ಬೆಂಗಳೂರು: ಇಂದು ರೆಬಲ್ ಸ್ಟಾರ್ ಅಂಬರೀಶ್ ಅವರಿಗೆ ಜನುಮದಿನ. ದೈಹಿಕವಾಗಿ ಇದ್ದಿದ್ದರೆ ಇಂದು ಅಭಿಮಾನಿಗಳು ಅವರ ಮನೆಯ ಮುಂದೆ ಜಮಾಯಿಸಿ, ಸಂಭ್ರಮ ಪಡುತ್ತಿದ್ದರು, ಜೋರಾಗಿ ಆಚರಿಸುತ್ತಿದ್ದರು. ಆದರೆ ಆ ವಿಧಿ ಬೇಗನೇ ಅಂಬರೀಶ್ ಅವರನ್ನು ಕರೆದುಕೊಂಡಿದೆ. ಅಂಬರೀಶ್ ಅವರ ಹುಟ್ಟುಹಬ್ಬಕ್ಕೆ ಸುಮಲತಾ ಅಂಬರೀಶ್ ಭಾವನಾತ್ಮಕವಾಗಿ ಶುಭಾಶಯ ಕೋರಿದ್ದಾರೆ. ಸ್ವರ್ಗದಲ್ಲಿರುವ ಅಂಬಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದಿದ್ದಾರೆ.
ದರ್ಶನ್ ಪ್ರತಿ ವರ್ಷ ಕೂಡ ಅಪ್ಪಾಜಿ ಅವರಿಗೆ ಶುಭಕೋರದೆ ಇರುವುದಿಲ್ಲ. ಈ ವರ್ಷವೂ ಬುಲ್ ಬುಲ್ ಸಿನಿಮಾದಲ್ಲಿ ಜೊತೆಗೆ ನಿಂತಿದ್ದ ಪೋಸ್ಟರ್ ಹಾಕಿ ಶುಭಕೋರಿದ್ದಾರೆ. ಸ್ಯಾಂಡಲ್ ವುಡ್ ಗಣ್ಯರು, ಅಭಿಮಾನಿಗಳೆಲ್ಲ ಇಂದು ಅಂಬರೀಶ್ ಅವರನ್ನು ನೆನೆದಿದ್ದಾರೆ.
ಇನ್ನು ಅಂಬರೀಶ್ ಅವರಿಗೆ ಮಂಡ್ಯದ ಗಂಡು ಎಂಬ ಹೆಸರಿದೆ. ಆ ಹೆಸರಿನ ಸಿನಿಮಾ ಕೂಡ ಮಾಡಿದ್ದರು. ನೆಚ್ಚಿನ ನಟನಿಗೆ ಬಿರುದು ಬಂದಾಗ ಅಭಿಮಾನಿಗಳ ಸಂತಸವಂತು ಮುಗಿಲು ಮುಟ್ಟುತ್ತೆ. ಅಷ್ಟಕ್ಕೂ ಅಂಬರೀಶ್ ಅವರಿಗೆ ಮಂಡ್ಯದ ಗಂಡು ಎಂದು ಬಿರುದು ಕೊಟ್ಟಿದ್ದು, ರೈತ ಹೋರಾಟಗಾರ, ಮಾಜಿ ಸಂಸದ ಜಿ.ಮಾದೇಗೌಡ ಅವರು.
ಜಿ.ಮಾದೇಗೌಡ ಅವರು ಅಂಬರೀಶ್ ಅವರಿಗೆ ಗುರು ಎನಿಸಿಕೊಂಡಿದ್ದರು. 1994ರಲ್ಲಿ ಅಂಬರೀಶ್ ಅವರು ಮಂಡ್ಯದ ಗಂಡು ಸಿನಿಮಾ ಮಾಡಿದರು. ಅಂಬಿ ಜೊತೆಗೆ ಬಿರುದು ಸೇರಿಕೊಳ್ಳುವುದಕ್ಕೆ ಇದು ಕೂಡ ಒಂದು ಕಾರಣವಾಯಿತು. ಊರು ಕೂಡ ಮಂಡ್ಯ. ಸಿನಿಮಾ ಕೂಡ ಮಂಡ್ಯದ ಗಂಡು. ಈ ಬಿರುದು ನೀಡಿದ ಮಾದೇಗೌಡ ಅವರು, ಅವರೇ ರಿವೀಲ್ ಕೂಡ ಮಾಡಿದ್ದರು. ಮಂಡ್ಯದಿಂದ ಎಷ್ಟೇ ಸ್ಟಾರ್ಸ್ ಗಳು ಬಂದರು ಮಂಡ್ಯದ ಗಂಡು ಬಿರುದು ಅಂಬರೀಶ್ ಅವರಿಗೆ ಮಾತ್ರ ಸೀಮಿತ.