ಬೆಂಗಳೂರು ಗ್ರಾಮಾಂತರ: ಡಾ.ಮಂಜುನಾಥ್‌ ಮಣಿಸಲು ಡಿಕೆ ಸೋದರರ ಮೂರು ತಂತ್ರಗಳೇನು ಗೊತ್ತೆ?

Most read

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಡಿಕೆ ಕುಟುಂಬದಿಂದ ಕಿತ್ತುಕೊಳ್ಳಲು ಬಿಜೆಪಿ ಜೆಡಿಎಸ್‌ ಜಂಟಿಯಾಗಿ ನಡೆಸುತ್ತಿರುವ ಪ್ರಯತ್ನಗಳನ್ನು ವಿಫಲಗೊಳಿಸಲು ಡಿಕೆ ಬ್ರದರ್ಸ್‌ ಹೊಸ ಬಗೆಯ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ.

ಬಿಜೆಪಿಯಿಂದ ಡಾ.ಸಿ.ಎನ್.ಮಂಜುನಾಥ್‌ ಕಣಕ್ಕೆ ಇಳಿದಿದ್ದರೂ ಅವರು ಪರೋಕ್ಷವಾಗಿ ಜೆಡಿಎಸ್‌ ಅಭ್ಯರ್ಥಿಯೇ ಆಗಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ.ಸುರೇಶ್‌ ಸೋಲಿಸಲು ಬಿಜೆಪಿಗಿಂತ ಹೆಚ್ಚಾಗಿ ಜೆಡಿಎಸ್‌ ಮುಖಂಡರು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಡಿಕೆ ಬ್ರದರ್ಸ್‌ ಮೂರು ವಿಭಿನ್ನ ಕಾರ್ಯತಂತ್ರಗಳನ್ನು ರೂಪಿಸಿ ಚುನಾವಣಾ ಅಖಾಡದಲ್ಲಿ ಸಂಚಲನ ಮೂಡಿಸಿದ್ದಾರೆ.

  1. ರಾಮನಗರದಲ್ಲಿ ಕನ್ನಡ ಅಸ್ಮಿತೆಯ ಅಸ್ತ್ರ ಪ್ರಯೋಗ

ಮೊದಲನೆಯದಾಗಿ ಡಿ.ಕೆ.ಸುರೇಶ್‌ ಕನ್ನಡ ಅಸ್ಮಿತೆಯನ್ನು ಪಟ್ಟಾಗಿ ಹಿಡಿದಿದ್ದಾರೆ. ಕನ್ನಡ ಪೇಟಾ ಧರಿಸಿಯೇ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಬಳಿಕ ಕಾಂಗ್ರೆಸ್ ನಾಯಕರು ಕನ್ನಡ ಶಾಲು ಧರಿಸಿಯೇ ಬಹಿರಂಗ ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡಿಗರ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎನ್ನುವ ಮೂಲಕ ಕನ್ನಡ ಅಸ್ಮಿತೆಯ ದಾಳ ಡಿಕೆ ಬ್ರದರ್ಸ್ ಉರುಳಿಸಿದ್ದಾರೆ.

  1. ಡಾ. ಸಿ.ಎನ್. ಮಂಜುನಾಥರಿಗೆ ಮುಳುವಾದ ʻಸ್ಥಳೀಯರಲ್ಲʼ ಎಂಬ ಮಾನದಂಡ
    ಡಾ. ಮಂಜುನಾಥ ದೇವೇಗೌಡ ಅಳಿಯ ಎಂಬುದೊಂದೆ ಮಾನದಂಡ. ಬೆಂಗಳೂರು ಗ್ರಾಮಾಂತರ ಕ್ಷೇತ್ರದವರು ಅಲ್ಲ ಎಂದು ಬಿಂಬಿಸುವುದು ಡಿಕೆ ಸೋದರರ ಮತ್ತೊಂದು ರಣತಂತ್ರ. ರಾಮನಗರಕ್ಕೂ ಅವರಿಗೂ ಸಂಬಂಧವಿಲ್ಲ ಎಂದು ಜನರಿಗೆ ಮನದಟ್ಟು ಮಾಡಿಸುವ ಲೆಕ್ಕಾಚಾರದಕ್ಕು ಅವರು ತೊಡಗಿದ್ದಾರೆ. ನಾವು ರಾಮನಗರ ಜಿಲ್ಲೆಯ ಮಣ್ಣಿನ ಮಕ್ಕಳು. ಬೆಂಗಳೂರು ಗ್ರಾಮಾಂತರ ಅಭಿವೃದ್ಧಿಗೆ ನಾವು ಬದ್ದ ಎಂಬ ಸಂದೇಶ ರವಾನೆ ಮಾಡುತ್ತಿದ್ದಾರೆ. ರಾಮನಗರದ ಮಣ್ಣಿನ ಮಕ್ಕಳು ನಾವು ಎನ್ನುವ ಮೂಲಕ ಗ್ರಾಮೀಣ ಭಾಗದ ಮತ ಬ್ಯಾಂಕ್ ಭದ್ರಪಡಿಸುವ ಕಾರ್ಯತಂತ್ರ ಇದಾಗಿದೆ.
  2. ದೇವೇಗೌಡರ ಕುಟುಂಬದ ಕೊಡುಗೆಯೇನು?

ಚುನಾವಣಾ ಪ್ರಚಾರ ಸಂದರ್ಭದಲ್ಲಿ ಪ್ರಮುಖವಾಗಿ ಕ್ಷೇತ್ರಕ್ಕೆ ದೇವೇಗೌಡರ ಕುಟುಂಬದ ಕೊಡುಗೆಗಳೇನು ಎಂಬುದನ್ನು ಡಿಕೆ ಸೋದರರು ಪ್ರಸ್ತಾಪಿಸಲು ಮುಂದಾಗಿದ್ದಾರೆ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ , ಅನಿತಾ ಕುಮಾರಸ್ವಾಮಿ ಕೊಡುಗೆಗಳೇನು ಎಂಬ ಪ್ರಶ್ನೆಗಳನ್ನು ಅವರು ಮುಂದಿಡಲಿದ್ದಾರೆ. ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆಯಿಂದ ಎರಡು ಬಾರಿ ಸಿಎಂ ಆಗಿದ್ದರು. ಈ ಲೋಕಸಭಾ ಚುನಾವಣೆಯಲ್ಲಿ ಕರ್ಮ ಭೂಮಿ ಬದಲಿಸಿಕೊಂಡಿದ್ದಾರೆ. ಇವರನ್ನು ನೀವು ಒಪ್ಪುತ್ತೀರಾ ಎಂದು ಜನರ ಮುಂದೆ ಪ್ರಶ್ನೆ ಇಡುವುದು, ಮೇಕೆದಾಟು ಪಾದಯಾತ್ರೆ ಮಾಡುವಾಗ ಜೆಡಿಎಸ್‌ ಮೌನವಾಗಿ ಇದ್ದಿದ್ದನ್ನು ಪ್ರಚಾರದಲ್ಲಿ ಡಿಕೆ ಸೋದರರು ಪ್ರಸ್ತಾಪಿಸುವ ಉದ್ದೇಶ ಹೊಂದಿದ್ದಾರೆ.

More articles

Latest article