ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಬೆಂಗಳೂರು ಪೊಲೀಸ್ ಕಮಿಷನರ್ ಮಹತ್ವದ ಪತ್ರಿಕಾಗೋಷ್ಠಿ ನಡೆಸಿದ್ದು, ಪ್ರಕರಣ ಕುರಿತಂತೆ ಅಧಿಕೃತ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಪ್ರಕರಣದ ತನಿಖೆ ಕುರಿತು ವಿವರಿಸಿದ ಅವರು, ಈವರೆಗೆ 17 ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ಕೂಲಂಕಷ ವಿಚಾರಣೆ ನಡೆಯುತ್ತಿದೆ. ತನಿಖೆಯನ್ನ ಎಸಿಪಿ ಮಟ್ಟದ ಅಧಿಕಾರಿಗೆ ನೀಡಲಾಗಿದೆ. ವಿಜಯನಗರ ಎಸಿಪಿ ತನಿಖೆ ನಡೆಸುತ್ತಿದ್ದಾರೆ. ಪ್ರತಿ ವಿಚಾರದ ಬಗ್ಗೆ ಪ್ರತ್ಯೇಕ ತಂಡ ರಚಿಸಿ ತನಿಖೆ. ಹಲವು ಇನ್ಸ್ ಪೆಕ್ಟರ್, ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. FSL ತಜ್ಞರು, ತಾಂತ್ರಿಕ ಪರಿಣಿತರು ಇದ್ದಾರೆ. ನಿಷ್ಪಕ್ಷಪಾತ ತನಿಖೆಯಿಂದ ಘಟನೆ ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.
ಪೊಲೀಸ್ ಪ್ರಾಮಾಣಿಕ ತನಿಖೆ, ಸಮಯ ಪ್ರಜ್ಞೆ, ಕರ್ತವ್ಯ ಪ್ರಜ್ಞೆಯಿಂದ ಘಟನೆ ಬೆಳಕಿಗೆ ಬಂದಿದೆ. ತ್ವರಿತಗತಿಯಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಇದೊಂದು ಹೀನ ಹೇಯ ಕೃತ್ಯ ಎಂದು ಹೇಳಿದ ಅವರು, ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಮೃತನ ಕುಟುಂಬಸ್ಥರಿಗೆ ನ್ಯಾಯ ಸಿಗಬೇಕು. ಸಮರ್ಥ ರೀತಿಯಲ್ಲಿ ತನಿಖೆ ನಡೆಯುತ್ತಿದೆ. ತಾರ್ಕಿಕ ಅಂತ್ಯಕ್ಕೆ ಹೋಗಲು ತಾಳ್ಮೆ , ಸಹನೆ ಅಗತ್ಯ ಎಂದು ಹೇಳಿದ್ದಾರೆ.
ಪ.ವಿಭಾಗದ ಡಿಸಿಪಿ ಗಿರೀಶ್ ಸಂಪೂರ್ಣ ವಿಚಾರಣೆಯನ್ನು ಮಾನಿಟರ್ ಮಾಡುತ್ತಿದ್ದಾರೆ. ಪ್ರತಿ ತಂಡಕ್ಕೆ ಓರ್ವ ಇನ್ಸ್ ಪೆಕ್ಟರ್ ನೇತೃತ್ವ ವಹಿಸಿದ್ದಾರೆ. ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಕೆಲಸ ಆಗುತ್ತಿದೆ. ಪ್ರಕರಣ ಸಂಬಂಧ ಊಹಾಪೋಹ ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಅವರು ಹೇಳಿದರು.