಸಕರಾದ ಎಂ ವೈ ಪಾಟೀಲ, ಕಮೀಜ್ ಫಾತಿಮಾ, ಅರವಿಂದ ಅರಳಿ, ತಿಪ್ಪಣ್ಣಪ್ಪ ಕಮಕನೂರು, ಅಲ್ಲಮಪ್ರಭು ಪಾಟೀಲ, ಚಂದ್ರಶೇಖರ ಪಾಟೀಲ್, ಮಜರ್ ಆಲಂ ಖಾನ್, ಜಗದೇವ ಗುತ್ತೇದಾರ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ರೇವುನಾಯಕ ಬೆಳಮಗಿ, ಸಿಇಓ ಭಂವರ ಸಿಂಗ್ ಮೀನಾ, ಪೊಲೀಸ್ ಕಮೀಷನರ್ ಆರ್ ಚೇತನ್, ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ, ಕೆಕೆಆರ್ ಟಿಸಿ ಎಂ ಡಿ ರಾಚಪ್ಪ ಸೇರಿದಂತೆ ಹಲವರಿದ್ದರು