ಆಷಾಢ ಮಾಸ ಮುಗಿದು ಶ್ರಾವಣ ಶುರುವಾಗಿದೆ. ಸಾಲು ಸಾಲು ಹಬ್ಬಗಳಿಗೆ ಕಾರಣವಾಗುವ ಶ್ರವಣ ಶುರುವಿಗು ಮುನ್ನವೇ ಮಾರುಕಟ್ಟೆಯಲ್ಲಿ ವಿವಿಧ ಹೂವಿನ ದರ ಏರಿಕೆ ಕಂಡಿದೆ.
ರಾಜ್ಯಾದ್ಯಂತ ಮಳೆ ಬೀಳುತ್ತಿದ್ದು, ಹೂ ಬೆಳೆಯುವ ಜಿಲ್ಲೆಗಳಿಗೂ ಇದು ಮಾರಕವಾಗಿ ಮಾರ್ಪಟ್ಟಿದೆ. ಒಂದೆಡೆ ಮಳೆಯಿಂದ ಹೂ ಬೆಳವಣಿಗೆಗೆ ತೊಂದರೆಯಾದರೆ, ಮತ್ತೊಂದೆಡೆ ಮಳೆಗೆ ಹೂ ಬೇಗ ಹಾಳಾಗುವ ಕಾರಣ ಬೆಳೆದ ಹೂವನ್ನು ಅವತ್ತೇ ಮಾರಾಟ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ.
ಕನಕಾಂಬರ ಹಾಗೂ ಕಾಕಡ ಹೂ ಗೊಂಚಲಿಗೆ 100-150 ರೂ. ಮಾರಾಟವಾಗುತ್ತಿತ್ತು. ಆದರೆ ಈಗ ದಿಢೀರ್ ಎಂದು 250ರ ಆಸು ಪಾಸು ದರ ನಡೆದಿದೆ. ಕೆ.ಜಿ ಕನಕಾಂಬರ 800-1000 ರೂ. ಇದ್ದರೆ, ಕಾಕಡ 800 ರೂ. ಕೆಜಿ ದರ ಕಂಡು ಬರುತ್ತಿದೆ. ಕೆ.ಜಿ. ಸೇವಂತಿ 500-600 ರೂ. ಮಾರಾಟ ಕಾಣುತ್ತಿದೆ.
40-50 ಕೆ.ಜಿ. ಮಾರಾಟ ಕಾಣುತ್ತಿದ್ದ ಗುಲಾಬಿ, ಇದೀಗ 80-100 ರೂ. ಮಾರಾಟ ಮಾಡಲಾಗುತ್ತಿದೆ. ಇದರ ಜತೆಗೆ 30 ರೂ. ಕೆ.ಜಿ. ಇದ್ದ ಚೆಂಡು ಹೂ 50 ರೂ.ಗೆ ಏರಿಕೆ ಕಂಡಿದೆ.
ರಾಜ್ಯದ ಹಲವು ಕಡೆಗಳಲ್ಲಿ ಹೆಚ್ಚಿನ ಮಳೆಯಾಗಿರುವುದು ಹೂವಿನ ದರ ಹೆಚ್ಚಳಕ್ಕೆ ಕಾರಣವಾಗಿದೆ. ಶ್ರಾವಣದ ವರಮಹಾಲಕ್ಷ್ಮಿ ಹಬ್ಬದವರೆಗೆ ಹೂವಿನ ದರದ ಏರಿಕೆ ಹೀಗೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.